ಸನ್ಮಾರ್ಗದಲ್ಲಿ ಸಾಗಲು ಗುರುವಿನ ಅನುಗ್ರಹ ಅಗತ್ಯ: ಗಂಗಾಧರ ಶ್ರೀಗಳು

| Published : Mar 20 2024, 01:19 AM IST

ಸನ್ಮಾರ್ಗದಲ್ಲಿ ಸಾಗಲು ಗುರುವಿನ ಅನುಗ್ರಹ ಅಗತ್ಯ: ಗಂಗಾಧರ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸಾರಿಕ ಜೀವನದಲ್ಲಿ ತೊಡಗಿಸಿ ಕೊಂಡಿರುವ ಪ್ರತಿಯೊಬ್ಬ ಮನುಷ್ಯರು ಕೇವಲ ಸಂಸಾರಕ್ಕೆ ಮಾತ್ರ ಅಂಟಿಕೊಳ್ಳಬಾರದು. ಸಾಂಸಾರಿಕ ಜೀವನದಲ್ಲಿ ಸದ್ಗತಿಯನ್ನು ಪಡೆಯಬೇಕಾದಲ್ಲಿ ಪ್ರತಿಯೊಬ್ಬರಿಗೂ ಗುರುವಿನ ಅವಶ್ಯಕತೆಯಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ಪ್ರತಿಯೊಬ್ಬರು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಗುರುವಿನ ಅನುಗ್ರಹದೊಂದಿಗೆ ಸನ್ಮಾರ್ಗದಲ್ಲಿ ಸಾಗಬೇಕೆಂದು ಅಬ್ಬೆತುಮಕೂರಿನ ಪೀಠಾಧಿಪತಿ ಡಾ ಗಂಗಾದರ ಸ್ವಾಮೀಜಿ ಹೇಳಿದರು.

ಅಬ್ಬೆತುಮಕೂರಿನಲ್ಲಿ ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಶಿಬಿರ ಮತ್ತು ಗುರು ಶಿಷ್ಯರ ಸಮಾಗಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಒಳ್ಳೆಯ ಸಂಸ್ಕಾರವಂತರಾಗಿ ರೂಪುಗೊಳ್ಳಬೇಕೆಂದರು.

ಸಾಂಸಾರಿಕ ಜೀವನದಲ್ಲಿ ತೊಡಗಿಸಿ ಕೊಂಡಿರುವ ಪ್ರತಿಯೊಬ್ಬ ಮನುಷ್ಯರು ಕೇವಲ ಸಂಸಾರಕ್ಕೆ ಮಾತ್ರ ಅಂಟಿಕೊಳ್ಳಬಾರದು. ಸಾಂಸಾರಿಕ ಜೀವನದಲ್ಲಿ ಸದ್ಗತಿಯನ್ನು ಪಡೆಯಬೇಕಾದಲ್ಲಿ ಪ್ರತಿಯೊಬ್ಬರಿಗೂ ಗುರುವಿನ ಅವಶ್ಯಕತೆಯಿದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಅನುಭಾವಿಗಳ ಮಾತಿನಂತೆ ಗುರುವಿಗೆ ಭೌತಿಕವಾಗಿ ಗುಲಾಮನಾಗುವುದಲ್ಲ. ಗುರುವಿನ ಅರಿವಿಗೆ ಗುಲಾಮನಾದಾಗ ಗುರು ತನ್ನೆಲ್ಲ ತತ್ವವನ್ನು ಶಿಷ್ಯನಿಗೆ ಧಾರೆಯೆರೆಯುವುದರ ಮೂಲಕ ಅವನ ಬದುಕನ್ನು ಉದ್ಧರಿಸುತ್ತಾನೆ ಎಂದರು.

ಯುವ ಮುಖಂಡ ಮಹೇಶಗೌಡ ಮುದ್ನಾಳ ಮಾತನಾಡಿ, ಅಬ್ಬೆತುಮಕೂರಿನ ಶ್ರೀಗಳು ಸಮಸ್ತ ಭಕ್ತ ಜನರಿಗೆ ಸೂಕ್ತ ಮಾರ್ಗದರ್ಶನ ಮಾಡಿ, ಒಳ್ಳೆಯ ಪಥದಲ್ಲಿ ಸಾಗುವಂತೆ ನೀತಿಯನ್ನು ಬೋಧಿಸುತ್ತಾರೆಂದು ಹೇಳಿದರು.

ನಗರಸಭೆಯ ಮಾಜಿ ಅಧ್ಯಕ್ಷ ಸುರೇಶ ಅಂಬಿಗೇರ ಮತ್ತು ಯಾದಗಿರಿ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಅಧ್ಯಕ್ಷ ಅವಿನಾಶ ಜಗನ್ನಾಥ ಮಾತನಾಡಿದರು.

ಗುರುನಾಥ ಮಹಾರಾಜರು, ಆನಂದಶಾಸ್ತ್ರಿ, ಜಯಶ್ರೀದೇವಿ, ಮಲ್ಲಿಕಾರ್ಜುನ ಶಾಸ್ತ್ರಿ, ವಿದ್ಯಾವತಿ ತಾಯಿ ಚನ್ನಬಸವ ಶಾಸ್ತ್ರಿ, ಬಸವಶಾಸ್ತ್ರಿ ಸಿದ್ದರಾಮ ದೇವರು, ಅಮರಯ್ಯ ಸ್ವಾಮಿ, ವಿಶ್ವರಾಧ್ಯ ಶಾಸ್ತ್ರಿ ಮಲ್ಲಣ್ಣ ಶರಣರು ಮಾತನಾಡಿದರು.