ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಜಾತ್ಯತೀತ ಜನತಾದಳ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾ ಪದಾಧಿಕಾರಿಗಳ ಸಭೆ ಜರುಗಿತು.ಈ ಸಂದರ್ಭ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಪಕ್ಷವನ್ನು ಬಲವಾಗಿ ಸಂಘಟಿಸಬೇಕು, ಮುಂದಿನ ದಿನಗಳಲ್ಲಿ ನಮ್ಮ ಪಕ್ಷಕ್ಕೆ ಉತ್ತಮವಾದ ಭವಿಷ್ಯವಿದೆ. ನಮ್ಮ ನಾಯಕರಾದ ಎಚ್. ಡಿ. ಕುಮಾರಸ್ವಾಮಿ ಅವರು ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದರು.ಬಿಜೆಪಿ, ಜೆಡಿಎಸ್ ಮೈತ್ರಿಯಿಂದ ಖಂಡಿತವಾಗಿಯೂ ನಮಗೆ ಯಶಸ್ಸು ಸಿಗಲಿದೆ. ತಾವೆಲ್ಲರೂ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸನ್ನದ್ಧರಾಗಬೇಕು. ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಪಕ್ಷದ ಸದಸ್ಯತ್ವವನ್ನು ನೋಂದಣಿ ಮಾಡಲು ಗಮನ ನೀಡಬೇಕು. ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ನಮಗೆಲ್ಲರಿಗೂ ಗೌರವ ದೊರೆಯುತ್ತದೆ. ಪಕ್ಷ ಸಂಘಟನೆಯನ್ನು ಮಾಡುವಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಎಚ್.ಡಿ ಕುಮಾರಸ್ವಾಮಿ ಅವರ ಕೆಲಸ ಕಾರ್ಯಗಳನ್ನು ಶ್ಲಾಘಿಸಿ ತಮ್ಮ ಊರಿನಲ್ಲಿಯೂ ಪ್ರಚಾರವನ್ನು ಮಾಡಿ, ಜಿಲ್ಲಾಧ್ಯಕ್ಷನ ನೆಲೆಯಲ್ಲಿ ನಾನು ನಿಮಗೆ ಎಲ್ಲ ರೀತಿಯಲ್ಲೂ ಸಹಕಾರವನ್ನು ನೀಡುತ್ತೇನೆ, ಜಿಲ್ಲೆಯಲ್ಲಿ ಪಕ್ಷವನ್ನು ಸದೃಢವಾಗಿಸಲು ಬೆಳೆಸಲು ನಾವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳೋಣ ಏಂದು ಹೇಳಿದರು.