ಟ್ರಾಫಿಕ್ ಸಮಸ್ಯೆ ಪ್ರಶ್ನಿಸಿದ ವಕೀಲನ ಮೇಲೆ ಗುರೂಜಿ ಹಲ್ಲೆ

| Published : Oct 07 2025, 01:02 AM IST

ಟ್ರಾಫಿಕ್ ಸಮಸ್ಯೆ ಪ್ರಶ್ನಿಸಿದ ವಕೀಲನ ಮೇಲೆ ಗುರೂಜಿ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ದೇವರ ಉತ್ಸವಕ್ಕೆ ರಸ್ತೆ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಬೇಗ ರಸ್ತೆ ತೆರವು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದಕ್ಕೆ ಗುರೂಜಿ ಸೇರಿದಂತೆ ಅವರ ಸಹಚರರು ವಕೀಲ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತ ಸೇರಿದಂತೆ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಕಾರನ್ನು ಜಖಂಗೊಳಿಸಿದ್ದಾರೆ.

ದಾಬಸ್‍ಪೇಟೆ: ದೇವರ ಉತ್ಸವಕ್ಕೆ ರಸ್ತೆ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಬೇಗ ರಸ್ತೆ ತೆರವು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದಕ್ಕೆ ಗುರೂಜಿ ಸೇರಿದಂತೆ ಅವರ ಸಹಚರರು ವಕೀಲ ಹಾಗೂ ಹಿಂದೂ ಪರ ಸಂಘಟನೆ ಕಾರ್ಯಕರ್ತ ಸೇರಿದಂತೆ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಕಾರನ್ನು ಜಖಂಗೊಳಿಸಿದ್ದಾರೆ.

ಸೋಲೂರು ಹೋಬಳಿಯ ಶ್ರೀರಾಂಪುರ ಕಾಲೋನಿಯ ಗಿರೀಶ್(28), ಚೇತನ್ ಕುಮಾರ್(24), ಅನುಸೂಯ(45), ಶ್ರೀನಿವಾಸ್(50) ಹಲ್ಲೆಗೊಳಗಾದವರು. ಗೊರೂರು ಬಳಿ ಚಾಮುಂಡೇಶ್ವರಿ ಅಮ್ಮನವರ ಪೀಠದ ಮನೀಶ್ ಗುರೂಜಿ ಹಾಗೂ ಆತನ ಸಹಚರರು ಹಲ್ಲೆ ಮಾಡಿದವರು.

ರಾಜ್ಯ ಹೆದ್ದಾರಿ ಪಕ್ಕದಲ್ಲಿ ಗೊರೂರು ಗ್ರಾಮದ ಶ್ರೀಚಾಮುಂಡೇಶ್ವರಿ ಅಮ್ಮನವರ ಪೀಠವಿದ್ದು ನವರಾತ್ರಿ ಹಿನ್ನೆಲೆ ಅಮ್ಮನವರ ಉತ್ಸವ ನಡೆಯುತ್ತಿತ್ತು. ಅ.4ರಂದು ರಾತ್ರಿ 7.50ರ ಸುಮಾರಿಗೆ ದಾಬಸ್‍ಪೇಟೆಗೆ ಮದುವೆಗೆ ಹೋಗಲು ವಕೀಲ ಗಿರೀಶ್ ಹಾಗೂ ಅವರ ಕುಟುಂಬದವರು ಕಾರಿನಲ್ಲಿ ಹೋಗುವಾಗ ಪೀಠದ ಮುಂದಿನ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಈ ವೇಳೆ ಗಿರೀಶ್‌ ಪೊಲೀಸರು ಹಾಗೂ ಗುರೂಜಿ ಕಡೆಯವರಿಗೆ ಹೇಳಿದಾಗ ಮನೀಶ್ ಗುರೂಜಿ ಕಾರಿನ ಬಳಿ ಬಂದು ಮಾರಾಣಾಂತಿಕ ಹಲ್ಲೆ ಮಾಡಿ, ಗಿರೀಶ್ ತಾಯಿಯ ಸೀರೆ ಎಳೆದಾಡಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂದು ಕುದೂರು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸ್ವತಃ ಗುರೂಜಿಯೇ ವಕೀಲ ಗಿರೀಶ್ ಮೇಲೆ ಹಲ್ಲೆ ಮಾಡಿರುವ ವಿಡಿಯೋ, ಪೋಟೋಗಳು ಸಾಮಾಜಿಕ ಜಾಲತಾಲದಲ್ಲಿ ವೈರಲ್ ಆಗಿದ್ದು ಗುರೂಜಿ ವರ್ತನೆಗೆ ಘಟನಾ ಸ್ಥಳದಲ್ಲಿದ್ದ ಪೊಲೀಸರು ಮೌನವಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂಪರ ಸಂಘಟನೆಗಳ ಆಕ್ರೋಶ: ಗಿರೀಶ್ ಒಬ್ಬ ವಕೀಲ, ಹಿಂದೂಪರ ಸಂಘಟನೆ ಕಾರ್ಯಕರ್ತ ಬಿಟ್ಟುಬಿಡಿ ಸ್ವಾಮೀಜಿ ಎಂದು ಕಾಲಿಗೆ ಬಿದ್ದರೂ ಗುರೂಜಿ ಹಾಗೂ ಸಹಚರರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ರೌಡಿಯಂತೆ ವರ್ತಿಸಿರುವ ಗುರೂಜಿಯನ್ನು ಕೂಡಲೇ ಬಂಧಿಸಬೇಕು. ಪೀಠದಿಂದ ಕೆಲಗಿಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುತ್ತೇವೆ ಎಂದು ಹಿಂದೂಪರ ಸಂಘಟನೆಗಳ ಮುಖಂಡ ಶ್ರೀನಿವಾಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಕೀಲರ ಮೇಲೆ ರೌಡಿಯಂತೆ ಹಲ್ಲೆ ಮಾಡಿರುವ ಗುರೂಜಿಯನ್ನು ಕೂಡಲೇ ಬಂಧಿಸಬೇಕು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಕೀಲರ ಸಂಘ ಆಗ್ರಹಿಸಿದೆ.

