ಸಾರಾಂಶ
ಹರಪನಹಳ್ಳಿ: ತಾಲೂಕಿನ ಅರಸಿಕೇರಿ -ಉಚ್ಚಂಗಿದುರ್ಗ ರಸ್ತೆ ತಗ್ಗು, ಗುಂಡಿಗಳಿಂದ ವಿಪರೀತ ಹಾಳಾಗಿದೆ. ವಾಹನ ಸವಾರರು ಜೀವ ಹಿಡಿದುಕೊಂಡು ಸಂಚರಿಸಬೇಕಿದೆ. ರಸ್ತೆ ಅಭಿವೃದ್ಧಿ ಮಾಡದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಈ ಭಾಗದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮೂರು ವರ್ಷಗಳ ಹಿಂದೆ ರಸ್ತೆ ಅಭಿವೃದ್ಧಿಯಾಗಿದ್ದು, ಇಷ್ಟು ಬೇಗ ರಸ್ತೆ ಹಾಳಾಗಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಳೆಗಾಲವಾಗಿರುವುದರಿಂದ ರಸ್ತೆ ಮಧ್ಯೆ ಇರುವ ಗುಂಡಿಗಳಲ್ಲಿ ನೀರು ತುಂಬಿರುವುದರಿಂದ ವಾಹನ ಸವಾರರ ಸಂಚಾರಕ್ಕೆ ಇನ್ನಷ್ಟು ತೊಂದರೆಯಾಗಿದೆ. ತಾಲೂಕಿನ ಐತಿಹಾಸಿಕ ಹಿನ್ನೆಲೆಯ ಅರಸೀಕೇರಿ ಗ್ರಾಮದಲ್ಲಿ ಪಂಚಗಣಾಧೀಶ್ವರರ ಪೈಕಿ ಶ್ರೀ ಕೋಲಾಶಾಂತೇಶ್ವರ ಮಠವಿದೆ. ರಾಜ್ಯದ ನಾಡಿನ ಮೂಲೆ ಮೂಲೆಗಳಿಂದ ಹುಣ್ಣಿಮೆ, ಅಮಾವಾಸ್ಯೆ, ಹಬ್ಬ, ಜಾತ್ರೆಗಳಲ್ಲಿ ಲಕ್ಷಾಂತರ ಭಕ್ತರ ಸಮಾಗಮಾಗೊಳ್ಳುವ ಸ್ಥಳ ಉಚ್ಚಂಗಿದುರ್ಗವಾಗಿದೆ. ಇಲ್ಲಿ ಉಚ್ಚಂಗೆಮ್ಮದೇವಿ ನೆಲೆಸಿದ್ದು, ಇಲ್ಲಿಗೆ ನಿತ್ಯವೂ ಭಕ್ತರ, ಸಾರ್ವಜನಿಕರ, ಪ್ರಯಾಣಿಕರ ಓಡಾಟ ಇದ್ದೇ ಇರುತ್ತದೆ. ಆದರೆ ರಸ್ತೆಗಳು ಅಲ್ಲಲ್ಲಿ ಹದಗೆಟ್ಟು ವಾಹನಗಳ ಓಡಿಸಲು ಸಾಕಷ್ಟು ಅಡ್ಡಿಯಾಗುತ್ತಿದೆ.
ಸೇತುವೆ ಕುಸಿತ:ಅರಸಿಕೇರಿ-ಉಚ್ಚಂಗಿದುರ್ಗ ಮಧ್ಯದ ಸೇತುವೆ ಕುಸಿದಿದೆ. ಅದರಲ್ಲಿಯೇ ವಾಹನ ಸವಾರರು ಉಸಿರು ಬಿಗಿ ಹಿಡಿದು ಸಂಚರಿಸುತ್ತಾರೆ. ಯಾವಾಗ ಏನು ಬೇಕಾದರೂ ಆಗಬಹುದು ಎಂಬ ಸ್ಥಿತಿ ಇಲ್ಲಿ ಇದೆ. ಇಲ್ಲಿ ಕುಸಿದಿರುವ ಸೇತುವೆ ಕೂಡಲೇ ದುರಸ್ತಿ ಕೈಗೊಳ್ಳಬೇಕಿದೆ.
ರಸ್ತೆಗಾಗಿ ಹೋರಾಟ:ಸಿಪಿಐ ಹಾಗೂ ದಲಿತ ಸಂಘಟನೆಗಳು ಒಳಗೊಂಡು ವಿವಿಧ ಸಂಘಟನೆಗಳು ಮತ್ತು ವಿದ್ಯಾರ್ಥಿಗಳಿಂದ ರಸ್ತೆ ಅಭಿವೃದ್ಧಿ ಕೈಗೊಳ್ಳುವಂತೆ ವಿವಿಧ ರೀತಿಯಲ್ಲಿ ಅನೇಕ ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ.
ಕುಸಿದ ಸೇತುವೆ ದುರಸ್ತಿಗೆ ₹70 ಲಕ್ಷ ಮಂಜೂರಾಗಿದ್ದು, ಮಳೆಗಾಲ ನಿಂತ ಬಳಿಕ ದುರಸ್ತಿ ಕಾಮಗಾರಿ ಆರಂಭವಾಗಲಿದೆ. ಅರಸೀಕೇರಿ ಬಳಿ ಸೇತುವೆಗೆ (ಸಿಡಿ ನಿರ್ಮಾಣ) ಕೆಕೆಆರ್‌ಡಿಬಿ ಯೋಜನೆಯಲ್ಲಿ ₹2 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದಂತೆ ದಾವಣಗೆರೆ ಅಣಜಿ ರಸ್ತೆಗೆ ₹10 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಮಂಜೂರಾತಿ ದೊರೆತು ಹಣ ಬಿಡುಗಡೆಯಾದ ಆನಂತರ ಹದಗೆಟ್ಟ ಆ ರಸ್ತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಮೂಲಗಳು ತಿಳಿಸಿವೆ.ಅರಸಿಕೇರಿ-ಉಚ್ಚಂಗಿದುರ್ಗದ ರಸ್ತೆ ತೀರಾ ಹದಗೆಟ್ಟಿದೆ. ತ್ವರಿತವಾಗಿ ರಸ್ತೆ ಅಭಿವೃದ್ಧಿಯಾಗಬೇಕು. ಇದೇ ರಸ್ತೆಯಲ್ಲಿ ಕುಸಿದಿರುವ ಸೇತುವೆಯನ್ನು ಅವಘಡ ಸಂಭವಿಸುವ ಮೊದಲು ಕೂಡಲೇ ಸಂಬಂಧಪಟ್ಟವರು ದುರಸ್ತಿ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಸಿಪಿಐ ಕಾರ್ಯದರ್ಶಿ ಗುಡಿಹಳ್ಳಿ ಹಾಲೇಶ.
3ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿಯಾಗಿದ್ದು, ಪುನಃ ರಸ್ತೆ ವಿಪರೀತ ಹದಗೆಟ್ಟಿದೆ. ಈ ರಸ್ತೆಗಳಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರ ಹಾಗೂ ಇತರ ವಾಹನಗಳ ಮಧ್ಯೆ ಅಪಘಾತಗಳು ಸಂಭವಿಸಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಮುಂದೆ ಆಗಬಹುದಾದ ಸಾವು-ನೋವು ತಡೆಯಲು ಕೂಡಲೇ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎನ್ನುತ್ತಾರೆ ಅರಸಿಕೇರಿ ಪ್ರಶಾಂತ ಪಾಟೀಲ್.