ಸಾರಾಂಶ
ಹಾವೇರಿ: ಬಸವಣ್ಣನವರ ಸಮಕಾಲೀನವರಾದ ಹಡಪದ ಅಪ್ಪಣ್ಣ ಸಮಾಜದ ಕಲ್ಯಾಣ ಕ್ರಾಂತಿಗಾಗಿ ಶ್ರಮಿಸಿದವರಲ್ಲಿ ಪ್ರಮುಖರಾಗಿದ್ದಾರೆ. ಅಂತಹವರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ನಗರದ ವೈಭವಲಕ್ಷ್ಮಿ ಪಾರ್ಕ್ ಬಳಿ ಇರುವ ಬಸವಪ್ರಿಯ ಅಪ್ಪಣ್ಣ ಸಮುದಾಯ ಭವನದಲ್ಲಿ ಹಾವೇರಿ ಜಿಲ್ಲಾ, ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣನವರ 891ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನಕಾರರಲ್ಲಿ ಒಬ್ಬರು ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರು. ಬಸವಣ್ಣವರ ಆಪ್ತ ಕಾರ್ಯದರ್ಶಿಯಾಗುವ ಮೂಲಕ ಸಮಾಜದಲ್ಲಿನ ಅಂಕು-ಡೊಂಕನ್ನು ಹಾಗೂ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸುವ ಮೂಲಕ ಸಮಾನತೆ ಸಾರಿದರು. ಅಪ್ಪಣ್ಣನವರು ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದರು. ಅವರು ಬಸವಣ್ಣನವರ ಕ್ರಾಂತಿಕಾರಿ ಆಲೋಚನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಂಡು ಮುನ್ನೆಡೆದಿದ್ದರು ಎಂದರು.ಈ ವೇಳೆ ಸಮಾಜದ ಮುಖಂಡರಿಂದ ಮನವಿ ಸ್ವೀಕರಿಸಿದ ಅವರು, ಸರ್ಕಾರ ಹಡಪದ ಸಮಾಜದವರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಸರ್ಕಾರಿ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಹಡಪದ ಅಪ್ಪಣ್ಣ ಸಮಾಜವನ್ನು 2ಎಗೆ ಸೇರ್ಪಡೆ ಮಾಡಬೇಕೆಂಬ ವಿಚಾರ ಸರ್ಕಾರದ ಮಟ್ಟದಲ್ಲಿ ಆಗುವಂತಹದ್ದು. ಪ್ರತಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಕ್ಷೌರಿಕ ಅಂಗಡಿಗಳನ್ನು ಇಟ್ಟುಕೊಳ್ಳಲು ಕುಟೀರ ಸೌಲಭ್ಯ ನೀಡುವಂತೆಯೂ ಉಲ್ಲೇಖಿಸಿದ್ದು, ಈ ಬಗ್ಗೆ ಪರಿಶೀಲಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, 22ನೇ ಶತಮಾನದಲ್ಲಿ ಜಾತೀಯತೆಯ ಬೇರು ದೇಶದೆಲ್ಲೆಡೆ ನೆಲೆಯೂರಿಬಿಟ್ಟಿದೆ. ಈ ಬೇರನ್ನು ಬುಡಸಮೇತ ಕಿತ್ತೊಗೆಯಬೇಕಾದರೆ ಸಮಾಜದವರು ಶಿಕ್ಷಣವಂತರಾಗಬೇಕು. ಸಣ್ಣ ಸಮಾಜ ಮುಖ್ಯವಾಹಿನಿಗೆ ಬರಬೇಕಾದರೆ ಆರೋಗ್ಯ ಮತ್ತು ಶಿಕ್ಷಣವನ್ನು ಪಡೆದುಕೊಳ್ಳಬೇಕು. ತಮ್ಮ ಮಕ್ಕಳು ವೃತ್ತಿಯೊಂದಿಗೆ ಐಎಎಸ್, ಕೆಎಎಸ್ ಆಗುವ ನಿಟ್ಟಿನಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು. ಸರ್ಕಾರವೂ ತಮ್ಮೊಂದಿಗೆ ಇದ್ದು, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಹೇಳಿದರು.ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾಜದ ಜಿಲ್ಲಾಧ್ಯಕ್ಷ ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಲೂಕಾಧ್ಯಕ್ಷ ಅಣ್ಣಪ್ಪ ಕ್ಷೌರದ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಡಿ.ಎಸ್. ಮಾಳಗಿ, ನಿಂಗಪ್ಪ ದೇವಗಿರಿ, ಪ್ರಕಾಶ ಹಡಪದ, ಬಾಬಣ್ಣ ಕ್ಯಾಲಕೊಂಡ, ದುಂಡಪ್ಪ ಕಾಯಕದ, ನಾಗರಾಜ ಮೈಲಾರ, ನಿಂಗಪ್ಪ ಕ್ಷೌರದ, ಮಲ್ಲಿಕಾರ್ಜುನ ಹಡಪದ, ಹನುಮಂತಪ್ಪ ಹಡಪದ, ಸಿದ್ದಪ್ಪ ಕಾಯಕದ, ಬಸವರಾಜ ಕಾಯಕದ, ಬಸವರಾಜ ಅಪ್ಪಣ್ಣನವರ, ಶಿವಾನಂದ ಹಡಪದ, ಮಾಲತೇಶ ಹಡಪದ, ವಿರೂಪಾಕ್ಷಪ್ಪ ಹಡಪದ, ಶಿವಪ್ಪ ಅಜ್ಜಣ್ಣನವರ ಜಗದೀಶ ಹಡಪದ, ಪಂ. ಪಂಚಾಕ್ಷರಿ ಗವಾಯಿಗಳು ಇದ್ದರು.