ಸಾರಾಂಶ
ದಿ.ಹಿ.ಮ.ನಾಗಯ್ಯನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ
ಕನ್ನಡ ಪ್ರಭವಾರ್ತೆ ಕೊಟ್ಟೂರುಕನ್ನಡ ಸಾಹಿತ್ಯ ಲೋಕದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿಗೆ ಹೊಸ ಕಾವ್ಯವನ್ನು ರಚಿಸಿದ್ದ ದಿ.ಹಿ.ಮ.ನಾಗಯ್ಯನವರು ಅಂದಿನ ದಿನಗಳಲ್ಲಿ ಹೊಸ ಕಾವ್ಯದ ಪ್ರವರ್ತಕರಾಗಿ ಹೊರ ಹೊಮ್ಮಿದ್ದರು ಎಂದು ಹೊಸಪೇಟೆಯ ಶಿಕ್ಷಕ ಬಿ.ಎಂ. ರಾಜಶೇಖರ ಹೇಳಿದರು.ಪಟ್ಟಣದ ಶ್ರೀ ರೇಣುಕ ಸಭಾಭವನದಲ್ಲಿ ಶನಿವಾರ ತಾಲೂಕು ಕಸಾಪ ಆಯೋಜಿಸಿದ್ದ ದಿ.ಹಿ.ಮ.ನಾಗಯ್ಯನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಹಿ.ಮ.ನಾ. ಕವಿ ಮತ್ತು ಕವಿತೆ ಬೇರೆ ಅಲ್ಲ ಎಂದು ಭಾವಿಸಿದ್ದರಿಂದಲೇ ಅವರ ಸಾಹಿತ್ಯ ಸರಳ ಭಾಷೆಯಲ್ಲಿದೆ. ಪತ್ರಕರ್ತರಾಗಿ, ಸ್ವಂತ ಪತ್ರಿಕೆ ನಡೆಸಿ, ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರಾಗಿ, ಆಸ್ತಿ ತೆರಿಗೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ರಾಮಕೃಷ್ಣ ಹೆಗಡೆಯವರಿಗೆ ಆತ್ಮೀಯರಾಗಿದ್ದರು. ದೊಡ್ಡ ರಾಜಕೀಯ ನಂಟು ಇದ್ದರೂ ಆಮಿಷಕ್ಕೊಳಗಾಗದೇ ಕೊನೆವರೆಗೂ ಸರಳ ಜೀವನ ನಡೆಸಿದರು ಎಂದರು.ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಶಾಲೆ ತೆರೆದು, ಭಾಷೆ ಬೆಳೆಸಿದ ಕೀರ್ತಿ ಹಿರಿಯ ಸಾಹಿತಿ ನಾಗೇಶ ಶಾಸ್ತ್ರೀಗಳಿಗೆ ಸಲ್ಲುತ್ತದೆ. ಅದರಂತೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕಾವ್ಯ ರಚನೆ ಆರಂಭವಾಗಿದ್ದರೂ ಜಿಲ್ಲೆಯಲ್ಲಿ ಮೊದಲಿಗೆ ಹೊಸ ಕಾವ್ಯ ರಚಿಸಿದ್ದ ಕೀರ್ತಿ ಹಿ.ಮ.ನಾ.ರದ್ದಾಗಿದೆ. ಸ್ವಾತಂತ್ರ್ಯ ಹೋರಾಟ ಕುರಿತಾಗಿ ಅನೇಕ ಕಥೆಗಳು ಬಂದಿದ್ದರೂ, ಸ್ವಾತಂತ್ರ್ಯ ಸಂಗ್ರಾಮವನ್ನು ರೋಚಕವಾಗಿ ಕಾವ್ಯ ಮೂಲಕ ಬಣ್ಣಿಸಿದ ಮೊದಲಿಗರು ಹಿ.