ಉದ್ಯಮಿಯಾಗಿರುವ ನಾನು ಶಾಲೆ ಅಭಿವೃದ್ಧಿಗೆ ಸಹಕಾರ ನೀಡುವೆ. ಕನ್ನಡ ಶಾಲೆ ಉಳಿದರೆ ಮಾತ್ರ ಕನ್ನಡ ನಾಡು, ನುಡಿ ಉಳಿಯಲು ಸಾಧ್ಯ. ಮುರುಡೇಶ್ವರದ ಶಿವ ಪ್ರತಿಮೆ, ಲಂಡನ್‌ನಲ್ಲಿನ ಬಸವೇಶ್ವರ ಪ್ರತಿಮೆ ಮತ್ತಿತರ ಪ್ರತಿಮೆಗಳಿಗೆ ಮೆಟಲ್‌ ಕೋಟಿಂಗ್ ಮಾಡಿರುವೆ. ಸಂಸ್ಕೃತಿ, ಪರಂಪರೆ, ದೇಗುಲ ಉಳಿವಿಗೆ ಸದಾ ಶ್ರಮಿಸಲು ಗುರುಗಳಿಂದ ಕಲಿತ ಸಂಸ್ಕಾರ ಕಾರಣ ಎಂದು ನುಡಿದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

30 ವರ್ಷಗಳ ಹಿಂದೆ ಓದಿದ ಶಾಲೆ, ಗೆಳೆಯರು, ಗುರುಗಳ ನೆನಪು ಕಣ್ತುಂಬಿಕೊಳ್ಳುವ ಭಾಗ್ಯವಾಗಿ ಗುರುವಂದನೆ ಕಾರ್ಯಕ್ರಮ ಲಭಿಸಿದೆ ಎಂದು ಮಂದಗೆರೆ ಹೇಮಾವತಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಡಿ.ಆರ್.ಮಧುಸೂದನ್‌ ಭಾವುಕರಾದರು.

ಸಮೀಪದ ಮಂದಗೆರೆ ಹೇಮಾವತಿ ಅನುದಾನಿತ ಪ್ರೌಢಶಾಲೆಯಲ್ಲಿ 1988 - 89ನೇ ಸಾಲಿನ ಹಳೆ ವಿದ್ಯಾರ್ಥಿಗಳ ಬಳಗ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ. ತಾಯಿಜೀವ ನೀಡಿದರೆ, ಜೀವನ, ಭವಿಷ್ಯ ಕೊಡುವ ತಾಯಿ ಹೃದಯದ ದೇವರು ಗುರುಗಳಾಗಿದ್ದಾರೆ. ಒತ್ತಡದ ಬದುಕಿನಲ್ಲಿರುವ ನಮಗೆ 30 ವರ್ಷಗಳ ನಂತರ ಹಳೆ ಗೆಳೆಯರ ಮಿಲನ, ವಿದ್ಯೆ ನೀಡಿದ ಗುರುಗಳಿಗೆ ಪೂಜಿಸುವ ಅವಕಾಶ ಕಲ್ಪಿಸಿಕೊಟ್ಟ ಗೆಳೆಯ ಮಂದಗೆರೆ ಮಧುಸೂದನ್ ಪರಿಶ್ರಮ ಮರೆಯಲಾರೆ ಎಂದರು.

ಉದ್ಯಮಿಯಾಗಿರುವ ನಾನು ಶಾಲೆ ಅಭಿವೃದ್ಧಿಗೆ ಸಹಕಾರ ನೀಡುವೆ. ಕನ್ನಡ ಶಾಲೆ ಉಳಿದರೆ ಮಾತ್ರ ಕನ್ನಡ ನಾಡು, ನುಡಿ ಉಳಿಯಲು ಸಾಧ್ಯ. ಮುರುಡೇಶ್ವರದ ಶಿವ ಪ್ರತಿಮೆ, ಲಂಡನ್‌ನಲ್ಲಿನ ಬಸವೇಶ್ವರ ಪ್ರತಿಮೆ ಮತ್ತಿತರ ಪ್ರತಿಮೆಗಳಿಗೆ ಮೆಟಲ್‌ ಕೋಟಿಂಗ್ ಮಾಡಿರುವೆ. ಸಂಸ್ಕೃತಿ, ಪರಂಪರೆ, ದೇಗುಲ ಉಳಿವಿಗೆ ಸದಾ ಶ್ರಮಿಸಲು ಗುರುಗಳಿಂದ ಕಲಿತ ಸಂಸ್ಕಾರ ಕಾರಣ ಎಂದು ನುಡಿದರು.

