ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ಕುರಿತು ಸರ್ಕಾರಿ ಹಾಗೂ ಅನುದಾನಿತ ಶಾಲೆ ಮುಖ್ಯ ಶಿಕ್ಷಕರೊಂದಿಗೆ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಮಾಲೋಚನೆ ನಡೆಸಿದರು.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ಕುರಿತು ಸರ್ಕಾರಿ ಹಾಗೂ ಅನುದಾನಿತ ಶಾಲೆ ಮುಖ್ಯ ಶಿಕ್ಷಕರೊಂದಿಗೆ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಮಾಲೋಚನೆ ನಡೆಸಿದರು.
ಬಳಿಕ ಮಾತನಾಡಿದ ಶಾಸಕರು ಉಡುಪಿಯ ಯಕ್ಷಗಾನ ಕಲಾರಂಗ ಸಂಸ್ಥೆಯು ಕಳೆದ ಎರಡು ವರ್ಷಗಳಿಂದ ಕ್ಷೇತ್ರದ ಆಸಕ್ತ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಯಕ್ಷಗಾನ ಶಿಕ್ಷಣ ನೀಡಿ, ಅವರಿಗೆ ನಮ್ಮ ಸಂಸ್ಕೃತಿಯ ಪರಿಚಯ, ಭಾಷಾ ಪ್ರೌಢಿಮೆ ಜೊತೆಗೆ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ಬಾರಿ 17 ಶಾಲೆಗಳಲ್ಲಿ ಯಕ್ಷಗಾನ ತರಬೇತಿ ನೀಡಿದ್ದು, ಈ ಬಾರಿ 19 ಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತದೆ ಎಂದರು. ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯಡಿ ಸಮರ್ಪಕ ಸೂರಿಲ್ಲದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಕುಟುಂಬಕ್ಕೆ ಮನೆ ಒದಗಿಸುವ ಮೂಲಕ ನೂರಾರು ವಿದ್ಯಾರ್ಥಿಗಳ ಜೀವನ ಸುಧಾರಿಸಿದೆ. ಬೈಂದೂರು ಕ್ಷೇತ್ರದಾದ್ಯಂತ ಸಮರ್ಪಕ ಮನೆ ಇಲ್ಲದ ನೂರಾರು ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು, ಇಲ್ಲಿಯೂ ವಿದ್ಯಾಪೋಷಕ್ ಯೋಜನೆಯ ವಿಸ್ತರಿಸಲು ಶಾಸಕರು ಮನವಿ ಮಾಡಿದರು. ಸಭೆಯಲ್ಲಿ ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಯಕ್ಷಗಾನ ಕಲಾ ರಂಗದ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್ ಇದ್ದರು.