ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ಥಾಪಿಸಲಾದ ನೂತನ ವ್ಯಾಯಾಮ ಶಾಲೆಯನ್ನು (ಮಲ್ಟಿ ಜಿಮ್) ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಶನಿವಾರ ಲೋಕಾರ್ಪಣೆಗೊಳಿಸಿದರು.ಕ್ರೀಡಾ ಇಲಾಖೆಯಿಂದ ಸ್ಥಾಪಿಸಲಾದ ನೂತನ ವ್ಯಾಯಾಮ ಶಾಲೆಗೆ ಚಾಲನೆ ನೀಡಿ, ವ್ಯಾಯಾಮ ಶಾಲೆಯಲ್ಲಿರುವ ವಿವಿಧ ವ್ಯಾಯಾಮ ಉಪಕರಣಗಳನ್ನು ವೀಕ್ಷಿಸಿದ ಸಚಿವರು ಕ್ರೀಡಾಪಟುಗಳು ಹಾಗೂ ಸಾರ್ವಜನಿಕರಿಗೆ ಇದರ ಸದುಪಯೋಗವಾಗುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಯುವಜನರು ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಲು ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂತಹ ವ್ಯಾಯಾಮ ಶಾಲೆಗಳು ಸಹಕಾರಿಯಾಗಲಿವೆ ಎಂದರು.
ಇಲಕಲ್ಲ ತಾಲೂಕಿನಲ್ಲಿಯೂ ಸರ್ಕಾರಿ ಪಪೂ ಕಾಲೇಜಿನ ಹತ್ತಿರ 6 ಎಕರೆ ಜಮೀನಿನಲ್ಲಿ ತಾಲೂಕಾ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಕ್ರೀಡಾಂಗಣದಲ್ಲಿಯೂ ವ್ಯಾಯಾಮ ಶಾಲೆ ಸ್ಥಾಪಿಸಲು ಕಾಮಗಾರಿ ನಡೆಯುತ್ತಿದ್ದು, ಎಲ್ಲ ರೀತಿಯ ವ್ಯಾಯಾಮ ಉಪಕರಣಗಳನ್ನು ಅಳವಡಿಕೆಗೆ ಕ್ರಮವಹಿಸಲು ತಿಳಿಸಿದರು.ಸಂಸದ ಪಿ.ಸಿ.ಗದ್ದಿಗೌಡರ, ಬಾಗಲಕೋಟೆ ಶಾಸಕ ಉಮೇಶ ಮೇಟಿ, ವಿಧಾನ ಪರಿಷತ್ ಶಾಸಕರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವಪ್ನಿಲ್ ಅಹೀರೆ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು.