ಧಾರವಾಡ:

ಪ್ರಸ್ತುತ ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಬಹಳ ದೊಡ್ಡದಿದೆ. ಪ್ರಾಚೀನ ಗುರುಕುಲ ಪದ್ಧತಿಯ ಶಿಸ್ತು ಮತ್ತು ಆಧುನಿಕ ವಿಜ್ಞಾನದ ದೂರದೃಷ್ಟಿಯನ್ನು ಸಮನ್ವಯಗೊಳಿಸಿ ಶಿಕ್ಷಣ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ಮೈಂಡ್‌ ವೇವ್ ಎಜು ಹಬ್‌ ಸಂಸ್ಥೆಯು ಕಾರ್ಯ ಮಾಡಲಿ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ.ಎಸ್. ಕಿರಣಕುಮಾರ್ ಹೇಳಿದರು.

ಇಲ್ಲಿಯ ಸಾಧನಕೇರಿಯ ಬ್ರುವಂ ಹೋಟೆಲ್‌ ಬಳಿ ನೂತನವಾಗಿ ಸ್ಥಾಪನೆಯಾದ ಮೈಂಡ್‌ ವೇವ್‌ ಎಜು ಹಬ್‌ ಸಂಸ್ಥೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ದೇಶದ ಭವಿಷ್ಯ ತರಗತಿಗಳಲ್ಲಿ ನಿರ್ಮಾಣ ಎಂಬ ಮಹತ್ವಾಕಾಂಕ್ಷೆಯೊಂದಿಗೆ ಶಿಕ್ಷಕರ ತರಬೇತಿಗಾಗಿಯೇ ಮೀಸಲಾಗಿ ಈ ಸಂಸ್ಥೆಯು ಕಾರ್ಯ ಮಾಡಲಿ. ಶಿಕ್ಷಕರಲ್ಲಿ ಆತ್ಮವಿಶ್ವಾಸ ತುಂಬುವ ಮೂಲಕ ಅನೇಕರ ಜೀವನ ಬದಲಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಆನ್‌ಲೈನ್ ಮೂಲಕ ಶುಭ ಹಾರೈಸಿದ ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್, ಡಾ. ಇಂದುಮತಿ ರಾವ್ ಮಾತನಾಡಿ, ರಾಷ್ಟ್ರ ನಿರ್ಮಾಣದ ಕೆಲಸದಲ್ಲಿ ತೊಡಗಿರುವ ಒಂದು ವಿಶಿಷ್ಟ ಯೋಜನೆ ಎಂದರು. ​ಸಂಸ್ಥೆಯ ಮುಖ್ಯ ಕೇಂದ್ರವನ್ನು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಉದ್ಘಾಟಿಸಿ, ಸಮಾಜದಲ್ಲಿ ಶಿಕ್ಷಕರಿಗಿರುವ ಸ್ಥಾನಮಾನ ಅತ್ಯುನ್ನತ. ಶಿಕ್ಷಕರನ್ನು ಸಶಕ್ತಗೊಳಿಸುವುದು ಎಂದರೆ, ಅದು ನೇರವಾಗಿ ರಾಷ್ಟ್ರವನ್ನು ಸಶಕ್ತಗೊಳಿಸಿದಂತೆ ಎಂದರು.


ಸಂಸ್ಥೆಯ ರೂವಾರಿ, ಹಿರಿಯ ವಿಜ್ಞಾನಿ ಡಾ. ಶಿವಪ್ರಸಾದ, ಸಂಸ್ಥೆಯ ತತ್ವಶಾಸ್ತ್ರವನ್ನು ವಿವರಿಸಿದರು. ಧಾರವಾಡದ ಮಣ್ಣಿನ ಋಣ ತೀರಿಸಲು ತಮ್ಮೊಂದಿಗೆ ವಿವಿಧ ಕ್ಷೇತ್ರಗಳ ಪರಿಣಿತರಾದ ​ಪಿ.ವಿ. ಹಿರೇಮಠ, ಉದಯಕುಮಾರ, ​ಸುಭಾಷ್ ಪಾಟೀಲ್, ​ಮಹೇಶ್ ಮಸಾಳ ಈ ಸಂಸ್ಥೆ ಸ್ಥಾಪಿಸಿದ್ದೇವೆ. ಶಿಕ್ಷಕ ವೃತ್ತಿಗೆ ಗೌರವ ಮತ್ತು ಘನತೆ ಮರುಸ್ಥಾಪಿಸುವುದೇ ಈ ಸಂಸ್ಥೆಯ ಮೂಲ ಉದ್ದೇಶ ಎಂದು ಹೇಳಿದರು.

ಸೃಷ್ಟಿ ಸುರೇಶ್ ಮತ್ತು ತಂಡದಿಂದ ಸಿತಾರ್ ವಾದನ ನಡೆಯಿತು. 90 ದಿನ ತರಬೇತಿ ಪಡೆಯುತ್ತಿರುವ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳಿದ್ದರು. ಎಸ್.ಎಂ. ಉದಯಶಂಕರ್ ವಂದಿಸಿದರೆ, ಪಿ.ವಿ. ಹಿರೇಮಠ ಗಣ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.