ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಒಂದು ವರ್ಷದ ಹಿಂದೆ ವರ್ತೂರು ಸಮೀಪ ಪ್ರಸ್ಟೀಜ್ ಲೇಕ್ ಸೈಡ್ ಹ್ಯಾಬಿಟೇಟ್ ಹೋಮ್ ಅಪಾರ್ಟ್‌ಮೆಂಟ್‌ನ ಈಜುಕೊಳದಲ್ಲಿ ಬಿದ್ದು ಮಗು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಪದಾಧಿಕಾರಿಗಳ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.ಪ್ರಕರಣ ಸಂಬಂಧ ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಪ್ರಸ್ಟೀಜ್ ಲೇಕ್ ಸೈಡ್ ಹ್ಯಾಬಿಟೇಟ್ ಹೋಮ್ ಮಾಲೀಕರ ಸಂಘದ ಅಧ್ಯಕ್ಷ ದೇಬಶಿಶ್ ಸಿನ್ಹಾ ಮತ್ತಿತರ ಪದಾಧಿಕಾರಿಗಳು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.
ಅಲ್ಲದೆ, ಅಪಾರ್ಟ್‌ಮೆಂಟ್‌ಗಳಲ್ಲಿ ಸುರಕ್ಷತೆ ಹೊಣೆ ಸಂಘದ ಜಬಾಬ್ದಾರಿಯಾಗಿದೆ. ಈಜುಕೊಳದ ಬಳಿ ಭದ್ರತಾ ಸಿಬ್ಬಂದಿ ನಿಯೋಜಿಸದೆ ನಿರ್ಲಕ್ಷ್ಯ ಮಾಡಿರುವುದರಿಂದಲೇ ಈ ಘಟನೆ ನಡೆದಿದೆ. ಆದ್ದರಿಂದ ಪ್ರಕರಣದ ಆರೋಪಿಗಳ ವಿರುದ್ಧ ನಿರ್ಲಕ್ಷ್ಯದಿಂದ ಸಾವಿಗೆ ಹೊಣೆಯಾಗಿರುವ ಆರೋಪ ಹೊರಿಸಿ ವಿಚಾರಣೆ ನಡೆಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.ಇದೇ ವೇಳೆ ಉದ್ದೇಶಪೊರ್ವಕವಲ್ಲದ ಕೊಲೆ ಮತ್ತು ಅಕ್ರಮ ಕೂಟ ಸೇರಿದ ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ದೋಷಾರೋಪಗಳನ್ನು ರದ್ದುಪಡಿಸಿದೆ.
ಪ್ರಕರಣವೇನು?:ರಾಜೇಶ್ ಕುಮಾರ್ ದಮೆರ್ಲಾ ಅವರ ಸಣ್ಣ ಮಗುವೊಂದು 2023ರ ಡಿ.28ರಂದು ಅರ್ಜಿದಾರರ ಅಪಾರ್ಟ್‌ಮೆಂಟ್ ಸಂಕೀರ್ಣದ ಆವರಣದಲ್ಲಿನ ಈಜುಕೊಳಕ್ಕೆ ಬಿದ್ದು ಸಾವನ್ನಪ್ಪಿತ್ತು. ಆ ಹಿನ್ನೆಲೆಯಲ್ಲಿ ಮಗುವಿನ ತಂದೆ ಪೊಲೀಸರಿಗೆ ದೂರು ದಾಖಲಿಸಿ, ಈಜುಕೊಳದ ಬಳಿ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದಿರುವುದರಿಂದಲೇ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ನಿರ್ಲಕ್ಷ್ಯವೇ ಘಟನೆ ಕಾರಣ ಎಂದು ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ್ದ ಪೊಲೀಸರು, ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿರುದ್ಧ ಉದ್ದೇಶಪೂರ್ವಕವಲ್ಲದ ಕೊಲೆ, ನಿರ್ಲಕ್ಷ್ಯದಿಂದ ಸಾವಿಗೆ ಕಾರಣರಾದ ಮತ್ತು ಅಕ್ರಮ ಕೂಟ ಸೇರಿದ ಪ್ರಕರಣ ಸಂಬಂಧ ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು, ಆ ಮಗು ಸಾಯಲಿ ಎಂಬ ಉದ್ದೇಶ ತಮಗೆ ಇರಲಿಲ್ಲ. ಬೆಂಗಳೂರು ನಗರದ ಯಾವ ಅಪಾರ್ಟ್‌ಮೆಂಟ್‌ನ ಈಜುಕೊಳಗಳಲ್ಲಿ ಭದ್ರತಾ ಸಿಬ್ಬಂದಿ ಇರುವುದಿಲ್ಲ. ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲದ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿದ್ದರು.