ಶಾಮನೂರು ಶಿವಶಂಕರಪ್ಪಗೆ ಗುರುಬಸವ ಶ್ರೀ ಪ್ರಶಸ್ತಿ

| Published : Jan 24 2024, 02:00 AM IST

ಸಾರಾಂಶ

ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜ.25 ಮತ್ತು 26ರಂದು ಪರಮ ತಪಸ್ವಿ ಲಿಂ.ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿ ಗಳವರ 112ನೇ ಪುಣ್ಯಸ್ಮರ ಣೋತ್ಸವ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಇಂದು, ನಾಳೆ ಬೆಕ್ಕಿನಕಲ್ಮಠದಲ್ಲಿ ಶರಣ ಸಾಹಿತ್ಯ ಸಮ್ಮೇಳನ । ಲಿಂ.ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ 112ನೇ ಪುಣ್ಯಸ್ಮರಣೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇಲ್ಲಿನ ಶ್ರೀ ಬೆಕ್ಕಿನಕಲ್ಮಠದ ಗುರುಬಸವ ಭವನದಲ್ಲಿ ಜ.25 ಮತ್ತು 26ರಂದು ಪರಮ ತಪಸ್ವಿ ಲಿಂ.ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳವರ 112ನೇ ಪುಣ್ಯಸ್ಮರ ಣೋತ್ಸವ, ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಿದ್ದು, ಈ ಸಮಾರಂಭದಲ್ಲಿ ನೀಡಲಾಗುವ ಗುರುಬಸವ ಶ್ರೀ ಪ್ರಶಸ್ತಿಯನ್ನು ಈ ಬಾರಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ನೀಡಲಾಗುತ್ತಿದೆ ಎಂದು ಬೆಕ್ಕಿನಕಲ್ಮಠದ ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜ.25ರಂದು ಬೆಳಿಗ್ಗೆ 8 ರಿಂದ ಬೆಕ್ಕಿನಕಲ್ಮಠದಲ್ಲಿ ಮಠದ ಟ್ರಸ್ಟ್, ಮಠದ ಡಾ.ನಾಗೇಶ್ ಸುವರ್ಣ ಕವಿ ಆಯುರ್ವೇದ ಆಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಬೆಳಿಗ್ಗೆ 10ರವರೆಗೆ ವಚನ ಗಾಯನ ಸ್ಪರ್ಧೆ ಹಾಗೂ ವಚನ ಕಂಠಪಾಠ ಸ್ಪರ್ಧೆ, ಸಂಜೆ 4ಕ್ಕೆ 112 ಮಹಿಳೆಯರಿಂದ ವಚನಗಾಯನವಿದ್ದು, ಬಸವ ಕೇಂದ್ರದ ಡಾ.ಬಸವ ಮರುಳಾ ಸಿದ್ದ ಸ್ವಾಮೀಜಿ ಸ್ಪರ್ಧೆ ಗಳನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಂಜೆ 5ಕ್ಕೆ ನಡೆಯುವ ಸಾಹಿತ್ಯ ಸಮ್ಮೇಳನ, 532ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಅಲ್ಲಮ ಪ್ರಭು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಗರ್ತಿಕೆರೆಯ ಬ್ರಹ್ಮಶ್ರೀ ನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಮಹಾ ಸ್ವಾಮಿಗಳ ಸಮ್ಮುಖದಲ್ಲಿ ಉದ್ಘಾಟಿಸುವರು. ಶಾಸಕ ಎಸ್.ಎನ್.ಚನ್ನಬಸಪ್ಪ, ಶ್ರೀ ಮಠದ ದಿನದರ್ಶಿಕೆ ಬಿಡುಗಡೆ ಮಾಡುವರು. ಶಾಸಕ ಬಿ.ಕೆ.ಸಂಗಮೇಶ್ವರ್, ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್‌ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಡಿ.ಎಸ್.ಅರುಣ್, ವಿಧಾನ ಪರಿಷತ್‌ ಮಾಜಿ ಸದಸ್ಯ ಆಯನೂರು ಮಂಜುನಾಥ್, ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯ ಕುಲಪತಿ ಡಾ.ಆರ್.ಸಿ.ಜಗದೀಶ್, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಆಗಮಿಸಲಿದ್ದಾರೆ ಎಂದು ವಿವರಿಸಿದರು.

ಜ.26ರಂದು ಬೆಳಿಗ್ಗೆ 8ಕ್ಕೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ೧೦ಕ್ಕೆ ಪೂಜ್ಯರ ಶೂನ್ಯಪೀಠಾರೋಹಣ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ 4ಕ್ಕೆ 5ರಿಂದ 10 ವರ್ಷದ ಮಕ್ಕಳಿಗಾಗಿ ಸರ್ವಧರ್ಮ ಮಹಾಪುರುಷರ ವೇಷ ಭೂಷಣ ಸ್ಪರ್ಧೆ ಹಾಗೂ ಸಂಜೆ 4.30ಕ್ಕೆ 112 ಮಹಿಳೆ ಯರಿಂದ ಏಕಕಾಲದಲ್ಲಿ ಭಾವೈಕ್ಯ ಗೀತೆ ನಡೆಯಲಿದೆ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಅವರಿಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಭಾವೈಕ್ಯತೆ ಕುರಿತು ನಿವೃತ್ತ ಪ್ರಾಧ್ಯಾಪಕ ಡಾ.ರಾಜೇಂದ್ರ ಚೆನ್ನಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಮರಣೋತ್ಸವ ಸಮಿತಿಯ ಪದಾಧಿಕಾರಿಗಳಾದ ಎಚ್.ಸಿ. ಯೋಗೀಶ್, ಎಸ್.ಎಸ್.ಜ್ಯೋತಿಪ್ರಕಾಶ್, ಇ.ವಿಶ್ವಾಸ್, ಎಸ್.ಎನ್.ಮಹಾಲಿಂಗ ಶಾಸ್ತ್ರಿ, ಕೆ.ಆರ್.ಸೋಮನಾಥ್, ಶೀಲಾ ಸುರೇಶ್ ಮತ್ತಿತರರು ಇದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನುಕುಲದ ಸಾಂಸ್ಕೃತಿಕ ನಾಯಕ ಬಸವಣ್ಣನವರನ್ನು ರಾಜ್ಯದ ಸಂಸ್ಕೃತಿ ನಾಯಕ ಎಂದು ಘೋಷಿಸಿರುವುದು ಅತ್ಯಂತ ಶ್ಲಾಘನೀಯ. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪನವರ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರ ಸರ್ಕಾರ ಶಿವಮೊಗ್ಗ ಜೈಲು ಬಯಲಿಗೆ ಅಲ್ಲಮಪ್ರಭು ಹೆಸರಿಟ್ಟಿದೆ. ಅಲ್ಲಮನಿಗೂ ಮತ್ತು ಬಯಲಿಗೂ ಸಾಮ್ಯತೆ ಇದೆ ಎಂದು ಡಾ.ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಇದೇ ವೇಳೆ ಅಭಿಪ್ರಾಯಪಟ್ಟರು.ಬಸವರಾಜ ಸಾದರಗೆ ಅಲ್ಲಮ ಪ್ರಶಸ್ತಿ

ಅಲ್ಲಮಪ್ರಭು ಪ್ರಶಸ್ತಿಯನ್ನು ಬೆಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ.ಬಸವರಾಜ ಸಾದರ ಅವರಿಗೆ ಹಾಗೂ ಅಕ್ಕಮಹಾದೇವಿ ಪ್ರಶಸ್ತಿಯನ್ನು ಕರ್ನಾಟಕ ವಿವಿಯ ನಿವೃತ್ತ ಪ್ರಾಧ್ಯಪಕಿ ಡಾ.ಶಾಂತಕುಮಾರಿ ಇಮ್ರಾಪುರರಿಗೆ ನೀಡಲಾಗುವುದು. ರಾಷ್ಟ್ರಮಟ್ಟದ ಇನೋವೇಷನ್ ಅವಾರ್ಡ್ ಪುರಸ್ಕೃತರಾದ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್, ದುಬೈನ ಯುಎಇ ಬಸವ ಸಮಿತಿ ಸ್ಥಾಪಕರು ಹಾಗೂ ಸಲಹಾ ಸಮಿತಿ ಸದಸ್ಯ ಚಂದ್ರಶೇಖರ ಲಿಂಗದಹಳ್ಳಿ ಅವರನ್ನು ಸನ್ಮಾನಿಸಲಾಗುವುದು ಎಂದರು.