ಮ.ನಾಗಯ್ಯನವರು. ನಾಡಿನ ಕುವೆಂಪು ಸೇರಿ ಅನೇಕ ಸಾಹಿತಿಗಳ ಆತ್ಮೀಯರಾಗಿದ್ದ ಅವರ ಸಾಹಿತ್ಯಕ್ಕೆ ಪ್ರಚಾರ ಸಿಗದೇ ಕಾರಣಕ್ಕೆ ಹೆಚ್ಚು ಬೆಳಕಿಗೆ ಬರಲಾಗಲಿಲ್ಲ. ಮುಂದಿನ ಪೀಳಿಗೆಗೆ ಇತಿಹಾಸ, ಪುರಾಣ ಪರಂಪರೆಗಳನ್ನು ತಿಳಿಸಿದಾಗ ಮಾತ್ರ ನಮ್ಮ ಪರಂಪರೆ ಮುಂದುವರೆಯುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಅಖಂಡ ಕೂಡ್ಲಿಗಿ ತಾಲೂಕಿನಲ್ಲಿ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಅನೇಕರಿದ್ದು, ಬಳ್ಳಾರಿಯಲ್ಲಿ ನಡೆವ ಸಾಹಿತ್ಯ ಸಮ್ಮೇಳದಲ್ಲಿ ಈ ಭಾಗದ ಸಾಹಿತಿಗಳ ಕುರಿತು ವಿಚಾರ ಗೋಷ್ಠಿ ಆಯೋಜನೆ ಮಾಡುತ್ತೇವೆ. ಹಿ.ಮ.ನಾಗಯ್ಯನವರ ಸಾಹಿತ್ಯ ಕೊಡುಗೆ ದೊಡ್ಡದಿದ್ದು, ಅವರ ಕುಟುಂಬದವರು ಟ್ರಸ್ಟ್ ರಚಿಸಿ ಅದರ ಮೂಲಕ ಅವರ ಸಾಹಿತ್ಯವನ್ನು ಯುವಕರಿಗೆ ಪರಿಚಯಿಸುವ ಕಾರ್ಯ ಮಾಡಬೇಕು. ಅವರ ಸಾಹಿತ್ಯವನ್ನು ಡಿಜಿಟಿಲೀಕರಣ ಮಾಡಿ ಇಂದಿನ ಪೀಳಿಗೆಗೂ ತಿಳಿಸುವ ಚಿಂತನೆ ಮಾಡಬೇಕು ಎಂದರು.ಬೆಂಗಳೂರಿನ ಎಚ್.ಎಂ. ಹರ್ಷ, ಕಸಾಪ ತಾಲೂಕು ಅಧ್ಯಕ್ಷ ದೇವರಮನಿ ಕೊಟ್ರೇಶ, ಸಾನ್ನಿಧ್ಯ ವಹಿಸಿದ್ದ ಶ್ರೀ ಪ್ರಶಾಂತಸಾಗರ ಶಿವಾಚಾರ್ಯ ಸ್ವಾಮಿಗಳು, ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಬಿ.ಎಂ. ಪ್ರಭುದೇವ, ಶಸಾಪ ಜಿಲ್ಲಾ ಕಾರ್ಯದರ್ಶಿ ಎನ್.ಎಂ. ರವಿಕುಮಾರ, ಬೆಂಗಳೂರಿನ ಜೆ.ಎಂ. ಶಶಿಕುಮಾರ ಮಾತನಾಡಿದರು. ಸನ್ಮಾನಿತರಾದ ಹಿ.ಮ.ನಾಗಯ್ಯ ಕುರಿತು ಸಂಶೋಧನೆ ವ್ಯಾಸಂಗ ಮಾಡುತ್ತಿರುವ ಉಪನ್ಯಾಸಕಿ ಕೆ.ಜೆ. ಪೂರ್ಣಿಮಾ ಹಿ.ಮ.ನಾ. ಕುರಿತು ಮಾತನಾಡಿದರು. ಸಾಹಿತಿ ಕುಂ. ವೀರಭದ್ರಪ್ಪ, ಕಲಾಕೇಂದ್ರ ಅಧ್ಯಕ್ಷ ಎಎಂಜೆ ಸತ್ಯಪ್ರಕಾಶ ಇದ್ದರು.
ಕಸಾಪ ಖಜಾಂಚಿ ಈಶ್ವರಪ್ಪ ತುರಕಾಣಿ, ಕಾರ್ಯದರ್ಶಿ ಅರವಿಂದ ಬಸಾಪುರ, ಎಸ್.ಶಶಿಕಲಾ ನಿರ್ವಹಿಸಿದರು.