Gutka ban is welcome, let's convince farmers
- ಅಡಕೆ ಬೆಳೆಗಾರರ ಪರ ಬಂದ್, ಹೋರಾಟದಿಂದ ಜನರಿಗೆ ತೊಂದರೆ: ಬಸವಪ್ರಭು ಶ್ರೀ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಗುಟ್ಕಾ ನಿಷೇಧಿಸುವ ಸರ್ಕಾರದ ನಿರ್ಧಾರ ಸಂಪೂರ್ಣ ಸರಿಯಾಗಿದ್ದು, ಗುಟ್ಕಾ ನಿಷೇಧದಿಂದ ಅಡಕೆ ಬೆಳೆಗಾರರಿಗೆ ಯಾವುದೇ ತೊಂದರೆ, ಅನ್ಯಾಯ ಆಗುವುದಿಲ್ಲ ಎಂಬುದನ್ನು ಸರ್ಕಾರ ಮೊದಲು ಮನವರಿಕೆ ಮಾಡಿಕೊಡಲಿ ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಪ್ರಕೃತಿ ಸಂರಕ್ಷಣಾ ಸಂಸ್ಥೆ ಆಯೋಜಿಸಿದ್ದ ಗುಟ್ಕಾ ನಿಷೇಧ ಬೆಂಬಲಿಸಿ ಹಾಗೂ ನಶೆಮುಕ್ತ ಕರ್ನಾಟಕಕ್ಕೆ ಕೈಜೋಡಿಸಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅಡಕೆ ಬೆಳೆಗಾರರು ಈಚೆಗೆ ನಡೆಸಿದ ಬಂದ್‌ನಿಂದಾಗಿ ಜನರಿಗೆ ತೀವ್ರ ತೊಂದರೆಯಾಗಿದೆ. ಬಂದ್ ಬದಲು ಜನರಲ್ಲಿ ಜಾಗೃತಿ ಮೂಡಿಸುವ, ಪ್ರಚಾರ ಮಾಡುವ ಅಭಿಯಾನ ಕೈಗೊಳ್ಳುವುದು ಸೂಕ್ತ ಎಂದರು.
ಗುಟ್ಕಾ ನಿಷೇಧದ ನಿರ್ಧಾರ ಸಂಪೂರ್ಣ ಸರಿ ಇದೆ. ಗುಟ್ಕಾ ನಿಷೇಧ ಅಡಕೆ ಬೆಳೆಗಾರರ ವಿರುದ್ಧವಲ್ಲ. ಸಿಗರೇಟ್ ಮತ್ತು ಗುಟ್ಕಾ ಸೇವನೆ ಆರೋಗ್ಯ, ಹಣ ಎರಡನ್ನೂ ನಾಶಪಡಿಸುತ್ತದೆ. ಆದ್ದರಿಂದ ಸರ್ಕಾರ ಗುಟ್ಕಾ ನಿಷೇಧದ ನಿರ್ಧಾರ ಯಾವುದೇ ಕಾರಣಕ್ಕೂ ಹಿಂಪಡೆಯಬಾರದು. ದುರಭ್ಯಾಸಗಳು ಮನುಷ್ಯನ ಆಯುಷ್ಯ, ಆರೋಗ್ಯ ಹಾಗೂ ಕುಟುಂಬದ ನೆಮ್ಮದಿಯನ್ನು ಸಂಪೂರ್ಣ ನಾಶ ಮಾಡುತ್ತವೆ ಎಂದು ತಿಳಿಸಿದರು.ಅಪೂರ್ವ ಹೋಟೆಲ್ ಗ್ರೂಪ್ ಅಧ್ಯಕ್ಷ, ಹಿರಿಯ ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಹಣಕ್ಕಿಂತಲೂ ಆರೋಗ್ಯ ಸಾವಿರ ಪಟ್ಟು ಮುಖ್ಯ. ಹಣವಿದ್ದಾಗ ಆರೋಗ್ಯ ಇರಲ್ಲ. ಆರೋಗ್ಯವಿದ್ದಾಗ ಹಣ ಇರುವುದಿಲ್ಲ. ದುಡ್ಡು ಕೊಟ್ಟು ಆರೋಗ್ಯ ಕೊಳ್ಳಲು ಸಾಧ್ಯವಿಲ್ಲ. ಹಣ, ಆರೋಗ್ಯ ಸರಿ ಇದ್ದಾಗ ಮಾನವನೇ ಇರುವುದಿಲ್ಲ. ತಂಬಾಕು, ಗುಟ್ಕಾ, ಸಿಗರೇಟ್ ಮಾರಾಟವನ್ನು ಮನೆ ಮನೆಗೆ ಹೋಗಿ ತಡೆಯುವುದಕ್ಕಿಂತ, ಅವುಗಳನ್ನು ತಯಾರಿಸುವ ಮೂಲದಲ್ಲೇ ಅಂದರೆ ಫ್ಯಾಕ್ಟರಿಗಳಲ್ಲಿ ಬ್ಯಾನ್ ಮಾಡಬೇಕು ಅಥವಾ ಭಾರಿ ತೆರಿಗೆ ವಿಧಿಸಬೇಕು ಅಥವಾ ಗುಟ್ಕಾ ತಯಾರಿಸುವ ವ್ಯಕ್ತಿಗೆ ಜೈಲಿಗೆ ಅಥವಾ ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾಪಿತ ಬ್ರಹ್ಮಕುಮಾರೀಸ್ ಸಂಸ್ಥೆಯ ಬ್ರಹ್ಮಕುಮಾರಿ ಲೀಲಾಜಿ ಮಾತನಾಡಿ, ಕೇಂದ್ರ ಸರ್ಕಾರವು ತಮ್ಮ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಆ.5ರಿಂದ ನಶಾಮುಕ್ತಿ ಆಂದೋಲನ ಆರಂಭಿಸಿದೆ. ನಿತ್ಯವೂ ಕನಿಷ್ಠ 10 ಸಾವಿರ ಜನರಂತೆ ಒಟ್ಟು 10 ಕೋಟಿ ಜನರನ್ನು ತಲುಪಿ, ಸಮಾಜಕ್ಕೆ ನೈತಿಕ ಹಾಗೂ ಸತ್ಕಾರ್ಯಗಳ ಮೂಲಕ ನೆರವಾಗುವ ಗುರಿ ಹೊಂದಲಾಗಿದೆ ಎಂದರು.ಇಂದಿನ ದಿನಗಳಲ್ಲಿ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳೇ ಕ್ಷೀಣಿಸುತ್ತಿವೆ. ಅವುಗಳನ್ನು ಬಿತ್ತುವ ಕೆಲಸ ಪ್ರೌಢಶಾಲೆಗಿಂತ ಹೆಚ್ಚಾಗಿ ಪ್ರಾಥಮಿಕ ಶಾಲಾ ಹಂತದಿಂದಲೇ ಮನೆ ಹಾಗೂ ಶಾಲೆಗಳಲ್ಲಿ ಮಕ್ಕಳಿಗೆ ಸರಿ ತಪ್ಪು, ಧರ್ಮ ಅಧರ್ಮ, ಸತ್ಯ ಅಸತ್ಯಗಳ ಬಗ್ಗೆ ಮೌಲ್ಯ ಶಿಕ್ಷಣ ನೀಡಬೇಕು. ಗುಟ್ಕಾ ತಿಂದರೆ ಬಾಯಿ ಕ್ಯಾನ್ಸರ್, ಸಿಗರೇಟ್ ಬೀಡಿ ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್, ಮದ್ಯಪಾನ ಮಾಡಿದರೆ ಲಿವರ್ ಕ್ಯಾನ್ಸರ್ ಬರುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಬ್ರೈನ್ ಕ್ಯಾನ್ಸರ್ ಬರುತ್ತದೆ ಎಂದು ತಿಳಿಸಿದರು.
ಸಂಸ್ಥೆ ಅಧ್ಯಕ್ಷ ಕೆ.ಬಿ.ಕೊಟ್ರೇಶ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತ ಮುಖಂಡರಾದ ಆವರಗೊಳ್ಳ ಬಿ.ಎಂ.ಷಣ್ಮುಖಯ್ಯ, ಹಿರಿಯ ವರ್ತಕ ಎಸ್.ಟಿ.ಕುಸುಮ ಶೆಟ್ರು, ಸಂಸ್ಥೆಯ ಗಿರೀಶ ಎಸ್.ದೇವರಮನಿ, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಕಾರ್ಯದರ್ಶಿ ಶಿವನಕೆರೆ ಬಸವಲಿಂಗಪ್ಪ, ರಾಜ್ಯ ವಿಜ್ಞಾನ ಪರಿಷತ್ ನ ಎಂ.ಗುರುಸಿದ್ದ ಸ್ವಾಮಿ, ಪರಮೇಶ ಇತರರು ಇದ್ದರು.ಧೂಮಪಾನ, ಮದ್ಯಪಾನ ಹಾಗೂ ಗುಟ್ಕಾ ಸೇವನೆಯಿಂದ ಬರುವ ಬಾಯಿ, ಶ್ವಾಸಕೋಶ ಹಾಗೂ ಲಿವರ್ ಕ್ಯಾನ್ಸರ್ ಮುಂತಾದ ಭೀಕರ ಕಾಯಿಲೆಗಳ ವೈದ್ಯರು ಜಾಗೃತಿ ಮೂಡಿಸಿದರು.
