ಸಾರಾಂಶ
ಶಿಸ್ತು, ಶ್ರದ್ಧೆ ಮತ್ತು ಜ್ಞಾನ ಪ್ರತಿಬಿಂಬ ಗುರುಗಳು ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಶಿಸ್ತು, ಶ್ರದ್ಧೆ ಮತ್ತು ಜ್ಞಾನ ಪ್ರತಿಬಿಂಬ ಗುರುಗಳು ಎಂದು ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಹೇಳಿದರು.ಇಲ್ಲಿಗೆ ಸಮೀಪದ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಚೇರಂಬಾಣೆ ಗೌಡ ಸಮಾಜದ ಸಭಾಂಗಣದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಾರ ಆಯೋಜಿಸಿದ ಗುರುವಂದನಾ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಬದುಕಿನಲ್ಲಿ ತಂದೆ ತಾಯಿಗೆ ಇರುವ ಶ್ರೇಷ್ಠ ಸ್ಥಾನದಲ್ಲಿ ನಿಲ್ಲುವವರು ಗುರುಗಳು ಎಂದ ಅವರು ಗುರುಪೂರ್ಣಿಮೆ ದಿನವನ್ನು ಆಚರಿಸುವುದು ನಮ್ಮ ಸಂಸ್ಕೃತಿಯ ಜ್ಞಾನ ಪರಂಪರೆಗಾಗಿ ನಮಿಸುವ ಸನ್ನಿವೇಶ. ಇದು ಕೇವಲ ಧಾರ್ಮಿಕ ಆಚರಣೆ ಅಲ್ಲ. ಜೀವನದ ಸತ್ಯವನ್ನು ಅರಿತವರಿಗೆ ಕೃತಜ್ಞತೆಯ ಪ್ರಾಮಾಣಿಕ ಸೂಚನೆ. ಹಿಂದೂ ಧರ್ಮದ ಪ್ರಕಾರ ವೇದವ್ಯಾಸರ ಜನ್ಮದಿನ, ಗುರು ದ್ರೋಣಾಚಾರ್ಯರಿಗೆ ಏಕಲವ್ಯ ತನ್ನ ಬಲಗೈಯ ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ನೀಡಿದ ದಿನ ಎಂದು ದಿನದ ಮಹತ್ವದ ಬಗ್ಗೆ ಮಾತನಾಡಿದರು.ಬೈಮನ ಜ್ಯೋತಿ ತಿಮ್ಮಯ್ಯ ಅವರು ಗುರುಪೂರ್ಣಿಮೆಯ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿ ಮಾತನಾಡಿದರು .
ಈ ಸಂದರ್ಭ ಗುರುವಂದನಾ ಗೀತೆಗಳನ್ನು ಸಮೂಹ ಗಾಯನದಲ್ಲಿ ಹಾಡಿ ಬಳಗದ ಸದಸ್ಯರು ಸಂಭ್ರಮಿಸಿದರು .ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಪಾಣತಲೆ ತಾರಾಮಣಿ ಹಾಗೂ ಅಣ್ಣೆಚ್ಚಿ ಬೋಜಮ್ಮ ಅವರನ್ನು ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬೈಮನ ಭವಾನಿ ದೀಪಕ್ ಪ್ರಾರ್ಥಿಸಿ, ಕೂಡ ಕಂಡಿ ಸೋನಿ ಸುದೀಪ್ ಸ್ವಾಗತಿಸಿದರು, ಕೇಕಡ ಪೂಜಾ ನಾಗೇಂದ್ರ ಕಾರ್ಯಕ್ರಮ ನಿರೂಪಿಸಿ ಕೊಡಪಾಲು ತೀರ್ಥ ಗಣಪತಿ ವಂದಿಸಿದರು,