ಗುರುಕುಮಾರ್ ಪಾಟೀಲ್ ಕ್ಷಮೆಯಾಚಿಸಲು ಆಗ್ರಹ

| Published : Mar 02 2025, 01:17 AM IST

ಸಾರಾಂಶ

ಸೊರಬ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿ ತುಚ್ಛವಾಗಿ ಕಾಣುತ್ತಿರುವ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಗುರುಕುಮಾರ್ ಪಾಟೀಲ್ ಅವರ ವರ್ತನೆಯನ್ನು ಖಂಡಿಸುತ್ತೇವೆ ಮತ್ತು ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ವೀರಶೈವ ಮಹಾಸಭಾದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವಿ.ಎ.ಬಸವರಾಜ ಅಗಸನಹಳ್ಳಿ ಆಗ್ರಹಿಸಿದರು.

ಸೊರಬ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಅವರ ಬಗ್ಗೆ ಸಲ್ಲದ ಆರೋಪಗಳನ್ನು ಮಾಡಿ ತುಚ್ಛವಾಗಿ ಕಾಣುತ್ತಿರುವ ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಗುರುಕುಮಾರ್ ಪಾಟೀಲ್ ಅವರ ವರ್ತನೆಯನ್ನು ಖಂಡಿಸುತ್ತೇವೆ ಮತ್ತು ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ವೀರಶೈವ ಮಹಾಸಭಾದ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವಿ.ಎ.ಬಸವರಾಜ ಅಗಸನಹಳ್ಳಿ ಆಗ್ರಹಿಸಿದರು.ಪಟ್ಟಣದ ಮುರುಘಾ ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡೆಸಿದ ಸಭೆಯಲ್ಲಿ ತಾಲೂಕಿಗೆ ಯಡಿಯೂರಪ್ಪ ಮತ್ತು ಸಂಸದ ಬಿ.ವೈ.ರಾಘವೇಂದ್ರ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ವೀರಶೈವ ಲಿಂಗಾಯತರನ್ನು ಓಟಿಗಾಗಿ ಬಳಸಿಕೊಂಡಿದ್ದಾರೆ ಎಂದು ಸಲ್ಲದ ಹೇಳಿಕೆ ನೀಡುವುದರ ಜೊತೆಗೆ ಏಕವಚನ ಬಳಕೆ ಮಾಡಿದ್ದಾರೆ. ಗುರುಕುಮಾರ್ ಪಾಟೀಲ್ ಅವರ ತುಚ್ಛ ಹೇಳಿಕೆಯನ್ನು ತಾಲೂಕು ವೀರಶೈವ ಮಹಾಸಭಾ ಖಂಡಿಸುತ್ತದೆ ಎಂದರು.ವೀರಶೈವ ಲಿಂಗಾಯತ ಸಮಾಜ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ. ಎಲ್ಲಾ ಪಕ್ಷದಲ್ಲಿಯೂ ವೀರಶೈವ ಲಿಂಗಾಯತ ನಾಯಕರಿದ್ದಾರೆ. ಹೀಗಿದ್ದೂ ಅಭಿವೃದ್ಧಿಯ ಹರಿಕಾರ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಹೇಳಿಕೆ ನೀಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ. ಗುರುಕುಮಾರ ಪಾಟೀಲ್ ಹೇಳಿಕೆಯಿಂದ ಸಮಾಜ ಬಾಂಧವರು ಮುಜುಗರಕ್ಕೀಡಾಗಿದ್ದಾರೆ ಎಂದರು.

ಬಿ.ಎಸ್.ಯಡಿಯೂರಪ್ಪ ರಾಜ್ಯದ ಪರಮೋಚ್ಛ ನಾಯಕರಾಗಿದ್ದು, ಮಠ, ಮಂದಿರಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಸಮಾಜದ ಒಗ್ಗಟ್ಟಿಗೆ ಕಾರಣರಾಗಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ತಂದೆಯ ಹಾದಿಯಲ್ಲಿಯೇ ನಡೆದು ಜಾತ್ಯಾತೀತವಾಗಿ ಪ್ರತಿ ಸಮುದಾಯಗಳಿಗೂ ಸಮುದಾಯ ಭವನಗಳನ್ನು ನಿರ್ಮಿಸಲು ಶ್ರಮಿಸಿದ್ದಾರೆ. ಇಂಥ ಅಭಿವೃದ್ಧಿಯ ಹರಿಕಾರರ ವಿರುದ್ಧ ಹೇಳಿಕೆ ನೀಡಿ ನಿಂದಿಸುವುದು ಸರಿಯಲ್ಲ ಎಂದರು.ಕಳೆದ ನಾಲ್ಕೈದು ತಿಂಗಳ ಹಿಂದೆ ನಡೆದ ತಾಲೂಕು ವೀರಶೈವ ಮಹಾಸಭಾದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾಗುವುದಕ್ಕೆ ಬಿ.ವೈ.ರಾಘವೇಂದ್ರ ಹಸ್ತಾಕ್ಷೇಪ ಮಾಡಿದ್ದಾರೆ. ಈ ಕಾರಣದಿಂದ ಚುನಾವಣೆ ನಡೆಯಿತು. ಇಲ್ಲದಿದ್ದರೆ ತಾವು ಅವಿರೋಧವಾಗಿ ಆಯ್ಕೆಯಾಗುತ್ತಿದೆ ಎಂದು ಆರೋಪ ಮಾಡಿರುವ ಗುರುಕುಮಾರ್ ಪಾಟೀಲ್ ಹೇಳಕೆ ಸತ್ಯಕ್ಕೆ ದೂರವಾಗಿದ್ದು, ವೀರಶೈವ ಮಹಾಸಭಾದ ತಾಲೂಕು ಘಟಕ ಚುನಾವಣೆ ನಡೆಯಲು ಗುರುಕುಮಾರ ಪಾಟೀಲ್ ಕಾರಣ. ಈ ಬಗ್ಗೆ ಸಂಸದರ ಹೆಸರು ತರುವುದು ಶೋಭೆಯಲ್ಲ. ಆದ್ದರಿಂದ ಅವರು ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ವೀರಶೈವ ಮಹಾಸಭಾ ತಾಲೂಕು ಘಟಕದ ಉಪಾಧ್ಯಕ್ಷ ಕೊಟ್ರೇಶ್‌ಗೌಡ ಚಿಕ್ಕಸವಿ, ನಿರ್ದೇಶಕರಾದ ಡಿ.ಶಿವಯೋಗಿ, ಲಿಂಗರಾಜ ಕೆ.ಗೌಡರ್ ಕೋಣನಮನೆ, ವಿಜಯೇಂದ್ರಗೌಡ ತಲಗುಂದ, ಶಶಿಧರಗೌಡ ಕೆ.ಎಂ. ಮಾವಲಿ, ಸೋಮಪ್ಪ ಬಾರಂಗಿ, ಕೊಟ್ರೇಶ್‌ಸ್ವಾಮಿ ನೇರಲಗಿ, ಮಮತಾ ಮಲ್ಲಿಕಾರ್ಜುನ ಆನವಟ್ಟಿ, ಮಾಲಾ ಶಶಿಧರ ಆನವಟ್ಟಿ, ಪ್ರಭಾವತಿ ಆರ್.ಸಿ.ಸಮನವಳ್ಳಿ, ರಜನಿ ಹರಳಗಿ, ರೇಖಾ ಪಾಟೀಲ್ ಲಕ್ಕವಳ್ಳಿ, ರೇಣುಕಮ್ಮ ಗೌಳಿ ಹಾಜರಿದ್ದರು.