ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಿದ್ಧರಾಮೇಶ್ವರರು 12ನೇ ಶತಮಾನದಲ್ಲಿ ಕೆರೆ ಕಟ್ಟೆಗಳನ್ನು ನಿರ್ಮಿಸಿ ಕುಡಿಯುವ ನೀರಿನ ಬವಣೆ ತಪ್ಪಿಸಿದರು. ವ್ಯವಸಾಯಕ್ಕೂ ಅನುಕೂಲ ಮಾಡಿಕೊಟ್ಟಿದ್ದರು ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು.ಬುಧವಾರ ಅರಮನೆ ಮೈದಾನದಲ್ಲಿ ನೊಳಂಬ ಲಿಂಗಾಯತ ಸಂಘದಿಂದ ಆಯೋಜಿಸಿದ್ದ ಶ್ರೀ ಗುರು ಸಿದ್ಧರಾಮೇಶ್ವರರ 852ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಿದ್ಧರಾಮೇಶ್ವರರು ತಮ್ಮ ವಚನಗಳ ಮೂಲಕ ಜೀವನದ ಸಾರವನ್ನು ತಿಳಿಸಿದ್ದಾರೆ. ಅವರಂತೆ ಯೋಗಿ ಆಗದಿದ್ದರೂ ಅವರ ಆದರ್ಶಗಳನ್ನು ಪಾಲಿಸೋಣ ಎಂದರು.
ಬಸವಾದಿ ಶರಣರ ಸಂದೇಶಗಳಿಂದಾಗಿ 12ನೇ ಶತಮಾನವು ದೇಶ-ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿತ್ತು. ಬಸವೇಶ್ವರ, ಅಲ್ಲಮಪ್ರಭು, ಅಕ್ಕ ಮಹಾದೇವಿ, ಚನ್ನಬಸವಣ್ಣ, ಸಿದ್ದರಾಮೇಶ್ವರರು ಜನರಿಗೆ ವಚನಗಳ ಮೂಲಕ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಸಿದ್ದರಾಮೇಶ್ವರರು ಹೆಣ್ಣಿಗೆ ಭಗವಂತನ ಸ್ಥಾನ ನೀಡಿದ್ದರು ಎಂದು ಬಣ್ಣಿಸಿದರು.ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, 12ನೇ ಶತಮಾನವು ಭಾರತದ ಇತಿಹಾಸದಲ್ಲಿ ಪ್ರಮುಖವಾದುದು. ಬಸವಾದಿ ಶರಣರು ಜಾತಿ, ಲಿಂಗ ಆಧಾರಿತ ಶೋಷಣೆಗೆ ಮುಕ್ತಿ ನೀಡಿ ಸಮಾನತೆಗೆ ನಾಂದಿ ಹಾಡಿದರು. ಕಾಯಕವೇ ಕೈಲಾಸ ತತ್ವವನ್ನು ಸಿದ್ದರಾಮೇಶ್ವರರು ಪಾಲಿಸಿ ಯೋಗಿ ಎನಿಸಿಕೊಂಡರು. 12 ನೇ ಶತಮಾನದ ಶರಣರ ವಚನಗಳಿಂದ ಪ್ರೇರಿತವಾಗಿ ನಮ್ಮ ಸಂವಿಧಾನ ರಚಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ತಿಪಟೂರಿನ ಗುರುಕುಲಾನಂದಾಶ್ರಮದ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ, ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ಶಾಸಕರಾದ ಷಡಾಕ್ಷರಿ, ಎಚ್.ಡಿ.ತಮ್ಮಯ್ಯ, ಎಚ್.ಕೆ.ಸುರೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಷಡಾಕ್ಷರಿ, ಸಂಘದ ಅಧ್ಯಕ್ಷ ಚಂದ್ರಶೇಖರ್, ಸ್ವಾಗತ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.ಹೊಳಲ್ಕೆರೆಯಲ್ಲಿ 853ನೇ ಜಯಂತಿ?ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ 853 ನೇ ಶ್ರೀ ಗುರು ಸಿದ್ದರಾಮೇಶ್ವರರ ಜಯಂತಿ ಆಚರಿಸಲು ಅವಕಾಶ ನೀಡುವಂತೆ ಸಮುದಾಯದಿಂದ ಸಂಘಕ್ಕೆ ಮನವಿ ಸಲ್ಲಿಸಲಾಗಿದೆ. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶೀಘ್ರವೇ ಈ ಬಗ್ಗೆ ಚರ್ಚಿಸಿ ಸಕಾರಾತ್ಮಕವಾಗಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.ರಾಜ್ಯ ಸರ್ಕಾರವು ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲೂ ಕೆರೆ ಕಟ್ಟಿಸಿ ಅದಕ್ಕೆ ಸಿದ್ದರಾಮೇಶ್ವರರ ಹೆಸರನ್ನು ನಾಮಕರಣ ಮಾಡಬೇಕು. ಇದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ.
-ಬಸವರಾಜ ಶಿವಣ್ಣನವರ, ಶಾಸಕನೊಳಂಬ ಲಿಂಗಾಯತ ಸಂಘದಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಶ್ರೀ ಗುರು ಸಿದ್ದರಾಮೇಶ್ವರರ 852 ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ‘ಹೆಂಜೇರು’ ಕೃತಿ ಲೋಕಾರ್ಪಣೆಗೊಳಿಸಿದರು. ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ತಿಪಟೂರಿನ ಇಮ್ಮಡಿ ಕರಿಬಸವ ದೇಶೀಕೇಂದ್ರ ಸ್ವಾಮೀಜಿ, ಬೆಟ್ಟದಹಳ್ಳಿಯ ಚಂದ್ರಶೇಖರ ಸ್ವಾಮೀಜಿ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮತ್ತಿತರರು ಹಾಜರಿದ್ದರು.