ಅದ್ಧೂರಿ ನಡೆದ ಗುರು ಶಂಕರ ಭಗವತ್ಪಾದರ ಜಯಂತಿ

| Published : May 04 2025, 01:30 AM IST

ಸಾರಾಂಶ

ಹಿಂದೂ ಧರ್ಮದ ಉಳಿವಿಗಾಗಿ ಮತ್ತು ಅಸ್ತಿತ್ವಕ್ಕೆ ಶಂಕರಾಚಾರ್ಯರು ಹಗಲಿರುಳು ಶ್ರಮಿಸಿದ್ದು, ಅವರ ಪ್ರಯತ್ನವು ಅತ್ಯಂತ ಮಹತ್ವದ್ದಾಗಿದೆ ಎಂದು ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ ಹೇಳಿದರು.

ಗಜೇಂದ್ರಗಡ:ಹಿಂದೂ ಧರ್ಮದ ಉಳಿವಿಗಾಗಿ ಮತ್ತು ಅಸ್ತಿತ್ವಕ್ಕೆ ಶಂಕರಾಚಾರ್ಯರು ಹಗಲಿರುಳು ಶ್ರಮಿಸಿದ್ದು, ಅವರ ಪ್ರಯತ್ನವು ಅತ್ಯಂತ ಮಹತ್ವದ್ದಾಗಿದೆ ಎಂದು ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ ಹೇಳಿದರು.

ಪಟ್ಟಣದ ಶಿವಾಜಿಪೇಟೆಯ ಪಾಂಡುರಂಗ ದೇವಸ್ಥಾನದಲ್ಲಿ ಶುಕ್ರವಾರ ಬ್ರಾಹ್ಮಣ ಸಮಾಜ ಸೇವಾ ಸಮಿತಿ ವತಿಯಿಂದ ಗುರು ಶಂಕರ ಭಗವತ್ಪಾದರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸನಾತನ ಧರ್ಮ ಜಾಗೃತಿಯಾಗಲು ಧರ್ಮ ಕಾರ್ಯ ಅವಶ್ಯಕತೆಯಾಗಿದೆ. "ವೇದೋಖಿಲೋ ಧರ್ಮ ಮೂಲಂ " ಎನ್ನುವಂತೆ ಎಲ್ಲ ಧರ್ಮಗಳಿಗೂ ವೇದವೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಉಳಿಸಿ-ಬೆಳೆಸಲು ಮುಂದಾಗಬೇಕು ಎಂದ ಅವರು, ಅವಸಾನದ ಅಂಚಿನಲ್ಲಿದ್ದ ಸನಾತನ ಧರ್ಮವನ್ನು ಅನೇಕ ಅಡ್ಡಿ ಆತಂಕಗಳ ಮಧ್ಯ ಪುನರುತ್ಥಾನ ಮಾಡಬೇಕೆಂದು ಶಂಕರಾಚಾರ್ಯರು ಸಂಕಲ್ಪಿಸಿದರು. ಅಲ್ಲದೆ ಅವರು ದೇಶಾದ್ಯಂತ ಕಾಲ್ನಡಿಗೆಯಲ್ಲಿ ಸಂಚರಿಸಿ ವೇದ, ಉಪನಿಷತ್‌ಗಳ ವಿರುದ್ಧದ ದುರ್ಮತಗಳನ್ನು ಖಂಡಿಸಿ, ಸನಾತನ ಧರ್ಮ ಜಾಗೃತಿಯನ್ನು ಮೂಡಿಸಿದರು. ಅವರು ಭಗವದ್ಗೀತೆ, ದಶೋಪನಿಷತ್ತುಗಳು ಮತ್ತು ವೇದವ್ಯಾಸ ಮಹರ್ಷಿಗಳ ಬ್ರಹ್ಮಸೂತ್ರಗಳಿಗೆ ಅದ್ಭುತವಾದ ಭಾಷ್ಯಗಳನ್ನು ರಚಿಸಿ ಅದ್ವೈತ್ ಸಿದ್ಧಾಂತ ಪ್ರತಿಪಾದಿಸಿದರು. ಇವರು ರಚಿಸಿದ ಸೌದರ್ಯ ಲಹರಿ, ಲಲಿತಾ ಸಹಸ್ರ ನಾಮಾವಳಿ ಮುಂತಾದ ಸ್ತೋತ್ರಗಳು ಇಂದಿನ ಸಮಾಜಕ್ಕೆ ಉಪಯುಕ್ತವಾಗಿವೆ ಎಂದರು. ಇದಕ್ಕೂ ಮೊದಲು ಶಂಕರಮೂರ್ತಿಗೆ ರುದ್ರಾಭಿಷೇಕದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಿತು.ಈ ವೇಳೆ ಕೃಷ್ಣಾಚಾರ್ಯ ಇಟಗಿ, ಕಲ್ಲಿನಾಥ ಜೀರೆ, ಶ್ರೀನಿವಾಸ ತೈಲಂಗ್, ರಘುನಾಥ ತಾಸಿನ, ಸತೀಶ ಕುಲಕರ್ಣಿ, ವಿನಾಯಕ ರಾಜಪುರೋಹಿತ, ಅಶೋಕ ತಾಸಿನ, ಗೋಪಾಲ ಕುಲಕರ್ಣಿ, ಲಕ್ಷ್ಮೀಕಾಂತ ಗಾಡಗೋಳಿ, ಗಜಾನನ ಹೆಗಡೆಕೆ.ಸತ್ಯನಾರಾಯಣಭಟ್ಟ, ಎಸ್.ಬಿ.ಕೊಟ್ನಿಸ್ ಸೇರಿ ಇತರರು ಇದ್ದರು.