ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಟುಂಬದವರ ಬಗ್ಗೆ ಅವಹೇಳನಕಾರಿಯಾಗಿ ಟೀಕೆ ಮಾಡುವ ಪ್ರವೃತ್ತಿಯನ್ನು ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಬಿಡಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಹೋಬಳಿಯ ಆನೆಗೊಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಹೇಮಾವತಿ ಶುಗರ್ಸ್ ಕಾರ್ಖಾನೆ ನಿರ್ದೇಶಕರ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೆ.ಬಿ.ಚಂದ್ರಶೇಖರ್ ಅವಿವೇಕದಿಂದ ದೇವೇಗೌಡರನ್ನು ಮೂದಲಿಸುವುದು ತರವಲ್ಲ ಎಂದು ಸಲಹೆ ನೀಡಿದರು.

ವಿಶ್ವಮಟ್ಟದಲ್ಲಿ ಗೌಡರಿಗೆ ಗೌರವವಿದೆ. ಇವರ ಕೀಳುಮಟ್ಟದ ಮಾತಿನಿಂದ ತಾಲೂಕಿನಲ್ಲಿ ಮತದಾರರು 15 ವರ್ಷಗಳಿಂದ ಮನೆಯಲ್ಲಿ ಕೂರಿಸಿದ್ದಾರೆ. ಕಾಂಗ್ರೆಸ್ ಪಕ್ಷದ ತಮ್ಮ ರಾಷ್ಟ್ರೀಯ ನಾಯಕರು, ನೆರೆಹೊರೆ ರಾಷ್ಟ್ರದವರು ದೇವೇಗೌಡರಿಗೆ ಗೌರವಕೊಟ್ಟು ಮಾತನಾಡುತ್ತಾರೆ. ಇನ್ನಾದರೂ ತಮ್ಮ ವ್ಯಕ್ತಿತ್ವ ಬದಲಾಯಿಸಿಕೊಳ್ಳಲಿ ಎಂದು ಸಲಹೆ ನೀಡಿದರು.

ಮಾಜಿ ಸಿಎಂ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ಬಗ್ಗೆಯೂ ಲಘುವಾಗಿ ಮಾತನಾಡುತ್ತೀರಿ. ನಿಖಿಲ್‌ ಕುಮಾರಸ್ವಾಮಿ ಕುಟುಂಬದ ಗೌರವ ಉಳಿಸಿಕೊಂಡು ರಾಜ್ಯದ ಹಲವು ಕ್ಷೇತ್ರಗಳಲ್ಲಿ ಜನರೊಂದಿಗೆ ಬೆರೆತು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ ಎಂದರು.


ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಕಟ್ಟುವುದು ದೊಡ್ಡ ಸಾಹಸವಾಗಿದೆ. ದೇವೇಗೌಡರು 50 ವರ್ಷದಿಂದ ಪಕ್ಷವನ್ನು ಕಟ್ಟಿ ಉಳಿಸಿಕೊಂಡಿದ್ದಾರೆ .ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಲು ಸನ್ನಿಹಿತವಾಗಿದೆ. ಗೌರವದಿಂದ ವರ್ತಿಸಿ ಟೀಕೆ- ಟಿಪ್ಪಣೆ ಮಾಡುವ ಬರದಲ್ಲಿ ನಾಲಿಗೆ ಬಿಗಿಹಿಡಿದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ವೇಳೆ ಮುಖಂಡರಾದ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡ, ಬಿ.ಎಸ್.ಮಂಜುನಾಥ್, ಮಧು, ಕಾಯಿ ಮಂಜೇಗೌಡ, ಶೇಖರ್, ರಾಮೇಗೌಡ ಇದ್ದರು.