ಶೂನ್ಯದಿಂದ ಸಾಧನೆ ಶಿಖರವೇರಿದ ಮಠದ ಗುರುಸಿದ್ದಯ್ಯ

| Published : Aug 23 2025, 02:00 AM IST

ಸಾರಾಂಶ

ಶೂನ್ಯದಿಂದ ಸಾಧನೆಯ ಶಿಖರವೇರಿದ ಮಠದ ಗುರುಸಿದ್ದಯ್ಯನವರ ಶ್ರಮ ಮತ್ತು ಅವರು ನಡೆದು ಬಂದ ದಾರಿ ಇಂದಿನ ಯುವಪೀಳಿಗೆಗೆ ಆದರ್ಶವಾಗಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದಿದ್ದಾರೆ.

- ಓಂಕಾರ ಶಿವಾಚಾರ್ಯ ಸ್ವಾಮೀಜಿ ಶ್ಲಾಘನೆ । ಗುರುಸಿದ್ದಯ್ಯ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮ-ಪ್ರತಿಭಾ ಪುರಸ್ಕಾರ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶೂನ್ಯದಿಂದ ಸಾಧನೆಯ ಶಿಖರವೇರಿದ ಮಠದ ಗುರುಸಿದ್ದಯ್ಯನವರ ಶ್ರಮ ಮತ್ತು ಅವರು ನಡೆದು ಬಂದ ದಾರಿ ಇಂದಿನ ಯುವಪೀಳಿಗೆಗೆ ಆದರ್ಶವಾಗಬೇಕು ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.

ನಗರದ ಹಿರೇಮಠದಲ್ಲಿ ಗುರುವಾರ ಶ್ರೀ ಮಲ್ಲಿಕಾರ್ಜುನ ಸಮೂಹ ಸಂಸ್ಥೆಗಳ ಅಧ್ಯಕ್ಷ ಲಿಂಗೈಕ್ಯ ವೇ.ನರಗನಹಳ್ಳಿ ಮಠದ ಗುರುಸಿದ್ದಯ್ಯನವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀ ಮಲ್ಲಿಕಾರ್ಜುನ ಮೋಟರ್ಸ್‌ ಗುರುಸಿದ್ದಯ್ಯ ಅವರ ಕನಸಿನ ಕೂಸಾಗಿತ್ತು. ಸಂಸ್ಥೆ ಅಭ್ಯುದಯಕ್ಕಾಗಿ ಹಗಲು-ಇರಳು ಶ್ರಮಿಸಿದರು. ಪರಿಣಾಮ ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆ ಇಂದು 5 ಹೆಸರಾಂತ ಮೋಟಾರು ಕಂಪನಿಗಳ ವಾಹನಗಳ ಸೇವೆ ಮತ್ತು ವಿತರಣೆಗೆ ಹೆಸರಾಗಿದೆ. ಈ ಸಾಧನೆ ಸಾಮಾನ್ಯವಾದುದಲ್ಲ. ಇದರ ಹಿಂದೆ ಅವರ ದಣಿವರಿಯದ ದುಡಿಮೆ ಇದೆ ಎಂದರು. ಸರಳ ವ್ಯಕ್ತಿತ್ವದ ಗುರುಸಿದ್ದಯ್ಯ ಡಾಂಬಿಕತೆಗೆ ಆಸ್ಪದ ನೀಡಲಿಲ್ಲ. ಶಿಕ್ಷಣ, ಧಾರ್ಮಿಕ ಕೈಂಕರ್ಯ, ಸಮಾಜ ಸೇವೆ ಹೀಗೆ ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ದುಡಿಮೆಯ ಸ್ವಲ್ಪ ಭಾಗ ಸಮಾಜ ಸೇವೆಗಾಗಿಯೇ ಮೀಸಲಿಟ್ಟಿದ್ದರು. ಅವರ ಪರಂಪರೆಯನ್ನು ಇಂದು ಅವರ ಧರ್ಮಪತ್ನಿ ಶಕುಂತಲಾ ಮತ್ತು ಪುತ್ರರು ಮುಂದುವರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಮಕ್ಕಳು ಶಿಕ್ಷಣವಂತರಾದರೆ ಹೆತ್ತವರ ಶ್ರಮಕ್ಕೆ ಬೆಲೆ ಬರುತ್ತದೆ ಎನ್ನುವುದು ಗುರುಸಿದ್ದಯ್ಯನವರ ದೂರದೃಷ್ಠಿಯಾಗಿತ್ತು. ಅವರ ಸಂಸ್ಥೆ ಇಂದು 150ಕ್ಕೂ ಹೆಚ್ಚು ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದೆ. ಶೈಕ್ಷಣಿಕವಾಗಿ ಅವರನ್ನು ಪ್ರೋತ್ಸಾಹಿಸುತ್ತಿದೆ. ಕಾರ್ಮಿಕರ ಅನವರತ ಶ್ರಮದಿಂದಲೇ ಸಂಸ್ಥೆ ದೊಡ್ಡ ಮಟ್ಟಕ್ಕೆ ಬರಲು ಸಾಧ್ಯವಾಗಿದೆ ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಅದರಂತೆ ಕಾರ್ಮಿಕರು ಮತ್ತು ಅವರ ಮಕ್ಕಳ ಶ್ರೇಯೋಭಿವೃದ್ಧಿಗೆ ಇಂದಿನ ಕಾರ್ಯಕ್ರಮ ಶ್ಲಾಘನೀಯ ಎಂದು ಹೇಳಿದರು.

