ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳದಿಂದ ಆರಂಭವಾಗಿ ಫಲಿತಾಂಶ ಹೆಚ್ಚಳ, ಆಸ್ತಿ ಸಂರಕ್ಷಣೆ, ಬಡ ವಿದ್ಯಾರ್ಥಿಗಳಿಗೆ ನೆರವು, ಕಾಂಪೌಂಡ್ ನಿರ್ಮಾಣ, ಶಾಲೆಗೆ ಹೊಸ ಬಣ್ಣಗಳ ಮೆರುಗು, ಹೈಟೆಕ್ ಮಾದರಿ ಶೌಚಾಲಯದೊಂದಿಗೆ ಖಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಮಂಡ್ಯ ತಾಲೂಕಿನ ಚಿಕ್ಕಮಂಡ್ಯ ಶಾಲೆಗೆ ನವನಾವಿನ್ಯತೆಯನ್ನು ತಂದುಕೊಟ್ಟವರು ಮುಖ್ಯ ಶಿಕ್ಷಕ ಎಚ್.ಎನ್.ದೇವರಾಜು.
ಶಿಕ್ಷಕರಾಗಿ ೩೨ ವರ್ಷ ೧೦ ತಿಂಗಳು ಕಾರ್ಯನಿರ್ವಹಿಸಿರುವ ಎಚ್.ಎನ್.ದೇವರಾಜು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ, ನಾಗಮಂಗಲ ತಾಲೂಕಿನ ಬೆಳ್ಳೂರು, ಮದ್ದೂರು ತಾಲೂಕಿನ ಬಿದರಹೊಸಹಳ್ಳಿ, ಮಂಡ್ಯದ ಬಾಲಕಿಯರ ಪದವಿಪೂರ್ವ ಕಾಲೇಜು, ಮಂಡ್ಯ ತಾಲೂಕು ಜಿ.ಮಲ್ಲಿಗೆರೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಕಳೆದ ಮೂರೂವರೆ ವರ್ಷಗಳಿಂದ ಚಿಕ್ಕಮಂಡ್ಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಠ್ಯಪುಸ್ತಕ ರಚನಾ ಸಮಿತಿ, ಅನುವಾದ ಸಮಿತಿ, ಶಿಕ್ಷಕರ ತರಬೇತಿ ಸಾಹಿತ್ಯ ರಚನಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವವಿದೆ.ಹಲವು ವರ್ಷಗಳಿಂದ ಒತ್ತುವರಿಯಾಗಿದ್ದ ಅಂದಾಜು ಒಂದೂವರೆ ಕೋಟಿ ರು.ಗೂ ಅಧಿಕ ಮೌಲ್ಯದ ಸರ್ಕಾರಿ ಶಾಲಾ ಜಮೀನನ್ನು ಪುನರ್ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿದ್ದಾರೆ. ಶಾಸಕರ ಅನುದಾನ ಬಳಸಿ ೫ ಲಕ್ಷ ರು. ವೆಚ್ಚದಲ್ಲಿ ಕಾಂಪೌಂಡ್ ಮತ್ತು ಗೇಟ್ ಅಳವಡಿಸಿ ಭದ್ರತೆ ಒದಗಿಸಿದ್ದಾರೆ. ಶಾಲೆಯ ಹೆಣ್ಣುಮಕ್ಕಳಿಗೆ ಹೈಟೆಕ್ ಶೌಚಾಲಯ, ಶಾಲೆಯ ಕಟ್ಟಡ ಮತ್ತು ಕಾಂಪೌಂಡ್‌ಗಳಿಗೆ ಹೊಸದಾಗಿ ಸುಣ್ಣ ಬಣ್ಣ ಬಳಿದು, ಕಲಾವಿದರಿಂದ ರೇಖಾಚಿತ್ರಗಳನ್ನು ಬರೆಸಿ ಶಾಲೆಯನ್ನು ಅಂದ ಹೆಚ್ಚಿಸಿದ್ದಾರೆ.
ಶಾಲೆಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಮನೆ ಮನೆ ಭೇಟಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಶೈಕ್ಷಣಿಕ ವರ್ಷ ಆರಂಭಕ್ಕೆ ಒಂದು ತಿಂಗಳು ಮೊದಲೇ ಜನರ ಮನವೊಲಿಸಿ ಶಾಲೆಗೆ ದಾಖಲಿಸುವಂತೆ ಮಾಡಿದ್ದಾರೆ. ಪರಿಣಾಮ ಶಾಲಾ ದಾಖಲಾತಿಯಲ್ಲೂ ಹೆಚ್ಚಳವಾಗಿದೆ. ಶಾಲಾವಧಿಯನ್ನೂ ಮೀರಿ ಪರೀಕ್ಷೆಯ ಕಾಲದಲ್ಲಿ ಒಂದು ತಾಸು ಹೆಚ್ಚುವರಿಯಾಗಿ ಗಣಿತ ಮತ್ತು ಇಂಗ್ಲೀಷ್ ಪಾಠಗಳನ್ನು ಹೇಳಿಕೊಡುತ್ತಿರುವುದರಿಂದ ಫಲಿತಾಂಶದಲ್ಲೂ ಏರಿಕೆಯಾಗಿದೆ. ದೈಹಿಕ ಶಿಕ್ಷಕರಿಗೆ ಕ್ರೀಡಾ ಸಾಮಗ್ರಿಗಳನ್ನು ನೀಡಿ ಹೆಚ್ಚಿನ ಶಕ್ತಿ ತುಂಬಿದ ಪರಿಣಾಮ ಕಳೆದ ಮೂರು ವರ್ಷಗಳಲ್ಲಿ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಲು ನೆರವಾಗಿದ್ದಾರೆ.ಚಿಕ್ಕಮಂಡ್ಯ ಸರ್ಕಾರಿ ಶಾಲೆಯಲ್ಲಿ ಕಲಿತು ಸರ್ಕಾರಿ ಕೋಟಾದಡಿ ವೈದ್ಯಕೀಯ ಸೀಟು ಪಡೆದಿರುವ ಧನುಷ್‌ಗೌಡ ಎಂಬ ವಿದ್ಯಾರ್ಥಿಯ ಐದು ವರ್ಷಗಳ ಶೈಕ್ಷಣಿಕ ವೆಚ್ಚವನ್ನು ಭರಿಸುವ ಸಂಪೂರ್ಣ ಜವಾಬ್ದಾರಿಯನ್ನು ಎಚ್.ಎನ್.ದೇವರಾಜು ವಹಿಸಿಕೊಂಡಿದ್ದಾರೆ. ಚಿತ್ರಕೂಟ ಸಂಸ್ಥೆಯ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಸಿರು ಪುರಸ್ಕಾರ ಚಿಕ್ಕಮಂಡ್ಯ ಪ್ರೌಢಶಾಲೆಗೆ ಲಭಿಸಿರುವುದು ದೇವರಾಜು ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.
ವಿದ್ಯಾರ್ಥಿಗಳ ಸ್ಮಾರ್ಟ್ ಕ್ಲಾಸ್‌ಗೆ ಒಂದೂವರೆ ಲಕ್ಷ ರು. ವೆಚ್ಚದಲ್ಲಿ ಸ್ಮಾರ್ಟ್ ಟಿವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ಎನ್‌ಜಿಓ ಮೂಲಕ ಶಾಲೆಗೆ ದೊರಕಿಸಿಕೊಟ್ಟು ಉತ್ತಮ ಹಾಗೂ ಮಾದರಿ ಶಿಕ್ಷಕರಾಗಿ ಹೊರಹೊಮ್ಮಿದ್ದಾರೆ.