ಕಡಬ ನಿವಾಸಿಗೆ ಹೆಚ್​1 ಎನ್​1 ದೃಢ : ಆರೋಗ್ಯ ಇಲಾಖೆ

| Published : Aug 08 2024, 01:40 AM IST

ಕಡಬ ನಿವಾಸಿಗೆ ಹೆಚ್​1 ಎನ್​1 ದೃಢ : ಆರೋಗ್ಯ ಇಲಾಖೆ
Share this Article
  • FB
  • TW
  • Linkdin
  • Email

ಸಾರಾಂಶ

ಕಡಬ, ಉಪ್ಪಿನಂಗಡಿ ಪರಿಸರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಇದೆ. ಆದರೆ ಅದೆಲ್ಲವೂ ಹೆಚ್​1 ಎನ್​1 ಜ್ವರವಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಉಪ್ಪಿನಂಗಡಿ: ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಕಡಬ ತಾಲೂಕಿನ ಪೇರಡ್ಕ ನಿವಾಸಿಯೊಬ್ಬರಿಗೆ ಹೆಚ್​1 ಎನ್​1 ದೃಢಪಟ್ಟಿದ್ದು, ಸಾರ್ವಜನಿಕರು ಮೆನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯು ವಿನಂತಿಸಿದೆ.

ಕಡಬದ ವ್ಯಕ್ತಿ ಒಬ್ಬರಲ್ಲಿ ಎಚ್‌1ಎನ್‌1 ರೋಗ ಲಕ್ಷಣಗಳು ಪತ್ತೆಯಾಗಿದೆ. ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ತಿಮ್ಮಯ್ಯ ತಿಳಿಸಿದ್ದಾರೆ.

ಎಚ್‌1ಎನ್‌1 ಲಕ್ಷಣಗಳುವೈರಾಣು ದಾಳಿ ಜಾಸ್ತಿ ಆದಂತೆ ಉಸಿರಾಟದ ತೊಂದರೆ, ಸಣ್ಣ ಜ್ವರ ಸುಸ್ತು ಕಾಣಿಸುತ್ತದೆ. ಸಾಧಾರಣವಾಗಿ ಜ್ವರ ಬಂದರೆ ಒಂದೆರಡು ದಿನದಲ್ಲಿ ಕಡಿಮೆ ಆಗುತ್ತದೆ. ಆದರೆ ಎಚ್‌1ಎನ್‌1 ಈ ಜ್ವರದಲ್ಲಿ ಮೊದಲು ಚಳಿ, ಗಂಟಲು ಉರಿ, ಕೆಮ್ಮು, ತಲೆನೋವು, ಸಿಕ್ಕಾಪಟ್ಟೆ ಮೈಕೈನೋವು, ನಿಶ್ಶಕ್ತಿ ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳಿಗೆ ವಾಂತಿ ಆಗುವ ಸಾಧ್ಯತೆಗಳು ಇರುತ್ತದೆ. ಇಲ್ಲಿಯವರೆಗೆ ಆರೋಗ್ಯವಾಗಿದ್ದ ವ್ಯಕ್ತಿಯ ದೇಹದಲ್ಲಿ ದಿಢೀರ್ ಆಗಿ ಈ ರೀತಿಯ ಬದಲಾವಣೆ ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಹೋಗುವುದು ಉತ್ತಮ.ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಅತೀ ವೇಗವಾಗಿ ಹರಡುವುದರಿಂದ ರೋಗ ಲಕ್ಷಣವನ್ನು ಹೊಂದಿರುವ ವ್ಯಕ್ತಿಗಳ ಜೊತೆ ವ್ಯವಹರಿಸುವ ಸಮಯದಲ್ಲಿ ಮುಖ ಕವಚದಂತಹ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಕೈಗೊಳ್ಳಬೇಕು. ಮೊದಲು ಚಳಿ, ಗಂಟಲು ಉರಿ, ಕೆಮ್ಮು, ತಲೆನೋವು, ಸಿಕ್ಕಾಪಟ್ಟೆ ಮೈಕೈನೋವು, ನಿಶ್ಶಕ್ತಿ, ಇವೆಲ್ಲ ಇದರ ರೋಗ ಲಕ್ಷಣಗಳಾಗಿದೆ. ಇದು ಗುಣವಾಗುವ ಕಾಯಿಲೆಯಾಗಿರುವುದರಿಂದ ಜನರು ಭಯಪಡುವ ಅಗತ್ಯವಿಲ್ಲ ಆದರೆ ಎಚ್ಚರಿಕೆ ಅಗತ್ಯ. ಕಡಬ ತಾಲೂಕಿನಲ್ಲಿ ಈ ಒಂದು ತಿಂಗಳ ಹಿಂದೆ ನೆಲ್ಯಾಡಿ ಪರಿಸರದಲ್ಲಿ ಒಬ್ಬರಿಗೆ ಈ ರೋಗ ಕಾಣಿಸಿಕೊಂಡಿತ್ತು. ಅವರು ಈಗ ಸಂಪೂರ್ಣ ಆರೋಗ್ಯವಾಗಿದ್ದಾರೆ. ಕಡಬ, ಉಪ್ಪಿನಂಗಡಿ ಪರಿಸರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜ್ವರ ಇದೆ. ಆದರೆ ಅದೆಲ್ಲವೂ ಹೆಚ್​1 ಎನ್​1 ಜ್ವರವಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.