ಆರ್‌ಎಲ್ ಕಾನೂನು ಕಾಲೇಜು ನಿವೃತ್ತ ಪ್ರಾಚಾರ್ಯ ಡಾ. ಎಂ.ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಗುರುಸಿದ್ದಯ್ಯನವರು ಡಿಪ್ಲೊಮಾ ನಂತರ ಹೊಟ್ಟೆಪಾಡಿಗಾಗಿ ಸೈಕಲ್ ಪಂಕ್ಚರ್ ಹಾಕಲು ಆರಂಭಿಸಿದರು. ಅಲ್ಲಿಂದ ಆರಂಭವಾದ ಅವರ ವೃತ್ತಿ ಬದುಕಿನಲ್ಲಿ ಎಂದೂ ತಿರುಗಿ ನೋಡಲಿಲ್ಲ. ಹಂತ ಹಂತವಾಗಿ ತಮ್ಮ ಜಾಣ್ಮೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ವಿ ಉದ್ದಿಮೆದಾರರಾದರು. ಅವರ ಶ್ರಮ ಮತ್ತು ಜೀವನ ಮೌಲ್ಯ ಎಲ್ಲರಿಗೂ ಮಾದರಿ ಆಗಬೇಕಾಗಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಜಿ. ಪುಟ್ಟಸ್ವಾಮಿ ಮಾತನಾಡಿ, ಗ್ರಾಮೀಣ ಭಾಗದ ಓರ್ವ ಯುವಕ ಇಷ್ಟೆಲ್ಲ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರ. ಒಂದು ಸಂಸ್ಥೆ ಕಟ್ಟಿ ನೂರಾರು ಜನರಿಗೆ ಕೆಲಸ ನೀಡುವುದು ಸಾಮಾನ್ಯ ವಿಚಾರವಲ್ಲ. ಗುರುಸಿದ್ದಯ್ಯ ಎಲ್ಲ ವರ್ಗದ ಜನರನ್ನು ಇಷ್ಟಪಡುತ್ತಿದ್ದ ವ್ಯಕ್ತಿ. ಅಂಥವರ ಅಕಾಲಿಕ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿಯೇ ಪತ್ನಿ ಮತ್ತು ಮಕ್ಕಳು ನಡೆಯುತ್ತಿರುವುದು ಸಂತೋಷದ ವಿಚಾರ ಎಂದರು.