- - -(ಬಾಕ್ಸ್)
* ಗುಟ್ಕಾ ನಿಷೇಧ ಆದೇಶ ಹಿಂಪಡೆಯಬಾರದು- ಜನಾರೋಗ್ಯ, ಸಮಾಜದ ಹಿತಕ್ಕಾಗಿ ಗುಟ್ಕಾ ನಿಷೇಧ ಸರಿ: ಕೆ.ಬಿ.ಕೊಟ್ರೇಶ್
ದಾವಣಗೆರೆ: ಜನಾರೋಗ್ಯ ಹಾಗೂ ಸಮಾಜದ ಹಿತದೃಷ್ಟಿಯಿಂದ ಕೈಗೊಂಡ ಗುಟ್ಕಾ ನಿಷೇಧದ ನಿರ್ಧಾರ ಸಂಪೂರ್ಣ ಸರಿಯಾಗಿದ್ದು, ಗುಟ್ಕಾ ನಿಷೇಧ ಆದೇಶದ ವಿರುದ್ಧ ಎಂತಹದ್ದೇ ಒತ್ತಡ, ಪ್ರಭಾವಗಳಿಗೆ ಸರ್ಕಾರ ಮಣಿಯಬಾರದು ಎಂದು ಪ್ರಕೃತಿ ಸಂರಕ್ಷಣಾ ಸಂಸ್ಥೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಬಿ. ಕೊಟ್ರೇಶ್ ಮನವಿ ಮಾಡಿದ್ದಾರೆ.ಗುಟ್ಕಾ ನಿಷೇಧ ಬೆಂಬಲಿಸಿ ಹಾಗೂ ನಶೆ ಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗುಟ್ಕಾ ನಿಷೇಧದಿಂದ ಸ್ಥಳೀಯ ಅಡಕೆ ಬೆಳೆಗಾರರಿಗೆ ತೊಂದರೆ ಆಗುವುದಿಲ್ಲ. ಮಲೇಷ್ಯಾ, ಥೈಲ್ಯಾಂಡ್, ಶ್ರೀಲಂಕಾ, ಬಾಂಗ್ಲಾ ದೇಶದಿಂದ ಭಾರತಕ್ಕೆ ಆಮದಾಗುವ ಕಳಪೆ ಗುಣಮಟ್ಟದ ಅಡಕೆಗೆ ಮಾತ್ರವೇ ಇದರಿಂದ ಧಕ್ಕೆಯಾಗಲಿದೆ. ಸಾಂಪ್ರದಾಯಿಕವಾಗಿ ಅಡಕೆ ಬೆಳೆಯುವ ನಮ್ಮ ರೈತರ ಹಿತರಕ್ಷಣೆಗೆ ನಾವು ಬದ್ಧ. ಒಂದುವೇಳೆ ಗುಟ್ಕಾ ನಿಷೇಧ ಆದೇಶ ಸರ್ಕಾರ ಹಿಂಪಡೆದರೆ ವಿವಿಧ ಸಂಘಟನೆಗಳೊಂದಿಗೆ ಸೇರಿ, ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
- - -(ಟಾಪ್ ಕೋಟ್)
ಗುಟ್ಕಾಗೆ ಕೋಟಿನ್‌ನಂತಹ ಅಪಾಯಕಾರಿ ಅಂಶ ಸೇರಿಸುವುದರಿಂದ ಗಂಟಲು, ಕರುಳು ಮತ್ತು ಮೂತ್ರಕೋಶದ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆ ಬರುತ್ತವೆ. ಸಾಂಪ್ರದಾಯಿಕವಾಗಿ ಅಡಕೆ ತಿನ್ನುವುದರಿಂದ, ಅಡಕೆ ಬೆಳೆಯುವುದರಿಂದ ತೊಂದರೆಯಿಲ್ಲ. ಗುಟ್ಕಾ ನಿಷೇಧದಿಂದ ಬೆಳೆಗಾರರ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರದಂತೆ ಸಂರಕ್ಷಿಸಲಾಗುವುದು. ಯಾವುದೇ ಕಾರಣಕ್ಕೂ ಗುಟ್ಕಾ ನಿಷೇಧದ ಆದೇಶ ಹಿಂಪಡೆಯಬಾರದು. ಈ ಬಗ್ಗೆ ಎಲ್ಲಾ ಸಂಸ್ಥೆಗಳ ಒಡಗೂಡಿ ಸಿಎಂ ಬಳಿ ನಿಯೋಗ ಕೊಂಡೊಯ್ಯೋಣ.- ಶ್ರೀ ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ, ದಾವಣಗೆರೆ.
- - --4ಕೆಡಿವಿಜಿ5, 6.ಜೆಪಿಜಿ: ದಾವಣಗೆರೆಯಲ್ಲಿ ಶುಕ್ರವಾರ ಪ್ರಕೃತಿ ಸಂರಕ್ಷಣಾ ಸಂಸ್ಥೆಯಿಂದ ಗುಟ್ಕಾ ನಿಷೇಧ ಬೆಂಬಲಿಸಿ ಹಾಗೂ ನಶೆಮುಕ್ತ ಕರ್ನಾಟಕಕ್ಕೆ ಕೈ ಜೋಡಿಸಿ ಕಾರ್ಯಕ್ರಮ ನಡೆಯಿತು.