ಎಚ್.ಡಿ. ಕುಮಾರಸ್ವಾಮಿ, ಸಿ.ಟಿ. ರವಿ ಬಂಧನಕ್ಕೆ ಆಗ್ರಹ

| Published : Feb 01 2024, 02:01 AM IST

ಸಾರಾಂಶ

ಶೋಷಿತ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ದಬ್ಬಾಳಿಕೆಗಳನ್ನು ನಡೆಸಲಾಗುತ್ತಿದ್ದು, ಕೂಡಲೇ ಕುಮಾರಸ್ವಾಮಿ ಹಾಗೂ ಸಿ.ಟಿ. ರವಿ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಳ್ಳಾರಿ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಆಸ್ತಿಗಳನ್ನು ಹಾನಿಗೊಳಿಸಿದ ಮತ್ತು ಅದಕ್ಕೆ ಪ್ರಚೋದನೆ ನೀಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಟಿ. ರವಿ ಅವರನ್ನು ಬಂಧಿಸುವಂತೆ ಆಗ್ರಹಿಸಿ ಬಳ್ಳಾರಿ ಜಿಲ್ಲಾ ಕುರುಬರ ಸಂಘ ಮತ್ತು ಶೋಷಿತ ಸಮುದಾಯಗಳ ಒಕ್ಕೂಟದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಧ್ವಜ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಹೋರಾಟದ ನೆಪದಲ್ಲಿ ಕುರುಬರ ಸಂಘದ ವಿದ್ಯಾರ್ಥಿನಿಲಯಕ್ಕೆ ಕಲ್ಲು ತೂರಾಟ ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್ ಅವರ ಬ್ಯಾನರ್ ಹರಿದುಹಾಕಿ ಅವಮಾನಗೊಳಿಸಲಾಗಿದೆ. ಈ ವಿವಾದವನ್ನು ಬಿಜೆಪಿ ನಾಯಕರು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿ.ಟಿ. ರವಿ ಅವರು ಕಾರಣರಾಗಿದ್ದಾರೆ. ಶೋಷಿತ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ದಬ್ಬಾಳಿಕೆಗಳನ್ನು ನಡೆಸಲಾಗುತ್ತಿದ್ದು, ಕೂಡಲೇ ಕುಮಾರಸ್ವಾಮಿ ಹಾಗೂ ಸಿ.ಟಿ. ರವಿ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜ. 28ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ಸಮಾವೇಶ ಯಶಸ್ವಿಯಾದ ಹಿನ್ನೆಲೆ ಕುರುಬರ ವಿದ್ಯಾರ್ಥಿನಿಲಯಕ್ಕೆ ಕಲ್ಲು ತೂರಾಟ ಮಾಡಿರುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ದ್ವೇಷದ ವಾತಾವರಣ ಸೃಷ್ಟಿಸಲಾಗುತ್ತಿದ್ದು, ಇದಕ್ಕೆ ಆಸ್ಪದ ನೀಡಬಾರದು.

ಕೂಡಲೇ ಸಂಬಂಧಿಸಿದವರನ್ನು ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಶೋಷಿತ ಸಮುದಾಯಗಳ ಒಕ್ಕೂಟದ ಕೆ.ಇ. ಚಿದಾನಂದಪ್ಪ, ಎ. ಮಾನಯ್ಯ, ವೆಂಕಟೇಶ್ ಹೆಗಡೆ, ಗಾದಿಲಿಂಗನಗೌಡ, ಕೆ. ರಾಮಕೃಷ್ಣ, ಬಿ.ಎಂ. ಪಾಟೀಲ್ ಸೇರಿದಂತೆ ಒಕ್ಕೂಟ ಹಾಗೂ ಕುರುಬರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.