ನಾಳೆ ನಿಧಿ ದೇಶಪಾಂಡೆಯಿಂದ ನೃತ್ಯಾರ್ಪಣೆ, ಗುರುವಂದನೆ

| Published : Oct 10 2025, 01:00 AM IST

ನಾಳೆ ನಿಧಿ ದೇಶಪಾಂಡೆಯಿಂದ ನೃತ್ಯಾರ್ಪಣೆ, ಗುರುವಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು ಹನ್ನೊಂದು ವರ್ಷಗಳ ಕಾಲ ವಿದುಷಿ ಪ್ರಮೋದಾ ಎನ್‌. ಉಪಾಧ್ಯಾಯ ಅವರಿಂದ ಭರತನಾಟ್ಯದ ತರಬೇತಿ ಪಡೆದ ಧಾರವಾಡದ ನಿಧಿ ದೇಶಪಾಂಡೆ ಇದೀಗ ಅ. 11ರಂದು ಗುರುವಂದನಾ ಹಾಗೂ ನೃತ್ಯಾರ್ಪಣಾ ಕಾರ್ಯಕ್ರಮ ಆಯೋಜಿಸಿದ್ದಾರೆ.

ಧಾರವಾಡ: ಸುಮಾರು ಹನ್ನೊಂದು ವರ್ಷಗಳ ಕಾಲ ವಿದುಷಿ ಪ್ರಮೋದಾ ಎನ್‌. ಉಪಾಧ್ಯಾಯ ಅವರಿಂದ ಭರತನಾಟ್ಯದ ತರಬೇತಿ ಪಡೆದ ಇಲ್ಲಿಯ ನಿಧಿ ದೇಶಪಾಂಡೆ ಇದೀಗ ಅ. 11ರಂದು ಗುರುವಂದನಾ ಹಾಗೂ ನೃತ್ಯಾರ್ಪಣಾ ಕಾರ್ಯಕ್ರಮ ಆಯೋಜಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಆಕಾಶವಾಣಿ ಉದ್ಘೋಷಕಿ ಮಾಯಾ ರಾಮನ್‌, ನಿಧಿಯ ಹಿರಿಯಕ್ಕ ಶ್ರೇಯಾಳ ಭರತನಾಟ್ಯದ ದಾರಿಯಲ್ಲಿಯೇ ನಡೆಯುತ್ತಿದ್ದು, ನಾಟ್ಯದ ಜತೆಗೆ ಸಿತಾರ ನುಡಿಸುವಲ್ಲಿಯೂ ಆಸಕ್ತಿ ಹೊಂದಿದ್ದಾಳೆ. ಅಳ್ವಾಸ ನುಡಿಸಿರಿ, ಚಂದನ ವಾಹನಿಯ ಮಧುರ ಮಧುರವೀ ಮಂಜುಳಗಾನ, ಹಂಪಿ ಉತ್ಸವ, ಪುಣೆಯ ನೃತ್ಯ ಭಾರತ್ ಉತ್ಸವ, ತಿರುಪತಿ ಉತ್ಸವ, ಕರ್ನಾಟಕ ಸಂಭ್ರಮ ಅಂತಹ ಕಾರ್ಯಕ್ರಮಗಳ ವೇದಿಕೆಗಳಲ್ಲಿ ನೃತ್ಯ ಸಾದರ ಪಡಿಸಿದ್ದಾಳೆ. ಸದ್ಯ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ನಿಧಿಗೆ ತಾಯಿ ಸ್ನೇಹಾ ದೇಶಪಾಂಡೆ ಪ್ರೋತ್ಸಾಹ ಸಾಕಷ್ಟು. ಸ್ನೇಹಾ ಇಬ್ಬರೂ ಮಕ್ಕಳನ್ನು ನಾಟ್ಯ, ಸಂಗೀತದತ್ತ ಒಯ್ದಿದ್ದಾರೆ ಎಂದರು.

ಇಲ್ಲಿಯ ಸೃಜನಾ ರಂಗಮಂದಿರದಲ್ಲಿ ಅ. 11ರ ಸಂಜೆ 5.30ಕ್ಕೆ ನಡೆಯವ ಈ ಕಾರ್ಯಕ್ರಮವನ್ನು ಖ್ಯಾತ ವೈದ್ಯರಾದ ಡಾ. ಸರ್ವಮಂಗಳಾ ದೇವರಾಜು ಉದ್ಘಾಟಿಸಲಿದ್ದಾರೆ. ನೃತ್ಯ ನಿರ್ದೇಶಕ, ಮೈಸೂರಿನ ಪ್ರೊ. ಕೆ. ರಾಮಮೂರ್ತಿರಾವ್ ಅಧ್ಯಕ್ಷತೆ ವಹಿಸುತ್ತಾರೆ. ಅತಿಥಿಗಳಾಗಿ ದಕ್ಷಿಣ ಕನ್ನಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಅನಂತ ಪದ್ಮನಾಭ ಐತಾಳ, ಹಂಚಿನಮನಿ ಇನ್‌ಸ್ಟಿಟ್ಯೂಟ್‌ ಜಂಟಿ ಕಾರ್ಯದರ್ಶಿ ವರ್ಷಾ ಹಂಚಿನಮನಿ ಭಾಗವಹಿಸಲಿದ್ದಾರೆ ಎಂದರು.

ನೃತ್ಯಾರ್ಪಣೆಯ ಹಿಮ್ಮೇಳದಲ್ಲಿ ನಟುವಾಂಗ ವಿದುಷಿ ಪ್ರಮೋದಾ ಉಪಾಧ್ಯಾಯ ಹಾಗೂ ನವಮಿ ಉಪಾಧ್ಯಾಯ, ಗಾಯನದಲ್ಲಿ ರಘುರಾಮ ರಾಜಗೋಪಾಲನ್‌, ಮೃದಂಗದಲ್ಲಿ ಪಂಚಮ ಉಪಾಧ್ಯಾಯ, ವಾಯಲಿನ್‌ ಮಧುಸೂದನ, ಕೊಳಲಿನಲ್ಲಿ ದೀಪಕ ಹೆಬ್ಬಾರ ಹಾಗೂ ರಿದಂ ಪ್ಯಾಡ್‌ನಲ್ಲಿ ಲಕ್ಷ್ಮೀ ನಾರಾಯಣ ಇರಲಿದ್ದಾರೆ. ಸಂತೋಷ ಮಹಾಲೆ ಪ್ರಸಾದನ ಮಾಡಲಿದ್ದಾರೆ ಎಂದು ಮಾಯಾ ರಾಮನ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿದುಷಿ ಪ್ರಮೋದಾ ಉಪಾಧ್ಯಾಯ, ಸ್ನೇಹಾ ದೇಶಪಾಂಡೆ, ನಿಧಿ ದೇಶಪಾಂಡೆ, ಶ್ರೇಯಾ ದೇಶಪಾಂಡೆ ಹಾಗೂ ಸಂತೋಷ ಮಹಾಲೆ ಇದ್ದರು.