ಪ್ರಶಸ್ತಿಗೆ ಎಂದಿಗೂ ಲಾಭಿ ಮಾಡುವುದನ್ನು ನೋಡಿಲ್ಲ, ವಿದ್ವಾಂಸರೇ ಇವರನ್ನು ಆಯ್ಕೆ ಮಾಡಿರುವ ನಿದರ್ಶನಗಳು ಕಣ್ಣಮುಂದೆ ಕಾಣುತ್ತವೆ. ನನಗೂ ಮತ್ತು ಎಂ.ವಿ.ಶ್ರೀನಿವಾಸ್ ಅವರಿಗೆ ೨೮ ವರ್ಷಗಳ ಒಡನಾಟವಿದೆ. ನಿರಂತರ ಸಂಶೋಧಕಾರಗಿದ್ದಾರೆ. ಮೈಸೂರು ವಿವಿಯ ಒಂದು ವಾಲ್ಯುಮ್‌ನು ಉಸ್ತುವಾರಿ ವಹಿಸಿಕೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘ, ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರದಿಂದ ನಗರದ ಕೆ.ವಿ.ಎಸ್.ಭವನದಲ್ಲಿ ಮೂರನೇ ವರ್ಷದ ಹ.ಕ.ರಾಜೇಗೌಡ ಪ್ರಶಸ್ತಿಯನ್ನು ಸಾಹಿತಿ ಎಂ.ವಿ.ಶ್ರೀನಿವಾಸ್ ಅವರಿಗೆ ಬೆಂಗಳೂರು ಐಸಿಎಚ್‌ಆರ್ ಪ್ರಾದೇಶಿಕ ನಿರ್ದೇಶಕ ಎಸ್.ಕೆ. ಅರುಣಿ ಪ್ರದಾನ ಮಾಡಿದರು.

ಎಸ್.ಕೆ.ಅರುಣಿ ಮಾತನಾಡಿ, ಎಂ.ವಿ.ಶ್ರೀನಿವಾಸ್ ಅವರು ಕೇವಲ ಇತಿಹಾಸ ಹಾಗೂ ಕಾದಂಬರಿಕಾರರಷ್ಟೇ ಅಲ್ಲ, ಸಾಹಿತ್ಯಾಸಕ್ತರು ಕೂಡ ಆಗಿದ್ದಾರೆ. ಇವರು ಬರೆದ ಕಾದಂಬರಿಗಳು ಹೆಚ್ಚು ಜನಪ್ರಿಯತೆ ಗಳಿಸಿವೆ ಹೇಳಿದರು.

ತುಮಕೂರು ಸಮ್ಮೇಳನಾಧ್ಯಕ್ಷರಾಗಿಯೂ ಆಯ್ಕೆಯಾಗಿರುವ ಶ್ರೀನಿವಾಸ್ ಅವರು, ಮಸ್ತಾನಿ, ರತ್ನಾಕರ ಎಂಬುವ ಕಾದಂಬರಿಗಳು ಇವರನ್ನು ಗುರುತಿಸುವ ಹಾಗೆ ಮಾಡಿದೆ. ಇತಿಹಾಸದ ಸಂಶೋಧನೆಯನ್ನು ನೋಡುವುದಾದರೆ ಸ್ಥಳೀಯ ಮಟ್ಟದ ನಾಯಕರ ಬಗ್ಗೆ ತಿಳಿಸಿಕೊಡುತ್ತಿದ್ದರು. ಅದರಲ್ಲಿ ಮುಖ್ಯವಾಗಿ ನಾಡಪ್ರಭು ಮತ್ತು ಪಾಳೆಗಾರರ ಬಗ್ಗೆ ತಿಳಿಸಿಕೊಡುತ್ತಿದ್ದ ಪರಿಯನ್ನು ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.

ಪ್ರಶಸ್ತಿಗೆ ಎಂದಿಗೂ ಲಾಭಿ ಮಾಡುವುದನ್ನು ನೋಡಿಲ್ಲ, ವಿದ್ವಾಂಸರೇ ಇವರನ್ನು ಆಯ್ಕೆ ಮಾಡಿರುವ ನಿದರ್ಶನಗಳು ಕಣ್ಣಮುಂದೆ ಕಾಣುತ್ತವೆ. ನನಗೂ ಮತ್ತು ಎಂ.ವಿ.ಶ್ರೀನಿವಾಸ್ ಅವರಿಗೆ ೨೮ ವರ್ಷಗಳ ಒಡನಾಟವಿದೆ. ನಿರಂತರ ಸಂಶೋಧಕಾರಗಿದ್ದಾರೆ. ಮೈಸೂರು ವಿವಿಯ ಒಂದು ವಾಲ್ಯುಮ್‌ನು ಉಸ್ತುವಾರಿ ವಹಿಸಿಕೊಂಡಿದ್ದರು. ಒಟ್ಟಾರೆ ಹೇಳುವುದಾದರೆ ಶ್ರೀನಿವಾಸ್ ಅವರು ಇತಿಹಾಸ ವಿದ್ಯಾರ್ಥಿಗಳು, ಇತಿಹಾಸ ತಜ್ಞರಾಗಿ ಕಾಣುತ್ತಾರೆ, ಹ.ಕ.ರಾಜೇಗೌಡ ಪ್ರಶಸ್ತಿ ಇವರಿಗೆ ಲಭಿಸಿರುವುದು ಅತ್ಯಂತ ಸಂತಸ ತಂದಿದೆ ಎಂದರು.

ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಮಾತನಾಡಿ, ಹ.ಕ.ರಾಜೇಗೌಡರು ನಮ್ಮ ನಡುವೆ ಇಲ್ಲ, ಅವರ ಬರಹಗಳು ಹಾಗೂ ಕೊಟ್ಟಂತಹ ಮಾರ್ಗದರ್ಶನಗಳು ಜೀವನಕ್ಕೆ ಅಮೂಲ್ಯ ಎನಿಸಿವೆ. ಇವರನ್ನು ಹಿಂಬಾಲಿಸಿದರೆ ಸಾಕು ನಾವು ದೊಡ್ಡವಾರಾಗಿ ಬಿಡುತ್ತೇವೆ, ಇಂತಹ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿಯನ್ನು ಶ್ರೀನಿವಾಸ್ ಅವರಿಗೆ ಕೊಟ್ಟಿರುವುದು ಸಮರ್ಥನೀಯವಾಗಿದೆ. ಶ್ರೀನಿವಾಸ್ ಅವರ ವ್ಯಕ್ತಿತ್ವವು ಕೂಡ ಬೇರೊಬ್ಬರಿಗೆ ಪ್ರೇರಣೆಯಾಗಿದೆ. ಮೌನ ಹಾಗೂ ಮೃದು ವ್ಯಕ್ತಿತ್ವ ಹೊಂದಿದ್ದಾರೆ, ಸಾಧನೆ ಮಾಡಿದ್ದರೂ ವಿನಯವಂತರಾಗಿದ್ದಾರೆ, ಇವರೊಳಗೊಬ್ಬ ಇತಿಹಾಸಕಾರ, ಕವಿ, ಸಾಹಿತಿ, ಸಂಘಟಕ, ಸಂಶೋಧಕ, ವಿಮರ್ಶನಕ ಇವೆಲ್ಲ ಸ್ಥಾನವನ್ನು ಹೊಂದಿ ಅಪೂರ್ವ ಸಂಗಮವಾಗಿದ್ದಾರೆ ಎಂದು ಶ್ಲಾಘಿಸಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ ಮಾತನಾಡಿ, ಮಂಡ್ಯ ಜಿಲ್ಲೆಗೆ ಹಲವು ಆಯಾಮಗಳಲ್ಲಿ ಸಾಹಿತಿಕ ಮಜಲುಗಳನ್ನು ತಂದುಕೊಟ್ಟ ಹ.ಕ.ರಾಜೇಗೌಡ ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ. ಇವರು ಜಾನಪದ, ಇತಿಹಾಸ ಅನೇಕ ಕೃತಿಗಳನ್ನು ಹೊರತಂದು ಅನೇಕ ಕಥೆಗಳನ್ನೂ ಹೊರತಂದಿದ್ದಾರೆ, ಅವರ ಹೆಸರಿನಲ್ಲಿ ಏನಾದರೂ ಮಾಡಬೇಕೆಂದಾಗ ಅವರ ಕುಟುಂಬದವರು ದತ್ತಿ ಇರಿಸಿದ್ದಾರೆ, ಇವರಿಗೆ ಕೃತಜ್ಞತೆ ಸಲ್ಲಿಸುವೆ. ನಾನು ಕಂಡ ಅಪರೂಪದ ಅತ್ಯುತ್ತಮ ಅಧ್ಯಾಪಕ ಹಾಗೂ ಬಹುಭಾಷಾಕಾರರಾದ ಎಂ.ವಿ.ಶ್ರೀನಿವಾಸ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆ ಎನಿಸಿದೆ ಎಂದರು.

ಮೂರನೇ ವರ್ಷದ ಹ.ಕ.ರಾಜೇಗೌಡ ಪ್ರಶಸ್ತಿಯನ್ನು ಮೈಸೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಎಂ.ವಿ.ಶ್ರೀನಿವಾಸ್ ಅವರಿಗೆ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹ.ಕ.ರಾಜೇಗೌಡರ ಮಗಳು ಹಾಗೂ ಮೈಸೂರು ಜಾನಪದ ವಸ್ತು ಸಂಗ್ರಹಾಲಯದ ನಿರ್ದೇಶಕಿ ಚೇತನಾ, ಕರ್ನಾಟಕ ಸಂಘದ ನಿರ್ದೇಶಕ ಕೋಣನಹಳ್ಳಿ ಜಯರಾಮು, ಎಚ್.ಡಿ.ಸೋಮಶೇಖರ್ ಭಾಗವಹಿಸಿದ್ದರು.