ಪಟ್ಟಣದ ಚಂದನ ಸ್ಕೂಲ್‌ನಲ್ಲಿ ಸ್ಕೂಲ್ ಚಂದನ ಹಾಗೂ ಎವಿಆರ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ದಿ. ಎಚ್.ಸಿ.ರಟಗೇರಿ ಗುರುಗಳ ಸ್ಮರಣಾರ್ಥ ಗುರುಸ್ಮರಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದ ಚಂದನ ಸ್ಕೂಲ್‌ನಲ್ಲಿ ಸ್ಕೂಲ್ ಚಂದನ ಹಾಗೂ ಎವಿಆರ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ದಿ. ಎಚ್.ಸಿ.ರಟಗೇರಿ ಗುರುಗಳ ಸ್ಮರಣಾರ್ಥ ಗುರುಸ್ಮರಣೆ ಕಾರ್ಯಕ್ರಮ ನಡೆಯಿತು.ಸ್ಕೂಲ್ ಚಂದನದಲ್ಲಿ ಸುಮಾರು 2 ದಶಕಗಳಿಗೂ ಅಧಿಕ ಕಾಲದಿಂದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಹಾಗೂ ಯುವ ಶಿಕ್ಷಕರಿಗೆ ಮಾರ್ಗದರ್ಶಕರಾಗಿದ್ದ ದಿ.ಎಚ್.ಸಿ.ರಟಗೇರಿ ಅವರ ಗುರುಸ್ಮರಣೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.
ನರರೋಗ ತಜ್ಞ ಡಾ. ಎಸ್.ಪಿ.ಬಳಿಗಾರ ಮಾತನಾಡಿ, ಗುರುಗಳು ಸಮಾಜದ ನಿರ್ಮಾತೃಗಳಾಗಿದ್ದು, ವಿದ್ಯಾರ್ಥಿಗಳ ಬದುಕಿಗೆ ಸರಿಯಾದ ದಿಕ್ಕು ತೋರಿಸುವ ಮಹತ್ತರ ಜವಾಬ್ದಾರಿ ಅವರ ಮೇಲಿದೆ. ಶಿಕ್ಷಕರು ಬೋಧನೆಯ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಶಿಸ್ತು, ಮಾನವೀಯ ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳ ಸಾಧನೆಯ ಹಿಂದೆ ಶಿಕ್ಷಕರ ಮಾರ್ಗದರ್ಶನ ಮತ್ತು ಪ್ರೇರಣೆ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.ದಿ. ಎಚ್.ಸಿ. ರಟಗೇರಿ ಗುರುಗಳ ಆದರ್ಶ, ಶೈಕ್ಷಣಿಕ ಸೇವೆ ಹಾಗೂ ವ್ಯಕ್ತಿತ್ವವನ್ನು ಸ್ಮರಿಸುವ ಇಂತಹ ಕಾರ್ಯಕ್ರಮಗಳು ಇಂದಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಗುರುಗಳ ಸಾಧನೆ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮಾಜದ ಕರ್ತವ್ಯವಾಗಿದೆ ಎಂದರು.
ನಿವೃತ ನ್ಯಾಯಾಧೀಶ ಡಿ.ವೈ. ಬಸಾಪುರ ಮಾತನಾಡಿ, ಶಿಕ್ಷಕ ವೃತ್ತಿಗೆ ಇರುವ ಅಪಾರ ಗೌರವಕ್ಕೆ ಮೆರಗು ಕೊಟ್ಟವರು ದಿ. ಎಚ್.ಸಿ. ರಟಗೇರಿ ಗುರುಗಳು, ತಮ್ಮ ಹುದ್ದೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದರ ಜೊತೆ ಚಂದನ ಶಾಲೆಗೆ ಯಾವುದೇ ಸಂಬಳವಿಲ್ಲದೆ ಸುಮಾರು ಎರಡು ದಶಕಗಳಿಗೂ ಹೆಚ್ಚು ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಗುರುವಿನ ಮಹತ್ವವನ್ನು ಸಾರಿದ್ದಾರೆ ಅಂತಹ ಶ್ರೇಷ್ಠ ಗುರುವಿನ ಕೈಯಲ್ಲಿ ಶಿಕ್ಷಣ ಪಡೆದ ನಾವೆಲ್ಲರೂ ಧನ್ಯರು ಎಂದರು.ಈ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಎಕ್ಸ್‌ಲೆನ್ಸ್ ಪ್ರಶಸ್ತಿ ಹಾಗೂ ಶೈಕ್ಷಣಿಕ ಮತ್ತು ಇತರ ಸಾಧನೆಗಳ ಮೂಲಕ ಗಮನ ಸೆಳೆದ ಇಬ್ಬರು ವಿದ್ಯಾರ್ಥಿಗಳಿಗೆ ಎಕ್ಸ್‌ಲೆನ್ಸ್ ಸ್ಟೂಡೆಂಟ್ಸ್ ಅವಾರ್ಡ್ ನೀಡಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಟಿ.ಈಶ್ವರ ವಹಿಸಿದ್ದರು. ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿ, ಗಿರಿಜಾ ಈಶ್ವರ, ಸರಸ್ವತಿ ರಟಗೇರಿ, ಡಾ. ವಿನೋದ ರಟಗೇರಿ, ರಮೇಶ ರಟಗೇರಿ, ಶಿವಾನಂದ ರಟಗೇರಿ, ಪ್ರಾಂಶುಪಾಲ ರಾಮು ಭಾವನವರ, ವೀರಣ್ಣ ಶೆಟ್ಟರ್, ಬಸಪ್ಪ ಹಲಗೋಡ, ಶಿವಾನಂದ ಬಡಿಗೇರ, ಇಬ್ರಾಹಿಂಸಾಬ ನಧಾಪ್, ಸಿದ್ಧಲಿಂಗೇಶ ಮರಿಗೌಡರ, ಭೀಮಶಿ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಾದ ಪ್ರವೀಣ, ಪ್ರಿಯಾಂಕ, ವಚನಾ, ಜಯರಾಜ ನಿರೂಪಿಸಿದರು.