ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಸಾರ್ವಜನಿಕರು ತಾಲೂಕು ಕಚೇರಿಗೆ ಸಲ್ಲಿಸಿರುವ ವಿವಿಧ ಅರ್ಜಿಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ತಹಸೀಲ್ದಾರರ ಸಮ್ಮುಖ ಕಂದಾಯ ಅಧಿಕಾರಿಗಳ ಸಭೆ ನಡೆಸಿದರು.
ಉಡುಪಿ: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿಯ ಸಾರ್ವಜನಿಕರು ತಾಲೂಕು ಕಚೇರಿಗೆ ಸಲ್ಲಿಸಿರುವ ವಿವಿಧ ಅರ್ಜಿಗಳು ಬಾಕಿ ಇದ್ದ ಹಿನ್ನೆಲೆಯಲ್ಲಿ ತಹಸೀಲ್ದಾರರ ಸಮ್ಮುಖ ಕಂದಾಯ ಅಧಿಕಾರಿಗಳ ಸಭೆ ನಡೆಸಿದರು.
ಹೋಬಳಿಯ ಯಾವುದೇ ಅರ್ಜಿದಾರರು ಸರಿಯಾದ ಪೂರಕ ದಾಖಲೆ ನೀಡಿದ ಹೊರತಾಗಿಯೂ ಸಕಾಲದಲ್ಲಿ ಕಡತ ವಿಲೇವಾರಿ ಆಗದೇ ಇದ್ದಲ್ಲಿ ಇಡೀ ತಾಲೂಕು ಕಚೇರಿ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಸಾರ್ವಜನಿಕರ ಅರ್ಜಿಗಳನ್ನು ಬಾಕಿ ಇರಿಸಿಕೊಳ್ಳದೆ ಅಗತ್ಯ ಇದ್ದಲ್ಲಿ ಮಾತ್ರ ಹಿಂಬರಹ ನೀಡಿ, ಉಳಿದಂತೆ ಕಡತಗಳನ್ನು ಅರ್ಜಿದಾರರಿಗೆ ಅನುಕೂಲ ಆಗುವ ದೃಷ್ಟಿಯಲ್ಲಿ ವಿಲೇವಾರಿ ಮಾಡಲು ಮುಖ್ಯವಾಗಿ ಆರ್ ಟಿ ಸಿ ಸಮಸ್ಯೆಗಳು, ಭೂ ವ್ಯಾಜ್ಯ, ಅಕ್ರಮ ಸಕ್ರಮ, 94 ಸಿ, ಆರ್ ಆರ್ ಟಿ ಹಾಗೂ 11 ಈ ಕಡತಗಳನ್ನು ಆದ್ಯತೆಯಲ್ಲಿ ವಿಲೇ ಗೊಳಿಸಲು ಸೂಚನೆ ನೀಡಿದರು.ಶಾಸಕರ ಕಚೇರಿಗೆ ಸಮಸ್ಯೆಗಳ ನಿವಾರಣೆ ಬಗ್ಗೆ ಮನವಿ ಮಾಡಿದ ಅರ್ಜಿದಾರರನ್ನು ಅಧಿಕಾರಿಗಳ ಜೊತೆ ಮುಖಾಮುಖಿ ಮಾಡಿಸಲಾಗಿ ಅರ್ಜಿಗಳನ್ನು ಕೂಡಲೇ ಇತ್ಯರ್ಥ ಪಡಿಸಲು ಸೂಚಿಸಿ, ಸಮರ್ಪಕ ದಾಖಲೆ ಇದ್ದರೂ ಕೆಲಸ ಮಾಡಿ ಕೊಡದೇ ಅಥವಾ ಸತಾಯಿಸದೆ ತ್ವರಿತವಾಗಿ ಸ್ಪಂದಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಂಟಿ ಸರ್ವೇ ಚುರುಕುಗೊಳಿಸಿ: ಅಕ್ರಮ ಸಕ್ರಮ ಹಾಗೂ 94 ಸಿ ಅರ್ಜಿಗಳ ತ್ವರಿತ ವಿಲೇವಾರಿ ನೆಲೆಯಲ್ಲಿ ನಿರಂತರವಾಗಿ ಜಂಟಿ ಸರ್ವೇ ನಡೆಸಲು ಈಗಾಗಲೇ ಹಲವು ಬಾರಿ ತಿಳಿಸಲಾಗಿದೆ. ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದ್ದರೂ, ಜಂಟಿ ಸರ್ವೇಯನ್ನು ಚುರುಕು ಗೊಳಿಸಿ ಅರ್ಹರಿಗೆ ಭೂಮಿ ಹಕ್ಕು ನೀಡಲು ಕ್ರಮ ವಹಿಸಲು ತಹಸೀಲ್ದಾರರಿಗೆ ಸೂಚನೆ ನೀಡಿದರು.94 ಸಿ ಹಕ್ಕು ಪತ್ರ ವಿತರಣೆ: ವಂಡ್ಸೆ ಹೋಬಳಿಯ ತಲ್ಲೂರು ಹಾಗೂ ದೇವಲ್ಕುಂದ ಗ್ರಾಮಗಳ ಅರ್ಹ 3 ಜನ ಫಲಾನುಭವಿಗಳಿಗೆ ಇದೇ ಸಂದರ್ಭದಲ್ಲಿ ಶಾಸಕರು 94 ಸಿ ಹಕ್ಕು ಪತ್ರ ವಿತರಿಸಿದರು.ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಉಪ ತಹಸೀಲ್ದಾರ್ ಪ್ರಕಾಶ್, ಕಂದಾಯ ನಿರೀಕ್ಷಕ ರಾಘವೇಂದ್ರ ಹಾಗೂ ಇತರರು ಉಪಸ್ಥಿತರಿದ್ದರು.