ಸಾರಾಂಶ
ಶಿರಸಿ: ಪಠ್ಯ ಪುಸ್ತಕ, ಗೈಡ್ ಮತ್ತು ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಭಾರತೀಯ ಅಂಚೆ ಇಲಾಖೆಯ ಜ್ಞಾನ ಅಂಚೆ ಸೇವೆ ಮೇ ೧ರಿಂದ ಆರಂಭವಾಗಿದೆ. ಸಾಹಿತಿ ಡಾ.ಅಜಿತ್ ಹೆಗಡೆ ಹರೀಶಿ ಶಿರಸಿ ಪ್ರಧಾನ ಅಂಚೆ ಕಚೇರಿಯಲ್ಲಿ ಈ ಸೇವೆಗೆ ಚಾಲನೆ ನೀಡಿದರು.ಸಾಹಿತಿ ಡಾ.ಅಜಿತ್ ಹೆಗಡೆ ಹರೀಶಿ ಮಾತನಾಡಿ, ಅಂಚೆ ಇಲಾಖೆಯ ಜ್ಞಾನ ಅಂಚೆ ಸೇವೆಯು ಸಾಹಿತ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿ, ಕೇಂದ್ರ ಸರ್ಕಾರದ ಕಾರ್ಯಕ್ರಮದ ಉದ್ದೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದರು.
ಶಿರಸಿಯ ಅಂಚೆ ಅಧೀಕ್ಷಕ ಹೂವಪ್ಪ.ಜಿ ಪ್ರಾಸ್ತವಿಕ ಮಾತನಾಡಿ, ಪಠ್ಯ ಪುಸ್ತಕ, ಸಾಹಿತ್ಯ ಕೃತಿಗಳಿಗಷ್ಟೇ ಈ ಸೇವೆ ಮೀಸಲಾಗಿದೆ. ಕನಿಷ್ಠ ೩೦೦ ಗ್ರಾಂನಿಂದ ಗರಿಷ್ಠ ೫ ಕೆಜಿವರೆಗಿನ ಪಾರ್ಸಲ್ ಮಾತ್ರ ಈ ನೂತನ ಸೇವೆಯ ಮೂಲಕ ರಿಯಾಯಿತಿ ದರದಲ್ಲಿ ಕಳಿಸಬಹುದಾಗಿದೆ. ಅಂಚೆ ಇಲಾಖೆಯ “ ಜ್ಞಾನ ಅಂಚೆ ಸೇವೆ” ಯ ಉಪಯೋಗವನ್ನು ವಿದ್ಯಾರ್ಥಿಗಳು, ಸಾಹಿತ್ಯ ಆಸಕ್ತರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ವಿನಂತಿಸಿದರು.ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಕಳುಹಿಸುವ ಪಠ್ಯಪುಸ್ತಕಗಳು, ಅಭ್ಯಾಸ ಪುಸ್ತಕಗಳು,ಸರ್ಕಾರದ ಸ್ವಾಯತ್ತ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕಳಹಿಸುವ ಪಠ್ಯಪುಸ್ತಕಗಳು, ಅಭ್ಯಾಸ ಪುಸ್ತಕಗಳು, ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದ ಸಾಹಿತ್ಯ ಕೃತಿಗಳು (ಪ್ರಕಾಶಕರ ಹೆಸರು ಹಾಗೂ ವಿಳಾಸ ಇರಬೇಕು) ಈ ಸೇವೆಯ ಮೂಲಕ ಸಾರ್ವಜನಿಕರು ರಿಯಾಯಿತಿ ದರದ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಮತ್ತು ಬರಹ, ಬಿಲ್ ಬುಕ್‌ಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ನಿಯತಕಾಲಿಕೆಗಳಿಗೆ ಈ ಸೇವೆ ಲಭ್ಯವಿಲ್ಲ. ಶಾಲಾ ಕಾಲೇಜು, ಶಿಕ್ಷಣ ಸಂಸ್ಥೆಗಳು, ಲೇಖಕರು, ಪ್ರಕಾಶಕರು, ವಿದ್ಯಾರ್ಥಿಗಳು ಮತ್ತು ಓದುಗರು ಈ ನೂತನ ಸೇವೆಯ ಪ್ರಯೋಜನ ಪಡೆಯುವಂತೆ ಶಿರಸಿ ವಿಭಾಗದ ಅಧೀಕ್ಷಕ ಹೂವಪ್ಪ ಕೋರಿದ್ದಾರೆ.