ಗುರುರಾಜ ಭಟ್ಟರು ಇತಿಹಾಸ ಸಂಶೋಧನೆಗೆ ಮಾರ್ಗಸೂಚಿ ರೂಪಿಸಿದ ವ್ಯಕ್ತಿ: ಪಿ.ಗಣಪಯ್ಯ ಭಟ್

| Published : Jun 14 2024, 01:01 AM IST

ಗುರುರಾಜ ಭಟ್ಟರು ಇತಿಹಾಸ ಸಂಶೋಧನೆಗೆ ಮಾರ್ಗಸೂಚಿ ರೂಪಿಸಿದ ವ್ಯಕ್ತಿ: ಪಿ.ಗಣಪಯ್ಯ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ಮಿಲಾಗ್ರಿಸ್ ಕಾಲೇಜಿನ ಪ್ರಥಮ ಪ್ರಾಂಶುಪಾಲ ಡಾ.ಗುರುರಾಜ ಭಟ್ ಅವರ ಜನ್ಮ ಶತಮಾನೋತ್ಸವ ಸಮಾರಂಭ ನಡೆಯಿತು. ಹಿರಿಯ ಸಂಶೋಧಕ ಡಾ. ಪಿ.ಗಣಪಯ್ಯ ಭಟ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲ್ಯಾಣಪುರ

ಪಾದೂರು ಡಾ. ಗುರುರಾಜ್ ಭಟ್ಟರು ಇತಿಹಾಸ ಕ್ಷೇತ್ರದಲ್ಲಿ ಸಂಶೋಧನೆಗೆ ಮಾರ್ಗಸೂಚಿಯನ್ನೇ ರೂಪಿಸಿದ ವ್ಯಕ್ತಿ. ವಿಶೇಷವಾಗಿ ತುಳುನಾಡಿನ ಸಂಶೋಧನಾ ಕ್ಷೇತ್ರದಲ್ಲಿ ನೂರಾರು ಸಂಶೋಧಕರನ್ನು ಸೃಷ್ಟಿಸಿದವರು ಎಂದು ಮೂಡುಬಿದಿರೆಯ ಹಿರಿಯ ಸಂಶೋಧಕ ಡಾ. ಪಿ.ಗಣಪಯ್ಯ ಭಟ್ ಹೇಳಿದರು.

ಅವರು ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ಪ್ರಥಮ ಪ್ರಾಂಶುಪಾಲ ಡಾ.ಗುರುರಾಜ ಭಟ್ ಅವರ ಜನ್ಮ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಗುರುರಾಜ ಭಟ್ ಅವರ ಜೀವನ ಚರಿತ್ರೆ, ಕೊಡುಗೆಗಳು ಮತ್ತು ಸಾಧನೆಗಳ ಮಾತನಾಡಿದ ಅವರು, ಭಟ್ಟರು ಶಿಲ್ಪಕಲೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಮೈಲುಗಟ್ಟಲೇ ಬರಿಗಾಲಿನಲ್ಲಿ ನಡೆದು ಅಧ್ಯಯನ ಮಾಡುತ್ತಿದ್ದರು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ, ಸಾಮಾಜಿಕ ಜಾಲತಾಣಗಳಿಲ್ಲದ ಆ ಐವತ್ತರ ದಶಕದಲ್ಲಿ ಸಂಶೋಧಕ ಗುರುರಾಜ ಭಟ್ ಜಗತ್ತಿಗೆ ತಿಳಿದಿರುವ ವ್ಯಕ್ತಿಯಾಗಿದ್ದು, ನಮ್ಮ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದ ಸಂಸ್ಥಾಪಕ ಪ್ರಾಂಶುಪಾಲರಾಗಿದ್ದರು ಎಂಬುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಉಡುಪಿಯ ಡಾ.ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಶಿಕ್ಷಕರ ಸಂಘ ‘ಮಾನುಷ’ ಮತ್ತು ಮಿಲಾಗ್ರಿಸ್ ಕಾಲೇಜಿನ ಐಕ್ಯೂಎಸಿಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಟ್ರಸ್ಟಿನ ವಿಸ್ವಸ್ಥ ಪರಶುರಾಮ ಭಟ್, ಹಿರಿಯ ಸಾಹಿತ್ಯ ವಿಮರ್ಶಕ ಮುರಳೀಧರ ಉಪಧ್ಯಾಯ, ಡಾ.ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ನಿರ್ದೇಶಕ ಬಿ. ಜಗದೀಶ್ ಶೆಟ್ಟಿ, ಮಾನುಷದ ಉಪಾಧ್ಯಕ್ಷ ರಾಬರ್ಟ್ ರೊಡ್ರಿಗಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ.ಜಯರಾಮ ಶೆಟ್ಟಿಗಾರ್ ಸ್ವಾಗತಿಸಿದರು. ಕನ್ನಡ ವಿಭಾಗದ ಡಾ.ಹರಿಣಾಕ್ಷಿ ಎಂ.ಡಿ. ವಂದಿಸಿದರು. ರವಿನಂದನ್ ಭಟ್ ಕಾರ್ಯಕ್ರಮ ನಿರೂಪಿಸಿದರು.