ಸಾರಾಂಶ
ಶಿಗ್ಗಾಂವಿ: ಬಸವಣ್ಣನವರ ಬಲಗೈ ಬಂಟರೆಂದೇ ಖ್ಯಾತಿಗೆ ಒಳಗಾದ ಶಿವಶರಣ ಹಡಪದ ಅಪ್ಪಣ್ಣನವರು ಅನುಭವ ಮಂಟಪದಲ್ಲಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಮುಖ್ಯ ಪಾತ್ರ ವಹಿಸಿದ್ದರು ಎಂದು ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಾಲೂಕಾಡಳಿತದ ವತಿಯಿಂದ ಹಮ್ಮಿಕೊಂಡ ಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಜಾಪ್ರಭುತ್ವದ ತಳಹದಿ ಮೂಲವನ್ನು ೧೨ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಕಾಣಬಹುದು. ೮೦೦ ವರ್ಷಗಳ ಹಿಂದಿನ ಹಡಪದ ಅಪ್ಪಣ್ಣನವರ ಹೆಸರು ಇಂದು ಸ್ಮರಿಸುವ ಕಾರಣ ಅವರ ಅಂದಿನ ಸಾಧನೆ. ಆದ್ದರಿಂದ ಕಾಯಕ ನಿಷ್ಠೆ ಹೆಸರಾದ ಅಪ್ಪಣ್ಣನವರ ಹಾದಿಯಲ್ಲಿ ನಡೆಯೋಣ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ಶರಣರು ಕಾಯಕದಲ್ಲಿ ದೇವರನ್ನು ಕಾಣಿ ಎಂಬ ಸಂದೇಶವನ್ನು ನೀಡಿದ್ದಾರೆ ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ, ಜಿಪಂ ಮಾಜಿ ಸದಸ್ಯ ಡಾ. ಮಲ್ಲೇಶಪ್ಪ ಹರಿಜನ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಫಕ್ಕೀರಪ್ಪ ಕುಂದೂರ, ಬಿಸಿಎಂ ಇಲಾಖೆಯ ಇಂದೂಧರ ಮುತ್ತಳ್ಳಿ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸೇರಿದಂತೆ ಹಲವರು ಮಾತನಾಡಿದರು.ಮುಖಂಡ ಅಶೋಕ ಕಾಳೆ, ತಾಲೂಕಿನ ರೈತ ಮುಖಂಡರಾದ ಮಂಜುನಾಥ ಕಂಕಣವಾಡ, ಆನಂದ ಕೆಳಗಿನಮನಿ, ಈರಣ್ಣ ಸಮಗೊಂಡ, ಕರವೇ ಸಂಘಟನೆಯ ಶಂಬು ಕೇರಿ, ರವಿ ಕಡಕೋಳ, ನ್ಯಾಯವಾದಿ ಬಸವರಾಜ ಜೇಕಿನಕಟ್ಟಿ, ಇಒ ಮಂಜುನಾಥ ಸಾಳೋಂಕೆ, ಬಿಜೆಪಿ ಅಧ್ಯಕ್ಷ ವಿಶ್ವನಾಥ ಹರವಿ, ಮಂಜುನಾಥ ಕ್ಷೌರದ, ಈರಣ್ಣ ಕ್ಷೌರದ, ವೀರೇಶ ಹಡಪದ, ಜಗದೀಶ್ ಹಡಪದ, ಬಸವರಾಜ ಹಡಪದ, ಶಿವಕುಮಾರ ಮಡ್ಲಿಕರ, ಮಹಾಲಿಂಗಪ್ಪ ಹಡಪದ, ಮುತ್ತುರಾಜ್ ಕ್ಷೌರದ ಶಿವರಾಜ್ ಕ್ಷೌರದ ಇತರರು ಇದ್ದರು.ಲಿಂಕ್ ಗೊಬ್ಬರ ಮಾರಾಟ ದಂಧೆ ಕಡಿವಾಣಕ್ಕೆ ಆಗ್ರಹ
ಹಿರೇಕೆರೂರು: ತಾಲೂಕಿನಾದ್ಯಂತ ರೈತರಿಗೆ ಅವಶ್ಯವಿರುವ ಗೊಬ್ಬರದ ಜತೆಗೆ ಲಿಂಕ್ ಗೊಬ್ಬರ ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಅಗ್ರೋ ಕೇಂದ್ರದ ಮಾಲೀಕರು ಕಾನೂನುಬಾಹಿರವಾಗಿ ಒತ್ತಾಯಿಸುತ್ತಿದ್ದಾರೆ. ಕೃಷಿ ಇಲಾಖೆ ಕೂಡಲೇ ಈ ಲಿಂಕ್ ಗೊಬ್ಬರ ನೀಡುವ ದಂಧೆ ನಿಲ್ಲಿಸಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲಿಂಕ್ ಗೊಬ್ಬರ ನೀಡುವುದು ಕೃಷಿ ಇಲಾಖೆಯಲ್ಲಿ ಯಾವುದೇ ನಿಯಮ ಇಲ್ಲ. ಆದರೆ ತಾಲೂಕಿನ ಪ್ರತಿಯೊಂದು ಅಗ್ರೋ ಕೇಂದ್ರಗಳಲ್ಲಿ ರೈತರಿಗೆ ಒತ್ತಾಯಪೂರ್ವಕವಾಗಿ ಲಿಂಕ್ ಗೊಬ್ಬರವನ್ನು ಕೊಡುತ್ತಿದ್ದಾರೆ.ಮೊದಲೇ ಅತಿವೃಷ್ಟಿಯಿಂದ ರೈತರು ಬಳಲಿದ್ದು, ಎರಡೆರಡು ಬಾರಿ ಬಿತ್ತನೆ ಮಾಡಿದರೂ ಬಿತ್ತಿದ ಬೆಳೆ ಹಾಳಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ನಡೆಯುತ್ತಿದ್ದರೂ ಕೃಷಿ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದಾರೆ ಎಂದರು.ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿಯೂ ಲಿಂಕ್ ಗೊಬ್ಬರ ಮಾರಾಟ ಮಾಡುತ್ತಿದ್ದು, ಸಂಘಗಳು ಸಹ ರೈತರನ್ನು ಲಿಂಕ್ ಗೊಬ್ಬರ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಕೂಡಲೇ ಲಿಂಕ್ ಗೊಬ್ಬರ ಮಾರಾಟ ಸ್ಥಗಿತ ಮಾಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಚ್ಚರಿಕೆ ನೀಡಿದರು.