ಕನ್ನಡಪ್ರಭವಾರ್ತೆ ಶನಿವಾರಸಂತೆ

ಕುಲ ಗುರುಗಳು ಹೇಳಿಕೊಟ್ಟ ಸಂಸ್ಕೃತಿ ಸಂಸ್ಕಾರ ಅಡಿಪಾಯದಲ್ಲಿ ನಾವು ಮುನ್ನಡೆದರೆ ಮಾತ್ರ ಸಮುದಾಯವೊಂದು ಬೆಳೆಯಲು ಸಾಧ್ಯವಾಗುತ್ತದೆ ಎಂದು ಆದಿಚುಂಚನಗಿರಿ ಹಾಸನ ಮತ್ತು ಕೊಡಗು ಶಾಖಾ ಮಠದ ಶ್ರೀ ಶಂಬುನಾಥ ಸ್ವಾಮೀಜಿ ಹೇಳಿದರು.

ಅವರು ಶನಿವಾರಸಂತೆ ಒಕ್ಕಲಿಗರ ನೂತನ ಸಂಘದ ಉದ್ಘಾಟನೆ ಮತ್ತು ಚಿನ್ನಳ್ಳಿಯಲ್ಲಿ ನಿರ್ಮಾಣವಾಗಲಿರುವ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಪಟ್ಟಣದ ಯಶಸ್ವಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಆದಿಚುಂಚನಗಿರಿ ಸಂಸ್ಥಾನದ ಮೂಲ ಗುರುಗಳ ಕೃಪಾಕಟಾಕ್ಷ ಮತ್ತು ಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಕುಲದ ಬೆಳವಣಿಗೆ ಮತ್ತು ಸಮಾಜದ ಬೆಳವಣಿಗೆಗೆ ಮಾಡಿಕೊಟ್ಟಿರುವ ದೂರದೃಷ್ಟಿ, ಮಾರ್ಗದರ್ಶನದ ದಾರಿಯಲ್ಲಿ ಒಕ್ಕಲಿಗ ಸಮುದಾಯ ಮುನ್ನಡೆಯಬೇಕಿದೆ. ಅಲ್ಲದೆ ಬೆಂಗಳೂರು ನಿರ್ಮಿಸಿದ ಕೆಂಪೇಗೌಡರ ಆದರ್ಶ, ಚಿಂತನೆಗಳು ಹಾಗೂ ಸಮಾಜದ ಬೆಳವಣಿಗೆಯ ಚಿಂತನೆಯನ್ನು ಕುಲ ಬಾಂಧವರು ಬೆಳೆಸಿಕೊಂಡರೆ ಒಕ್ಕಲಿಗರ ಸಂಘ ಮತ್ತು ಸಂಘಟನೆ ಹಾಗೂ ಸಮುದಾಯವೂ ಬೆಳೆಯುತ್ತದೆ ಎಂದು ಹೇಳಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವಿಂದ್ರ ಮಾತನಾಡಿ-ಬೆಂಗಳೂರು ನಿರ್ಮಾಣಕರ್ತ ಕೆಂಪೇಗೌಡರು, ಆದಿಚುಂಚನಗಿರಿ ಸಂಸ್ಥಾನ ಮಠ, ಮಾಜಿ ಪ್ರಧಾನಿ ದೇವೇಗೌಡ, ಎಸ್.ಎಂ.ಕೃಷ್ಣರಂತಹ ರಾಜಕಿಯ ಕಲಿಗಳು ಇನ್ನು ಮುಂತಾದವರು ಒಕ್ಕಲಿಗ ಸಮುದಾಯದಲ್ಲಿ ಜನಿಸಿರುವುದು ನಮಗೆ ಹೆಮ್ಮೆಯಾಗುತ್ತದೆ ಎಂದರು.ರಾಜ್ಯ ಒಕ್ಕಲಿಗರ ಸಂಘವು ಸಮುದಾಯದ ವಿದ್ಯಾರ್ಥಿ ನಿಲಯ ಮತ್ತು ಸಂಘದ ಬೆಳವಣಿಗೆಗೆ ಸರ್ಕಾರದಿಂದ ೧೦ ಕೋಟಿ ರು. ಅನುದಾನ ನೀಡಿದೆ. ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಒಕ್ಕಲಿಗ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸಂಘಟನೆಯ ಬೆಳವಣಿಗೆಗೆ ಇಲ್ಲಿ ಸಂಘದ ಅವಶ್ಯಕತೆ ಇತ್ತು ಈಗ ಇದು ಅಸ್ತಿತ್ವಕ್ಕೆ ಬಂದಿರುವುದು ಶ್ಲಾಘನಿಯ ಎಂದರು

ಮಾಜಿ ಶಾಸಕ ಮತ್ತು ಸಕಲೇಶಪುರ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎಂ ವಿಶ್ವನಾಥ್ ಮಾತನಾಡಿ-ಸಂಘ, ಸಂಘಟನೆ ಪ್ರಬಲವಾದರೆ ಸಮೂದಾಯವೂ ಪ್ರಬಲಗೊಳ್ಳುತ್ತದೆ ಎಂದರು.

ಒಕ್ಕಲಿಗರ ಸಂಘದ ಹಾಸನ ಜಿಲ್ಲಾಧ್ಯಕ್ಷ ಮುದ್ದೇಗೌಡ, ಕೊಡಗು ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ, ಸಕಲೇಶಪುರ ಮಾಜಿ ತಾ.ಪಂ.ಅಧ್ಯಕ್ಷ ನಾಗರಾಜ್ ಮಾತನಾಡಿದರು. ಶನಿವಾರಸಂತೆ ಒಕ್ಕಲಿಗರ ಸಂಘದ ಅಧ್ಯಕ್ಷ ಕೇಶವೇಗೌಡ ಅಧ್ಯಕ್ಷತೆವಹಿಸಿದ ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಹರೀಶ್‌ಕುಮಾರ್, ಒಕ್ಕಲಿಗ ಪ್ರಮುಖರಾದ ವಿನೋದ್‌ಚಂದ್ರ, ಚೈತ್ರ, ಮುತ್ತಣ್ಣ, ಗಿರೀಶ್ ಮಲ್ಲಪ್ಪ, ಭರತ್‌ಕುಮಾರ್, ಚಂದ್ರಿಕಾಕುಮಾರ್ ಇನ್ನು ಮುಂತಾದ ಪ್ರಮುಖರು ಇದ್ದರು.