ಸಾರಾಂಶ
ಗುರುವಿನ ಚಿಂತನೆಗಳು ಸಮಾಜದ ಸ್ತರಗಳಲ್ಲಿ ಅಂತರವನ್ನು ಕಡಿಮೆ ಮಾಡುವಲ್ಲಿ ಯಶಸ್ಸು ಕಂಡಿವೆ. ಹೀಗಾಗಿ ಮನುಕುಲದ ಉಳಿವಿಗೋಸ್ಕರ ಗುರುವಿನ ಸಂದೇಶಗಳು ಅತಿ ಅವಶ್ಯವಿದೆ.
ಬ್ಯಾಡಗಿ: ದಾರ್ಶನಿಕರು, ಗುರುಗಳು ಸೇರಿದಂತೆ ಸಮಾಜದ ಒಳಿತಿಗೆ ಶ್ರಮಿಸಿದವರನ್ನು ಸಮಾಜ ಮರೆಯುತ್ತಿದೆ. ಕೇವಲ ಅಧಿಕಾರದಲ್ಲಿದ್ದವರನ್ನು ನೆನೆಸಿಕೊಳ್ಳುತ್ತಿರುವ ಜನರು ಗುರುಗಳನ್ನು ಬೇರೆ ರೀತಿಯಲ್ಲಿಯೇ ಸಮೀಕರಿಸುತ್ತಿದ್ದು, ಹೀಗಾಗಿ ಗುರುವಿನ ಆಲೋಚನೆಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಶ್ರೀ ಖೇದ ವ್ಯಕ್ತಪಡಿಸಿದರು.ತಾಲೂಕಿನ ಕಾಗಿನೆಲೆ ಕನಕಗುರುಪೀಠದಲ್ಲಿ ಗುರುವಾರ ಜರುಗಿದ ಬೀರೇಂದ್ರ ಕೇಶವ ತಾರಕಾನಂದಪುರಿ ಶ್ರೀಗಳ ಪುಣ್ಯಾರಾಧನೆ ಮತ್ತು ಗುರುಪೌರ್ಣಿಮೆ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗುರುವಿನ ಚಿಂತನೆಗಳು ಸಮಾಜದ ಸ್ತರಗಳಲ್ಲಿ ಅಂತರವನ್ನು ಕಡಿಮೆ ಮಾಡುವಲ್ಲಿ ಯಶಸ್ಸು ಕಂಡಿವೆ. ಹೀಗಾಗಿ ಮನುಕುಲದ ಉಳಿವಿಗೋಸ್ಕರ ಗುರುವಿನ ಸಂದೇಶಗಳು ಅತಿ ಅವಶ್ಯವಿದೆ. ಹಿಂದಿನಿಂದಲೂ ಗುರುಶಿಷ್ಯ ಪರಂಪರೆ ಸಾಕಷ್ಟು ಮಹತ್ವವಿದೆ. ಪ್ರತಿಯೊಬ್ಬರೂ ಜೀವನ ಅಭ್ಯುದಯಕ್ಕೆ ಗುರುವಿನ ಮಾರ್ಗದರ್ಶನ ಬೇಕು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎನ್ನುವ ದಾಸರ ವಾಣಿ ಅಕ್ಷರಶಃ ಸತ್ಯವಾಗಿದ್ದು, ವಿದ್ಯೆ ಪಡೆಯಲು ವಿನಯತೆ ತೋರಬೇಕಿದೆ ಎಂದರು.ವಿಘಟನೆಯತ್ತ ಸಾಗುತ್ತಿದೆ: ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಅತಿರೇಕದ ಭಕ್ತಿ ಪ್ರದರ್ಶಿಸುವ ಜನರಿಂದ ಸ್ವತಃ ಗುರುಗಳೇ ಮುಜುಗರಕ್ಕೆ ಒಳಗಾಗುವ ಸಂದರ್ಭಗಳು ಎದುರಾಗುತ್ತಿವೆ. ಗುರುವಿನ ಮಾರ್ಗದರ್ಶನ ಕೊರತೆಯಿಂದ ಪ್ರಸ್ತುತ ಸಮಾಜ ನಮಗರಿವಿಲ್ಲದಂತೆ ವಿಘಟನೆಯತ್ತ ಸಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗುರುಪೀಠಗಳು ಜಾಗೃತಿ ಮೂಡಿಸುವ ಕಾರ‍್ಯದಲ್ಲಿ ತೊಡಗಬೇಕಿದ್ದು, ಕನಕಗುರುಪೀಠ ಕಾರ್ಯೋನ್ಮುಖವಾಗಿದೆ ಎಂದರು.ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಧಾರ್ಮಿಕ ಅಪ್ರಬುದ್ಧತೆ ಹೆಚ್ಚು ಅಪಾಯಕಾರಿ. ಇದರಿಂದ ಸಮಾಜದಲ್ಲಿ ಸಾಮರಸ್ಯದ ಬದಲು ಪರಸ್ಪರ ದ್ವೇಷ ಪ್ರದರ್ಶಿತಗೊಳ್ಳುತ್ತಿವೆ. ಮೌಢ್ಯ ಹಾಗೂ ಕಂದಾಚಾರಗಳನ್ನು ತಡೆಗಟ್ಟಲು ಕನಕದಾಸರಂತಹ ಮಹಾತ್ಮರು, ಸಾಮಾಜಿಕ ಚಿಂತಕರು ತೀವ್ರ ಹೋರಾಟ ನಡೆಸಿದ್ದರ ಪರಿಣಾಮ ಸಾಮಾಜಿಕ ನ್ಯಾಯದ ಬಾಗಿಲು ತೆರೆದಿದೆ ಎಂದರು. ಹೊಸದುರ್ಗ ತಾಲೂಕು ಕೆಲ್ಲೋಡು ಮಠದ ಈಶ್ವರಾನಂದಪುರಿ ಶ್ರೀಗಳು, ಮುಖಂಡರಾದ ಎಸ್.ಎಫ್.ಎನ್. ಗಾಜೀಗೌಡ್ರ, ಪರಶುರಾಮ, ಶಂಕ್ರಪ್ಪ ಮಾತನವರ, ಎಂ. ಬೀರಪ್ಪ ಇತರಿದ್ದರು.