ಆರೋಪ ತಳ್ಳಿ ಹಾಕಿದ ಪೀಠಾಧಿಕಾರಿ:

ದೇವರ ಉತ್ಸವದ ವೇಳೆ ರಸ್ತೆ ಬಂದ್ ವಿಚಾರಕ್ಕೆ ಪೊಲೀಸರು ಮತ್ತು ವಕೀಲ ಗಿರೀಶ್ ನಡುವೆ ವಾಗ್ವಾದ ನಡೆಯುತ್ತಿತ್ತು. ಗಲಾಟೆ ಶಾಂತವಾಗಿಸಲು ನಾನು ಕೂಡ ಸ್ಥಳಕ್ಕೆ ಹೋಗಿದ್ದೆ, ನನಗೆ ಗಿರೀಶ್ ತಾಯಿ ಕಾರಿನಲ್ಲಿರೋದೆ ಗೊತ್ತಿರಲಿಲ್ಲ, ಅವರ ತಾಯಿ ನಮ್ಮ ತಾಯಿ ಇದ್ದಂತೆ. ನಾನ್ಯಾಕೆ ಅಂತ ಕೆಲಸ ಮಾಡ್ತೀನಿ. ಆಕೆ ಕಾರಿನಿಂದ ಕೆಳಗೆ ಇಳಿದಿಲ್ಲ. ಆತ ಮಾಡಿರುವ ಆರೋಪ ಶುದ್ಧ ಸುಳ್ಳಾಗಿದ್ದು, ಪೊಲೀಸ್ ತನಿಖೆ ವೇಳೆ ಎಲ್ಲಾ ದಾಖಲೆ ನೀಡಿ ಸಹಕರಿಸುತ್ತೇನೆ ಎಂದು ಮಾಧ್ಯಮಗಳಿಗೆ ಗೊರೂರು ಶ್ರೀಚಾಮುಂಡೇಶ್ವರಿ ಪೀಠಾಧಿಕಾರಿ ಮನೀಶ್ ಗುರೂಜಿ ಪ್ರತಿಕ್ರಿಯಿಸಿದ್ದಾರೆ.

ಪೋಟೋ 8 : ಹಲ್ಲೆಗೊಳಗಾದ ವಕೀಲ ಗಿರೀಶ್.

ಪೋಟೋ 9 : ಹಲ್ಲೆ ಮಾಡುತ್ತಿರುವ ಶ್ರೀಚಾಮುಂಡೇಶ್ವರಿ ಪೀಠಾಧಿಕಾರಿ ಮನೀಶ್ ಗುರೂಜಿ.

ಪೋಟೋ 10: ಗೊರೂರಿನ ಚಾಮುಂಡೇಶ್ವರಿ ಅಮ್ಮನವರ ಪೀಠದ ಮನೀಶ್ ಗುರೂಜಿ.