ಎಚ್.ಡಿ.ಕೆಗೆ ಸಂಪುಟದಲ್ಲಿ ಉತ್ತಮವಾದ ಸ್ಥಾನ ನೀಡಬೇಕು:ಎಚ್. ವಿಶ್ವನಾಥ್

| Published : Jun 06 2024, 12:30 AM IST

ಎಚ್.ಡಿ.ಕೆಗೆ ಸಂಪುಟದಲ್ಲಿ ಉತ್ತಮವಾದ ಸ್ಥಾನ ನೀಡಬೇಕು:ಎಚ್. ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಆಶೀರ್ವಾದದಿಂದ ಬಾರಿ ಬಹುಮತ ಗಳಿಸಿರುವ ಅವರಿಗೆ ರೈತರ ಪರವಾಗಿ ಕೆಲಸ ಮಾಡುವ ಸ್ಥಾನ ನೀಡಿದರೆ ಕ್ಷೇತ್ರಕ್ಕೆ ಮತ್ತು ರಾಜ್ಯಕ್ಕೆ ಅನುಕೂಲವಾಗಲಿದ್ದು, ಈ ವಿಚಾರವನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಮಂಡ್ಯ ಲೋಕಸಭಾ ಕ್ಷೇತ್ರದ ಎನ್.ಡಿಎ ಅಭ್ಯರ್ಥಿಯಾಗಿ ಭರ್ಜರಿ ಜಯಗಳಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನರೇಂದ್ರಮೋದಿ ಅವರ ಸಂಪುಟದಲ್ಲಿ ಉತ್ತಮವಾದ ಸ್ಥಾನ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೇಳಿದರು.

ಜನರ ಆಶೀರ್ವಾದದಿಂದ ಬಾರಿ ಬಹುಮತ ಗಳಿಸಿರುವ ಅವರಿಗೆ ರೈತರ ಪರವಾಗಿ ಕೆಲಸ ಮಾಡುವ ಸ್ಥಾನ ನೀಡಿದರೆ ಕ್ಷೇತ್ರಕ್ಕೆ ಮತ್ತು ರಾಜ್ಯಕ್ಕೆ ಅನುಕೂಲವಾಗಲಿದ್ದು, ಈ ವಿಚಾರವನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಬೇಕು ಎಂದು ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ಸಮಸ್ತ ಮತ ಬಾಂಧವರ ಪರವಾಗಿ ನೂತನ ಸಂಸದರನ್ನು ಅಭಿನಂದಿಸುವುದಾಗಿ ಅವರು ಹೇಳಿದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಕಾಂಗ್ರೆಸಿನ ಎಲ್ಲ ನಾಯಕರು ಮೈಸೂರಿನ ಯದುವಂಶದವರನ್ನು ಹಗುರವಾಗಿ ಕಂಡು ಚುನಾವಣೆಯಲ್ಲಿ ಅವರನ್ನು ಜರಿದರು. ಆದರೆ ನಾಡಿನ ಏಳಿಗೆಗೆ ಅಮೂಲಾಗ್ರ ಕೊಡುಗೆ ನೀಡಿರುವ ಆ ವಂಶದ ಕುಡಿಯಾಗಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಚುನಾಯಿಸುವ ಮೂಲಕ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪ್ರಬುದ್ದ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದರು.

ಈ ಲೋಕಸಭಾ ಚುನಾವಣೆಯಲ್ಲಿ ಎನ್.ಡಿಎ ಮೈತ್ರಿಕೂಟದಿಂದಲೇ ಮೂವರು ಮಾಜಿ ಮುಖ್ಯಮಂತ್ರಿಗಳು ಸಂಸದರಾಗಿ ಚುನಾಯಿತರಾಗಿರುವುದು ಅತ್ಯಂತ ಸಂಸತದ ವಿಚಾರವಾಗಿದ್ದು ಆ ತ್ರಿಮೂರ್ತಿಗಳು ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ದಿಯ ವಿಚಾರದಲ್ಲಿ ಟೊಂಕ ಕಟ್ಟಿ ನಿಂತು ಕೆಲಸ ಮಾಡಿ ಸಮಗ್ರ ಅಭಿವೃದ್ದಿ ಮತ್ತು ಏಳಿಗೆಗೆ ಕಾರಣರಾಗಬೇಕೆಂದರು.

ಈ ಹಿಂದೆ ಚುನಾವಣೆಗಳು ಅಭಿವೃದ್ದಿ ಅಜೆಂಡಾದ ಮೇಲೆ ನಡೆಯುತ್ತಿದ್ದವು, ಆದರೆ ಇಂದು ಜಾತಿ, ಸ್ವ-ಜನ, ಪಕ್ಷಪಾತ ಮತ್ತು ಒಬ್ಬರನ್ನೊಬ್ಬರು ಟೀಕಿಸುವುದರಲ್ಲಿ ನಡೆಯುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು, ಪ್ರಧಾನ ಮಂತ್ರಿಯಾದವರೆ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಂಗಳ ಸೂತ್ರ ಸೇರಿದಂತೆ ಇತರ ಅಸಂಬದ್ದ ಹೇಳಿಕೆ ನೀಡಿದ್ದು ತರವಲ್ಲ ಎಂದು ಕುಟುಕಿದರು.

ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಜನರ ಮನಸ್ಸನ್ನು ಗೆದ್ದು ಹೆಚ್ಚು ಸ್ಥಾನ ಗಳಿಸಲು ಅವರ ಕಷ್ಟ ಸುಖಗಳನ್ನು ಕೇಳಿ ಕೆಲಸ ಮಾಡಬೇಕೆ ಹೊರತು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಹೋದರೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಕೆ ನೀಡಿದರು.

ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಕಾರ್ಯದರ್ಶಿ ಎಚ್.ಡಿ. ಪ್ರಭಾಕರ್ ಜೈನ್, ಖ್ಯಾತ ಮೂಳೆ ತಜ್ಞ ಡಾ. ಮೆಹಬೂಬ್ಖಾನ್, ಪುರಸಭೆ ಸದಸ್ಯ ಕೆ.ಪಿ. ಪ್ರಭುಶಂಕರ್, ಮಾಜಿ ಸದಸ್ಯರಾದ ಎನ್. ಶಿವಕುಮಾರ್, ಪೆರಿಸ್ವಾಮಿ, ನಂಜುಂಡ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಜೆಡಿಎಸ್ ಮುಖಂಡರಾದ ಕೃಷ್ಣಶೆಟ್ಟಿ, ಹನಸೋಗೆ ನಾಗರಾಜು, ಶಿವಾಜಿ ಗಣೇಶನ್, ಪವನ್ ಶಿವಾಜಿ ಇದ್ದರು.