ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಅರ್ಜಿ ಹಾಕಿ ಪಡೆಯುವ ಈ ಕಾಲದಲ್ಲಿ, ಯಾವುದೇ ಅರ್ಜಿ ಶಿಫಾರಸು, ಹಣ ಜಾತಿಗೆ ಮನ್ನಣೆ ನೀಡಿದೆ ಎಲೆ ಮರೆಯ ಕಾಯಿಯಂತೆ ಪ್ರತಿಭಾವಂತ ಶಿಕ್ಷಕರನ್ನು ಗೌರವಿಸುವ ಪರಂಪರೆ ಶ್ರೇಷ್ಠ.
ಹೂವಿನಹಡಗಲಿ: ಗುರುವಿನ ಸ್ಥಾನ ಎಲ್ಲದಕ್ಕಿಂತ ದೊಡ್ಡದಾಗಿದ್ದು ಶಿಕ್ಷಕರನ್ನು ಗೌರವದಿಂದ ಕಾಣಬೇಕೆಂದು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಜಿ ಮನೋಹರ್ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ, ಇಲ್ಲಿನ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ 28ನೇ ವರ್ಷದ ಡಾ. ರಾಧಾಕೃಷ್ಣನ್ ಸ್ಮರಣಾರ್ಥ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ ಅರ್ಜಿ ಹಾಕಿ ಪಡೆಯುವ ಈ ಕಾಲದಲ್ಲಿ, ಯಾವುದೇ ಅರ್ಜಿ ಶಿಫಾರಸು, ಹಣ ಜಾತಿಗೆ ಮನ್ನಣೆ ನೀಡಿದೆ ಎಲೆ ಮರೆಯ ಕಾಯಿಯಂತೆ ಪ್ರತಿಭಾವಂತ ಶಿಕ್ಷಕರನ್ನು ಗೌರವಿಸುವ ಪರಂಪರೆ ಶ್ರೇಷ್ಠ ಎಂದು ಪ್ರಶಂಸಿಸಿದರು.ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರತಿಭೆ ಗುರುತಿಸಿದ್ದು ಒಬ್ಬ ಗುರು. ಸ್ವಾಮಿ ವಿವೇಕಾನಂದ, ಅರಿಸ್ಟಾಟಲ್ ಮೊದಲಾದ ಮಹನೀಯರು ಪ್ರಖ್ಯಾತರಾದದ್ದು ಗುರುವಿನ ಅನುಗ್ರಹದಿಂದ ಎಂದು ಹೇಳಿದರು.
ಹರಪನಹಳ್ಳಿ, ಹೂವಿನಹಡಗಲಿ ಸಾಹಿತ್ಯ ಸಾಂಸ್ಕೃತಿಕವಾಗಿ ಜೀವಂತವಾಗಿರುವುದು ಶ್ರೇಷ್ಠ ಹಾಸ್ಯ ಸಾಹಿತಿ ಬೀಚಿ ಅವರ ವಿಚಾರ ಬದುಕು ಬರಹಗಳಿಂದ ಎಂದ ಅವರು, ಸತತ 28 ವರ್ಷ ನಿರಂತರವಾಗಿ ಉತ್ತಮ ಶಿಕ್ಷಕರನ್ನು ಗೌರವಿಸುವ ಬಳಗದ ಕಾರ್ಯವೈಖರಿ ಶ್ಲಾಘನೀಯ ಎಂದು ಬಣ್ಣಿಸಿದರು.ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ ಮಾತನಾಡಿ, ಶಿಕ್ಷಕರನ್ನು ಗೌರವಿಸಿದರೆ ಸಮಾಜವನ್ನು ಗೌರವಿಸಿದಂತೆ. ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ. ಬಳಗದ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದಾಗಿ ಹೇಳಿದರು.
ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಹಿರಿಯ ಸದಸ್ಯ ಬೀರಬ್ಬಿ ಬಸವರಾಜ, ಶಾಖಾ ಗ್ರಂಥಾಲಯ ಆಧಿಕಾರಿ ಮಂಜುನಾಥ ಭೋವಿ, ಜಿಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷ ಕುರಿ ಮಂಜುನಾಥ, ಹರಪನಹಳ್ಳಿ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರತಿನಿಧಿ ಷರೀಫ್ ಎಸ್ ಮಾತನಾಡಿದರು. 2026 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಎಂ. ಶಿವಪ್ರಕಾಶ್ (ಪ್ರಾಥಮಿಕ), ಎನ್. ಹಾಲೇಶ್ (ಪ್ರೌಢ), ಬಸೆಟ್ಟಿ ಪ್ರಕಾಶ್ (ಕಾಲೇಜು) ಗಿರಿಜಮ್ಮ ಅಂಗಡಿ (ಗ್ರಂಥಾಲಯ) ನೀಡಿ ಗೌರವಿಸಲಾಯಿತು.ಬೀಚಿ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಈ ಹಿಂದೆ ಗ್ರಂಥಾಲಯ ಅಧಿಕಾರಿಗಳಾಗಿದ್ದ ಷರಾಫ್ ಕೃಷ್ಣಮೂರ್ತಿ, ಮಜ್ಜಿಗಿ ಬಸವರಾಜ, ವೈ.ಜಿ. ಅಂಗಡಿ, ಜನಾರ್ದನ ಶೆಟ್ಟಿ ಬಸವರಾಜ ಕೊಳ್ಳಿ ಹಾಗೂ ಇಂದಿನ ಮಂಜುನಾಥ ಭೋವಿ, ಬಿ. ನಾರಾಯಣ್ ದಾಸ್ ಅವರ ಸಹಕಾರ ಸ್ಮರಿಸಿದರು.
ಪ್ರಾಚಾರ್ಯ ಕೋರಿ ಹಾಲೇಶ, ಶಾಖಾ ಗ್ರಂಥಾಲಯಾಧಿಕಾರಿ ಬಿ. ನಾರಾಯಣ್ ದಾಸ್, ಸಿಆರ್‌ಪಿ ವೀರೇಶ್ ಬಗಲಿ ಇತರರು ಉಪಸ್ಥಿತರಿದ್ದರು.ಚಂದನ ಕಲಾ ಸಂಸ್ಥೆಯ ಎಂ.ಪಿ.ಎಂ. ಪ್ರಶಾಂತ್, ಕನ್ನಡ ಗೀತೆ ಹಾಡಿದರು. ಉಪನ್ಯಾಸಕ ಎಚ್.ಕೆ. ಮಹೇಶ, ಎಂ. ದಯಾನಂದ, ಶಂಕರ್ ಬೆಟಗೇರಿ, ನಾಗರಾಜ್ ಮಲ್ಕಿಒಡೆಯರ್, ಬಿಚ್ಚುಗತ್ತಿ ಖಾಜಾ ಹುಸೇನ್ ನಿರ್ವಹಿಸಿದರು. ಬಳಗದ ಸದಸ್ಯರು ಶಿಕ್ಷಣ ಪ್ರೇಮಿಗಳು ಗ್ರಂಥಾಲಯ ಓದುಗರು ಭಾಗವಹಿಸಿದ್ದರು.