ಇದೇ ವೇಳೆ ಕಂಪನಿಯ ಕಾರ್ಮಿಕರ 95 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬನ್ನಯ್ಯ ಸ್ವಾಮಿ, ಮಲ್ಲಿಕಾರ್ಜುನ ಟೆಂಪೋ ಸೇಲ್ಸ್ ಅಂಡ್ ಸರ್ವಿಸ್‌ನ ಸಿಇಒ ಎನ್.ಜಿ. ಚಂದ್ರಶೇಖರ್, ಗುರು ಮೋಟಾರ್ ಸಿಇಒ ಎನ್.ಜಿ.ಸಿದ್ದೇಶ್ ಇತರರು ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಬಾಪೂಜಿ ಬ್ಯಾಂಕ್‌ ಸಹಕಾರ ಮರೆಯಲಾಗದು: ಶಕುಂತಲಾ ಮಲ್ಲಿಕಾರ್ಜುನ್ ಮೋಟಾರ್ ಅಂಡ್ ಸ್ಕೂಟರ್ ಮಾರ್ಟ್ ಅಧ್ಯಕ್ಷೆ ಶಕುಂತಲಾ ಗುರುಸಿದ್ದಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಬ್ಯಾಂಕುಗಳು ಮನೆ ಮನೆಗೆ ಬಂದು ಸಾಲ ಕೊಡುತ್ತಿವೆ. ಆದರೆ ಅಂದಿನ ದಿನಗಳಲ್ಲಿ ಯಾವ ಬ್ಯಾಂಕುಗಳು ವ್ಯಾಪಾರ, ಉದ್ದಿಮೆಗಾಗಿ ಸಹಾಯ ಮಾಡುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ನನ್ನ ನೌಕರಿಯಿಂದ ಪಡೆದ ಸಾಲದ ಹಣದಲ್ಲಿ ಪತಿ ಗುರುಸಿದ್ದಯ್ಯ ಅವರು ಸೆಕೆಂಡ್ ಹ್ಯಾಂಡ್ ಸ್ಕೂಟರ್‌ಗಳನ್ನು ತರಲು ಬೆಂಗಳೂರಿಗೆ ಹೋಗುತ್ತಿದ್ದರು. ಸಕಾಲಕ್ಕೆ ಹಣಕಾಸು ನೀಡಿದ ಬಾಪೂಜಿ ಬ್ಯಾಂಕ್‌ ಸಹಕಾರ ಎಂದೂ ಮರೆಯಲಾಗದು. ಈ ಮಾತನ್ನು ಶಾಮನೂರು ಶಿವಶಂಕರಪ್ಪ ಅವರ ಬಳಿ ಸಾಕಷ್ಟು ಬಾರಿ ಹೇಳಿಕೊಂಡಿದ್ದೇನೆ ಎಂದರು. ಕಷ್ಟದ ದಿನಗಳನ್ನು ನೆನಪಿಟ್ಟುಕೊಂಡು ಸಾಧನೆ ಮಾಡಿದರೆ ಯಶಸ್ಸು ಖಂಡಿತಾ ಸಿಗುತ್ತದೆ. ಶ್ರಮದಿಂದ ಮಾತ್ರವೇ ಸಾಧನೆ ಸಾಧ್ಯ. ಎಲ್ಲೂ ಜಾದೂ ನಡೆಯುವುದಿಲ್ಲ. ಹಾಗಾಗಿ ಎಲ್ಲ ಒಳ್ಳೆಯದು, ಕೆಟ್ಟದನ್ನು ಇಲ್ಲಿಂದಲೇ ಪಡೆಯಬೇಕು, ಇಲ್ಲಿಯೇ ಬಿಟ್ಟು ಹೋಗಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

- - -

-22ಕೆಡಿವಿಜಿ35.ಜೆಪಿಜಿ:

ದಾವಣಗೆರೆಯಲ್ಲಿ ಲಿಂ.ಗುರುಸಿದ್ದಯ್ಯನವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಓಂಕಾರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು.