ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗುರುಗಳ ಮಹತ್ವವನ್ನು ವಿಶ್ವಕ್ಕೆ ಸಾರಿದ ಕೀರ್ತಿ ಭಾರತದ್ದು. ಭಾರತದಲ್ಲಿ ಗುರು ಪರಂಪರೆಗೆ ಅತ್ಯುನ್ನತ ಸ್ಥಾನವಿದೆ ಎಂದು ನಿವೃತ್ತ ಉಪ ಪ್ರಾಂಶುಪಾಲ ಡಿ.ರಾಜೇಗೌಡ ಹೇಳಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 1994-95ನೇ ಸಾಲಿನ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ದಾರ್ಶನಿಕರು ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದು ಹೇಳುವ ಮೂಲಕ ಗುರು-ಶಿಷ್ಯ ಪರಂಪರೆಗೆ ಮಹತ್ವ ತಂದು ಕೊಟ್ಟಿದ್ದಾರೆ ಎಂದರು.
ವಿದ್ಯಾರ್ಥಿಗಳು ತಮಗೆ ದಾರಿದೀಪವಾಗಿರುವ ಗುರುಗಳನ್ನು 30 ವರ್ಷವಾದರು ಕೂಡಾ ಮರೆಯದೆ ಜ್ಞಾಪಕದಲ್ಲಿಟ್ಟುಕೊಂಡು ಗೌರವಿಸುತ್ತಿರುವುದು ಉತ್ತಮ ಕೆಲಸ. ಗುರುಗಳನ್ನು ಒಬ್ಬ ಶಿಷ್ಯ ಉತ್ತಮ ಸ್ಥಾನದಲ್ಲಿದ್ದಾನೆ ಎಂದು ತಿಳಿದರೆ ಹೆಚ್ಚು ಸಂತೋಷ ಪಡುತ್ತಾನೆ. ಇವನು ನನ್ನ ಶಿಷ್ಯ ಎಂದು ಎದೆಯುಬ್ಬಿಸಿ ಹೇಳುತ್ತಾನೆ ಎಂದರು.ನಿವೃತ್ತ ಶಿಕ್ಷಕ ಸಣಬ ಯೋಗಾನರಸಿಂಹೇಗೌಡ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದರೆ ಅದನ್ನು ನೋಡುವ ಗುರು ಧನ್ಯನಾಗುತ್ತಾನೆ ಎಂದರು.
ಪ್ರಸ್ತುತ ನೀವುಗಳು ಕೂಡಾ ಪ್ರಾಂಶುಪಾಲ, ಉಪನ್ಯಾಸಕ, ಶಿಕ್ಷಕ, ರೈತ, ಶಿಕ್ಷಣ ಸಂಸ್ಥೆ ಸ್ಥಾಪಕ, ವಕೀಲ, ಸಮಾಜ ಸೇವಕರಾಗಿ ಸಮಾಜದಲ್ಲಿ ಗಣ್ಯರಾಗಿದ್ದೀರಿ. ಅಂದು ನಿಮ್ಮನ್ನು ತಿದ್ದಿ, ತೀಡಿ, ಮಾತಿನ ಏಟಿನ ಮೂಲಕ ನಿಮ್ಮನ್ನು ಶಿಕ್ಷಿಸಿದ್ದಕ್ಕೆ ಇಂದು ನಮಗೆಲಲರಿಗೂ ಹೆಮ್ಮೆಯಾಗಿದೆ ಎಂದರು.
ಇದೇ ವೇಳೆ ಅಂದಿನ ಶಿಕ್ಷಕರಾದ ಬಂಡಿಹೊಳೆ ರಾಮೇಗೌಡ, ಎಚ್.ಟಿ.ಗೋಪಾಲ್, ಸಣ್ಣತಮ್ಮೇಗೌಡ, ರಂಗರಾಜು, ಕೆ.ಮಾದೇಗೌಡ, ರವಿಕುಮಾರ್, ಎಚ್.ಟಿ.ಜಾನಕಿ ಸೇರಿದಂತೆ ಹಲವರನ್ನು ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸಿದರು.
ಕಾರ್ಯಕ್ರಮದ ರೂವಾರಿಗಳಾದ ಹೊಸಹೊಳಲಿನ ಎಚ್.ಜಿ.ಲತಾ, ಯೋಗೇಶ್, ರಾಣಿ, ಕಾಂತರಾಜು, ಅಮ್ಜದ್‌ಖಾನ್, ವಿಜಯ್‌ಕುಮಾರ್, ರಾಜಶೇಖರ್, ವರದರಾಜ, ಪ್ರದೀಪ್, ಸತೀಶ್, ಶ್ರೀಧರ್, ಸಿದ್ದರಾಜು, ರವಿಕುಮಾರ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು ಸೇರಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.