ಗುರುವಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರು ಪೂರ್ಣಿಮೆ:

| Published : Jul 23 2024, 12:37 AM IST

ಸಾರಾಂಶ

ಅರಿವಿನ ಪಥವನ್ನು ತೋರಿ ಪರಿಪೂರ್ಣ ಮನುಷ್ಯರನ್ನಾಗಿಸುವ ಗುರುವಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರು ಪೂರ್ಣಿಮೆ ಎಂದು ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಅರಿವಿನ ಪಥವನ್ನು ತೋರಿ ಪರಿಪೂರ್ಣ ಮನುಷ್ಯರನ್ನಾಗಿಸುವ ಗುರುವಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಗುರು ಪೂರ್ಣಿಮೆ ಎಂದು ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಡಾ.ಗಂಗಾಧರ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ನಡೆದ ಸಮಾರಂಭದ ಸಾನಿಧ್ಯ ವಹಿಸಿ, ಆರ್ಶಿವಚನ ನೀಡಿ ಮಾತನಾಡಿದ ಅವರು, ಗುರುವಿಗೆ ತನು-ಮನವನ್ನು ಅರ್ಪಿಸಿ, ಆತನೊಂದಿಗೆ ಭಕ್ತಿಯಿಂದ ಬೆರೆತುಕೊಂಡರೆ, ಗುರು ತನ್ನ ಜ್ಞಾನವನ್ನು ಧಾರೆಯೆರೆದು ಶಿಷ್ಯನನ್ನು ಉದ್ಧರಿಸುತ್ತಾನೆಂದು ಹೇಳಿದರು.ಭೌತಿಕವಾಗಿ, ಲೌಕಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಬ್ಬ ಗುರು ಶಿಷ್ಯರ ಪಾಲಿಗೆ ದಾರಿ ದೀಪವಾಗುತ್ತಾನೆ. ಅದಕ್ಕಾಗಿಯೇ ಗುರುಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರಾ ಎಂದು ಹೇಳಲಾಗಿದೆ ಎಂದರು.

ಗುರುವಿನ ಪಾದದಲ್ಲಿ ಪರಮಾತ್ಮನ ಆವಾಸವಾಗಿದೆ. ಅದಕ್ಕಾಗಿಯೇ ನಮ್ಮ ಪರಂಪರೆಯಲ್ಲಿ ಗುರುವಿನ ಪಾದವನ್ನು ಮುಟ್ಟಿ, ಶಿಷ್ಯಂದಿರು ನಮಸ್ಕರಿಸುವ ಪದ್ಧತಿ ರೂಢಿಯಲ್ಲಿದೆ. ತಂದೆ-ತಾಯಿಗಳ ಸಂಸ್ಕಾರದಿಂದ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳಲು ಆರಂಭವಾಗಿ, ಗುರುವಿನ ದೀಕ್ಷೆಯಾಗುವುದರೊಂದಿಗೆ ಆತ ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದರು.

ಪ್ರಾಂಶುಪಾಲ ಡಾ. ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಪ್ರತಿಯೊಬ್ಬ ಜೀವಿಯ ಅಂತರಂಗದ ಅರಿವಿನ ಕಿಡಿಯನ್ನು ಹೊತ್ತಿಸಿ ಸನ್ಮಾರ್ಗದಲ್ಲಿ ಸನ್ನಡತೆಯನ್ನು ಹೇಳಿಕೊಡುವ ಗುರುವಿನ ಶಕ್ತಿ ಅಗಾಧವಾದದು ಎಂದರು.

ಈ ವೇಳೆ ನರಸಣ್ಣಗೌಡ ರಾಯಚೂರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ತಾಲೂಕು ಅಧ್ಯಕ್ಷ ರಾಜಶೇಖರಗೌಡ ಚಾಮನಾಳ, ಉದ್ಯಮಿ ಬಸ್ಸುಗೌಡ ಬಿಳ್ಹಾರ್, ಹನುಮಾನ ಸೇಠ್ ಸುರಪುರ ಸೇರಿದಂತೆ ಸಹಸ್ರಾರು ಭಕ್ತರು ಇದ್ದರ