ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಯಾರ ವಿರುದ್ದವೂ ವೈಯಕ್ತಿಕ ಟೀಕೆ ಮಾಡದೆ ಸೈದ್ಧಾಂತಿಕವಾಗಿ ನಡೆದಿರುವುದನ್ನು ಕುಮಾರಸ್ವಾಮಿ ಕಲಿಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೂರು ಕೊಟ್ಟು ನ್ಯಾಯ ಪಡೆಯುವುದು ಸಾಂವಿಧಾನಿಕ ಹಕ್ಕಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ವೈಯಕ್ತಿಕ ದಾಳಿ ದಲಿತ ವಿರೋಧಿ ನೀತಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮುಖ್ಯಮಂತ್ರಿಗಳ ಕಾರ್ಯವೈಖರಿ ಸಹಿಸದೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತಿಭ್ರಮಣೆಯಾಗಿದೆ. ಡಿ.ಕೆ. ಶಿವಕುಮಾರ್ ಅವರ ಬಗ್ಗೆ ವೈಯಕ್ತಿಕ ಟೀಕೆ, ಭರಾಟೆಯಲ್ಲಿ ಅಸೂಯೆ ಭಾವನೆಯಿಂದ ತಮ್ಮ ಜವಾಬ್ದಾರಿ ಮರೆತು ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದು ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಸಂಸದ ಶ್ರೇಯಸ್ ಪಟೇಲ್ ಅವರು ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ವಜಾ ಮಾಡುವಂತೆ ಪ್ರಧಾನಿಗಳಿಗೆ ಮನವಿ ಮಾಡುತ್ತೇವೆ ಎಂದು ಸಂದೇಶ ನೀಡಿರುವುದನ್ನು ಸ್ವಾಗತಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಮ್ಮ ರಾಜಕೀಯ ಜೀವನದಲ್ಲಿ ಯಾರ ವಿರುದ್ದವೂ ವೈಯಕ್ತಿಕ ಟೀಕೆ ಮಾಡದೆ ಸೈದ್ಧಾಂತಿಕವಾಗಿ ನಡೆದಿರುವುದನ್ನು ಕುಮಾರಸ್ವಾಮಿ ಕಲಿಯಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೂರು ಕೊಟ್ಟು ನ್ಯಾಯ ಪಡೆಯುವುದು ಸಾಂವಿಧಾನಿಕ ಹಕ್ಕಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮೇಲೆ ವೈಯಕ್ತಿಕ ದಾಳಿ ದಲಿತ ವಿರೋಧಿ ನೀತಿಯಾಗಿದೆ ಎಂದು ಖಂಡಿಸಿದರು.

ಬುದ್ಧ, ಬಸವ ಮತ್ತು ಅಂಬೇಡ್ಕರ್‌ರಂಹತ ಮಹಾನ್ ನಾಯಕರ ಆದರ್ಶಗಳನ್ನು ಮೈಗೂಡಿಸಿಕೊಂಡು ಗೃಹ ಸಚಿವರಾಗಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ಪ್ರಿಯಾಂಕ ಖರ್ಗೆ ಅವರ ಜ್ಞಾನ, ವಾಕ್ ಚಾತುರ್ಯತೆ ಜನಪ್ರಿಯತೆ ಸಹಿಸಲಾರದೆ ಗೃಹ ಇಲಾಖೆ ನಿಮ್ಮಪ್ಪಂದ ಎಂಬುದಾಗಿ ಗೃಹ ಸಚಿವರಿಗೆ ಧಮ್ಕಿ ಹಾಕುವ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಮತ್ತು ಪೊಲೀಸ್ ಅಧಿಕಾರಿಗಳು ನಿರ್ಭಯತೆಯಿಂದ ಕೆಲಸ ಮಾಡದಂತೆ ಬೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿರುವುದನ್ನು ಸಹಿಸದೇ ದಿನ ಬೆಳಗಾದರೆ ಅವರ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅವರು ದಲಿತ ಸಮುದಾಯಕ್ಕೆ ಸೇರಿದ ಪ್ರಿಯಾಂಕ ಖರ್ಗೆ ಅವರು ಗೃಹ ಸಚಿವರಾಗಿರುವುದನ್ನು ಸಹಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವರಾಗಿ ರಾಜ್ಯಕ್ಕೆ ವಿಶೇಷ ಅನುದಾನವಾಗಲೀ, ಕೈಗಾರಿಕೆಗಳನ್ನಾಗಲೀ ಮತ್ತು ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ತೆರಿಗೆ ಪಾಲನ್ನು ತರಲಾಗದೆ ರೈತರ ಕಬ್ಬಿನ ಬೆಲೆ ಸಮಸ್ಯೆಗಳ ಬಗ್ಗೆ ಧನಿ ಎತ್ತದೆ ಸಿಎಂ, ಸಚಿವರನ್ನು ನಿಂದಿಸುವುದೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ ಎಂದು ದೂರಿದರು.

ಕುಮಾರಸ್ವಾಮಿ ಅವರ ಇಂತಹ ವೈಯಕ್ತಿಕ ದಾಳಿ ಖಂಡಿಸಿ ದಲಿತ ಮತ್ತು ವಿವಿದ ಸಂಘಟನೆಗಳ ವತಿಯಿಂದ ನಗರದ ಜೆಸಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್, ಮುಖಂಡರಾದ ಸಿ.ಎಂ. ದ್ಯಾವಪ್ಪ, ಕೃಷ್ಣ, ಉದಯ್, ಪಾಂಡೆ, ವಿಜಯಲಕ್ಷ್ಮಿ ರಘುನಂದನ್ ಇತರರು ಇದ್ದರು.