ಸೆ.೧೪ರಿಂದ ಮಂಡ್ಯ ನಗರದಲ್ಲಿ ಗುರುದೇವೋತ್ಸವ: ಡಾ.ಚೇತನಾ

| Published : Sep 06 2024, 01:08 AM IST

ಸಾರಾಂಶ

ನೃತ್ಯವನ್ನು ಆಳವಾದ ಅಧ್ಯಯನ, ನಿರಂತರ ಕಲಿಕೆಯಲ್ಲಿ ತೊಡಗುವುದರಿಂದ ಕಲಾವಿದರಿಗೆ ಉತ್ತ ಮ ಭವಿಷ್ಯವಿದೆ. ಅರ್ಧ ಕಲಿತು ಬಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೃತ್ಯದ ಮಹತ್ವದ ಕುರಿತು ಜನರಲ್ಲಿ ಅರಿವು ಮತ್ತು ಜಾಗೃತಿ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ.

ಕನ್ನಡಪ್ರಭ ವಾರ್ತೆ ಮಂಡ್ಯ

ಗುರುದೇವ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆ ವತಿಯಿಂದ ಗುರುದೇವೋತ್ಸವ ಶಾಸ್ತ್ರೀಯ ನೃತ್ಯಗಳ ರಾಷ್ಟ್ರೀಯ ಹಬ್ಬ ಕಾರ್ಯಕ್ರಮ ಸೆ.೧೪ರಿಂದ ೧೬ರವರೆಗೆ ನಗರದ ವಿವೇಕಾನಂದ ರಂಗಮಂದಿರದಲ್ಲಿ ಸಂಜೆ ೪ ಗಂಟೆಗೆ ನಡೆಯಲಿದೆ ಎಂದು ಸಂಸ್ಥೆಯ ಕಲಾತ್ಮಕ ನಿರ್ದೇಶಕಿ ಡಾ.ಚೇತನಾ ರಾಧಾಕೃಷ್ಣ ಹೇಳಿದರು.

ಸೆ.೧೪ರಂದು ಸಂಜೆ ೪ ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಪ್ರಾಸ್ತಾವಿಕ ಮಾತನಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಮುಖ್ಯ ಅತಿಥಿಗಳಾಗಿ, ಕೂಚಿಪುಡಿ-ಕಥಕ್ಕಳಿ ಪ್ರತಿಪಾದಕ, ಕಲಾ ವಿಮರ್ಶಕ ಮುಂಬೈನ ವಿಜಯ್‌ಶಂಕರ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಅಂದು ಶ್ರೀನಟರಾಜ ಕಲಾನಿಕೇತನ್ ನಿರ್ದೇಶಕ ಪ್ರಕಾಶ್ ಐಯರ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.೧೫ರಂದು ಸಂಜೆ ೪ ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಖಜಾಂಚಿ ಬಿ.ಎಂ.ಅಪ್ಪಾಜಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಪಾಂಡವಪುರ ತಹಸೀಲ್ದಾರ್ ಎಸ್.ಸಂತೋಷ್ ಶುಭನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ನಗರಸಭೆ ಮಾಜಿ ಉಪಾಧ್ಯಕ್ಷೆ ಇಂದಿರಾ ಸತೀಶ್‌ಬಾಬು, ಜನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಗೊರವಾಲೆ ಚಂದ್ರಶೇಖರ್ ಭಾಗವಹಿಸುವರು ಎಂದರು.

ಕಾರ್ಯಕ್ರಮದಲ್ಲಿ ಬೆಳಕು ವಿನ್ಯಾಸಕ, ನಿರೂಪಕ ಎಂ.ಎಲ್.ರಾಜನ್, ತಬಲ ಕಲಾವಿದ ಪಂಡಿತ್ ಭೀಮಾಶಂಕರ್ ಬಿದನೂರ್ ಭಾಗವಹಿಸುವರು ಎಂದರು.

ಸೆ.೧೬ರಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ವಹಿಸುವರು. ಮನೋವೈದ್ಯ ಡಾ.ಸತ್ಯನಾರಾಯಣರಾವ್ ಶುಭ ನುಡಿಗಳನ್ನಾಡುವರು. ವಿಶೇಷ ಆಹ್ವಾನಿತರಾಗಿ ಡಾ.ಮೀರಾ ಶಿವಲಿಂಗಯ್ಯ ಭಾಗವಹಿಸುವರು. ಅಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶುಭಾ ಧನಂಜಯ್ ಅವರಿಗೆ ಗುರುದೇವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಮೂರು ದಿನಗಳ ಕಾಲ ನಿತ್ಯ ಸಂಜೆ ೪ ರಿಂದ ಸಂಜೆ ೭..೪೦ರವರೆಗೆ ನೃತ್ಯ ಕಲಾವಿದರಿಂದ ಸಮೂಹ ಭರತನಾಟ್ಯ, ವಾಲ್ಮೀಕಿ ನೃತ್ಯನಾಟಕ, ಯುಗಳ ಭರತನಾಟ್ಯ, ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ನೃತ್ಯವನ್ನು ಆಳವಾದ ಅಧ್ಯಯನ, ನಿರಂತರ ಕಲಿಕೆಯಲ್ಲಿ ತೊಡಗುವುದರಿಂದ ಕಲಾವಿದರಿಗೆ ಉತ್ತ ಮ ಭವಿಷ್ಯವಿದೆ. ಅರ್ಧ ಕಲಿತು ಬಿಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನೃತ್ಯದ ಮಹತ್ವದ ಕುರಿತು ಜನರಲ್ಲಿ ಅರಿವು ಮತ್ತು ಜಾಗೃತಿ ಇಲ್ಲದಿರುವುದೇ ಇದಕ್ಕೆ ಮೂಲ ಕಾರಣ ಎಂದು ಡಾ.ಚೇತನಾ ಅಭಿಪ್ರಾಯಪಟ್ಟರು.

ನೃತ್ಯಾಸಕ್ತಿಯಿಂದ ಎಷ್ಟೋ ಹೆಣ್ಣು ಮಕ್ಕಳು ಕಲಿಯಲು ಬರುತ್ತಾರೆ. ಎಸ್ಸೆಸ್ಸೆಲ್ಸಿಗೆ ಬರುತ್ತಿದ್ದಂತೆ ಶಿಕ್ಷಣದ ಮೇಲೆ ಪರಿಣಾಮ ಬಿರಬಹುದೆಂಬ ಕಾರಣಕ್ಕೆ ನೃತ್ಯದಿಂದ ದೂರ ಸರಿಯುತ್ತಿದ್ದಾರೆ. ನೃತ್ಯ ಎನ್ನುವುದೊಂದು ಕಲೆ. ಕಲೆಯನ್ನು ರೂಢಿಸಿಕೊಂಡು ಆಳವಾದ ಅಧ್ಯಯನ, ಕಲಿಕೆಯಲ್ಲಿ ತೊಡಗಿದಾಗ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದಲ್ಲದೆ, ಉತ್ತಮ ಜೀವನವನ್ನೂ ಕಟ್ಟಿಕೊಳ್ಳಬಹುದು ಎಂದರು.

ಗೋಷ್ಠಿಯಲ್ಲಿ ಪಿ.ಎಂ.ರಾಧಾಕೃಷ್ಣ, ಎಂ.ಎಲ್.ರಾಜನ್ ಇದ್ದರು.