ಹಳೆ ವಿದ್ಯಾರ್ಥಿಯಾದ ಚಲನಚಿತ್ರ ನಟ ಮಂದಗೆರೆ ಮಧುಸೂದನ್ ಮಾತನಾಡಿ, ಹಳೆಯ ನೆನಪು, ಗುರುಗಳ ಆಶೀರ್ವಾದ ತಮ್ಮನ್ನು ಸುಶಿಕ್ಷಿತರನ್ನಾಗಿ ಮಾಡಿಸಿದೆ. ಇಂತಹ ಪರಂಪರೆ ಕಾರ್ಯಕ್ರಮ ಭವಿಷ್ಯದ ಮಕ್ಕಳಿಗೆ ಆದರ್ಶವಾಗಬೇಕಿದೆ ಎಂದರು.

ಇಂದು ಮೊಬೈಲ್, ರೀಲ್ಸ್, ಸಾಮಾಜಿಕ ಜಾಲತಾಣದಿಂದ ಗುರುಗಳನ್ನು ಇಂದಿನ ಪೀಳಿಗೆ ಮರೆಯುತ್ತಿದೆ. ನಾವು ಓದಿದ ಕನ್ನಡ ಶಾಲೆ ಉಳಿವಿಗೆ ಸದಾ ಮುಂದಾಗಿರುವುದಾಗಿ ತಿಳಿಸಿ ಶಾಲಾ ದಿನದ ನೆನಪು ನೆನೆದರು.

ಗುರುಗಳು, ಶಿಷ್ಯರು ನೀಡಿದ ಗೌರವ ಸಮರ್ಪಣೆ ಸ್ವೀಕರಿಸಿ, ಗುರು- ಶಿಷ್ಯರ ಬಾಂಧವ್ಯ, ಹಳೆಯ ನೆನಪು ನೆನೆದು ಈ ಕನ್ನಡ ಶಾಲೆ ಉಳಿಸಲು ಮನವಿ ಮಾಡಿದರು. ಹಳೆ ವಿದ್ಯಾರ್ಥಿಗಳು ಗುರುಗಳೊಂದಿಗೆ ಇದ್ದ ಬಾಂಧವ್ಯ, ಭಯ ಎಲ್ಲವನ್ನೂ ಹಂಚಿಕೊಂಡು ಖುಷಿಪಟ್ಟರು.

ಗುರುಗಳ ಕುರಿತು ಮಂದಗೆರೆ ಮಧುಸೂದನ್‌ ಕಾವ್ಯ ರಚಿಸಿ ಮೂಡಿಬಂದ ಗೀತೆ ಮುದನೀಡಿತು. ಗುರುಗಳಿಗೆ ಶಿಷ್ಯರು ಫಲತಾಂಬೂಲ, ಮೈಸೂರು ಪೇಟ, ಹಾರ ತುರಾಯಿಗಳೊಂದಿಗೆ ಗೌರವ ಸಮರ್ಪಣೆ ನೀಡಿದರು.

ಈ ವೇಳೆ ಗುರುಗಳಾದ ವೆಂಕಟೇಶ್, ಕುಮಾರ್, ರಮೇಶ್, ಜಿ.ಟಿ. ಜಯರಾಮೇಗೌಡ, ಸೂರ್ಯನಾರಾಯಣಪ್ಪ, ರಂಗಸ್ವಾಮಿ ಆಡಳಿತ ಮಂಡಳಿಯ ಜಿ.ವಿ. ವೆಂಕಟೇಶ್, ಚಿಕ್ಕಮಂದಗೆರೆ ಜಯರಾಂ, ಮಂಜು, ಮಂಜೇಗೌಡ, ರಾಜು, ಮೋಹನ್‌ಬಾಬು, ಹಳೆ ವಿದ್ಯಾರ್ಥಿ ಬಳಗ ಸಣ್ಣಪ್ಪ, ತುಳಸೀರಾಜು, ಮಾದೇಶ್, ಅರುಣ್, ಉಷಾ, ಅನಿತಾ, ಪ್ರಜ್ವಲಾ, ರೂಪಾ, ಛಾಯಾ ಇದ್ದರು.