ಸಾರಾಂಶ
ನರಗುಂದ: ಪಟ್ಟಣದ ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠದಲ್ಲಿ ನಮ್ಮೂರ ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ರಥೋತ್ಸವದ ಜಾತ್ರಾ ಮಹೋತ್ಸವವು ಮಾ.1ರಿಂದ ಮಾ.11ರ ವರೆಗೆ ಜರುಗುವುದೆಂದು ಶ್ರೀಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನಂತರ ಮಾತನಾಡಿ ಲಿಂ.ಶ್ರೀ ಮಘಚ ಲೀಲಾಮೂರ್ತಿ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳವರ 44ನೇ ಪುಣ್ಯ ಸ್ಮರಣೋತ್ಸವ ಹಾಗೂ ಲಿಂ. ಶ್ರೀ ಮಘಚ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳವರ 12ನೇ ಪುಣ್ಯ ಸ್ಮರಣೋತ್ಸವದ ಸಂದರ್ಭದಲ್ಲಿ ಮಾ.1ರಿಂದ ಮಾ.11 ರವರೆಗೆ ಪ್ರತಿನಿತ್ಯ ಸಂಜೆ 6-30 ರಿಂದ ಬೆಣ್ಣಿ ಬಜಾರದಲ್ಲಿನ ಶ್ರೀ ಮುರುಘರಾಜೇಂದ್ರ ಪ್ರೀ ಬೋರ್ಡಿಂಗ್ ಟ್ರಸ್ಟ್ ಜಾಗೆಯಲ್ಲಿ ಶ್ರೀ ಸೊನ್ನಲಗಿ ಸಿದ್ದರಾಮೇಶ್ವರ ಚರಿತೆಯ ಪುರಾಣ ಪ್ರವಚನವನ್ನು ರೋಣ ತಾಲೂಕಿನ ಬೂದಿಹಾಳ ಗ್ರಾಮದ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ಗವಿಸಿದ್ಧೇಶ್ವರ ಶಾಸ್ತ್ರೀಗಳು ನಡೆಸಿಕೊಡಲಿದ್ದಾರೆ. ಶ್ರೀಮಠಕ್ಕೆ ರಥ ಆಗಮನಪಂಚಗೃಹ ಗುಡ್ಡದ ಹಿರೇಮಠಕ್ಕೆ ರಥವು ಇದ್ದಿದ್ದಿಲ್ಲ. ಪ್ರಥಮದಲ್ಲಿ ಶ್ರೀಮಠಕ್ಕೆ ಇಮಾಮಸಾಬ ಮಹ್ಮದಸಾಬ ಶರಣರ ಸೇವಾ ಟ್ರಸ್ಟ್ ಇದರ ಅಧ್ಯಕ್ಷರಾದ ಬಾಬುಸಾಬ ಶರಣರು ಹಾಗೂ ಅವರ ಭಕ್ತವರ್ಗವು ದೇಣಿಗೆ ರೂಪದಲ್ಲಿ ತೇರನ್ನು ಮಾಡಿಸಿಕೊಟ್ಟಿದ್ದಾರೆ. ಆ ನೂತನ ರಥವು ಮಾ.7ರಂದು ಶ್ರೀಮಠಕ್ಕೆ ಆಗಮನವಾಗಲಿದೆ. ಬೆ.9 ಗಂಟೆಗೆ ಅರ್ಬಾಣ ಓಣಿಯ ಮೆಹಬೂಬಸುಭಾನಿ ದರ್ಗಾದಿಂದ ಬಸವೇಶ್ವರ ವೃತ್ತ, ಸರ್ವಜ್ಞ ವೃತ್ತ, ಗಾಂಧಿ ಸರ್ಕಲ್ ಮಾರ್ಗವಾಗಿ ಶ್ರೀ ಮಠಕ್ಕೆ ನೂತನ ರಥ, ಕಳಸ ಹಾಗೂ ಹಗ್ಗವನ್ನು ಕುಂಭಮೇಳ ಸಕಲ ವಾದ್ಯಮೇಳದೊಂದಿಗೆ ಆಗಮನವಾಗುವುದು.
ಮಾ.11 ಬೆಳಗ್ಗೆ 5:30ಕ್ಕೆ ಕರ್ತೃ ಶ್ರೀ ಸಿದ್ದೇಶ್ವರರ ಗದ್ದುಗೆಗೆ ಮಹಾರುದ್ರಾಭಿಷೇಕದ ನಂತರ 6 ಗಂಟೆಗೆ ಲಿಂಗದೀಕ್ಷೆ ಹಾಗೂ ಅಯ್ಯಾಚಾರ ಜರುಗುವುದು. ಸಂಜೆ 5 ಗಂಟೆಗೆ ಜರುಗುವ ನೂತನ ರಥೋತ್ಸವದ ಪ್ರಾರಂಭಕ್ಕೆ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಉಜ್ಜಯನಿ ಮಹಾಪೀಠ ಕರ್ನಾಟಕ ಹಾಗೂ ಮಧ್ಯಪ್ರದೇಶ ಇವರು ಚಾಲನೆ ನೀಡುವರು. ಇವರ ಪಾವನ ಸಾನ್ನಿಧ್ಯದಲ್ಲಿ ಸಂಜೆ ಧರ್ಮಸಭೆ ಹಾಗೂ ಆಶೀರ್ವಚನ ಜರುಗುವುದು. ರಥೋತ್ಸವವು ಸಕಲ ವಾದ್ಯಗಳ ವೈಭವದೊಂದಿಗೆ ಶ್ರೀಮಠದಿಂದ ಕೆಂಪಗಸಿ ಹತ್ತಿರವಿರುವ ಹೊರಕೇರಿ ಶ್ರೀ ಬಸವೇಶ್ವರ ದೇವಸ್ಥಾನದ ಪಾದಗಟ್ಟಿಯವರೆಗೆ ಸಾಗಿ ಪುನಃ ಶ್ರೀಮಠ ತಲುಪುವದು.ಮಾ. 9ರ ಸಂಜೆ ಕೃಷಿ ಸಾಧಕರಿಗೆ, ನಿವೃತ್ತ ಗುರುವರ್ಗಕ್ಕೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಜರುಗಲಿದೆ. ಮಾ.10ರಂದು ಆರೋಗ್ಯಾನುಭವ ಗೋಷ್ಠಿ ಜರುಗುವುದು. ಶ್ರೀ ಸಿದ್ದೇಶ್ವರ ಪಂಚಗ್ರಹ ಗುಡ್ಡದ ಹಿರೇಮಠ, ನರಗುಂದ ಪಟ್ಟಣದ ಗುರುಹಿರಿಯರು, ಸಮಸ್ತ ಸದ್ಭಕ್ತರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಸದ್ಭಕ್ತ ಮಂಡಳಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.