ಸಾರಾಂಶ
- ಹತ್ತು ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಲೇ ಇದ್ದಾರೆ
- ಭೂಮಿ ಇದ್ದಿದ್ದರೇ ಈಗ ಕೋಟ್ಯಧೀಶ ಆಗಿರುತ್ತಿದ್ದರು- ವ್ಯವಸ್ಥೆಯ ಭ್ರಷ್ಟತೆ ವಿರುದ್ಧ ಸಾಂಕೇತಿಕ ಹೋರಾಟ ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಯೇ ಬರೋಬ್ಬರಿ 10 ಎಕರೆ ಭೂಮಿ ಕಳೆದುಕೊಂಡು ಈಗ ಜೋಪಡಿಯಲ್ಲಿದ್ದಾರೆ. ಹಾಗೊಂದು ವೇಳೆ ಇವರು, ತಮಗೆ ಇದ್ದ ಭೂಮಿ ಕಾಪಾಡಿಕೊಂಡು ಬಂದಿದ್ದರೇ ಈಗ ಕೋಟ್ಯಧೀಶ ಆಗಿರುತ್ತಿದ್ದರು.
ನಗರದ ಮಿಟ್ಟಿಕೇರಿ ನಿವಾಸಿ ಮಲ್ಲಿಕಾರ್ಜುನ ಹಡಪದ. ಶಾರದಾ ಚಿತ್ರಮಂದಿರದಲ್ಲಿ ಗೇಟ್ ಕೀಪರ್ ಆಗಿಯೂ ಕೆಲಸ ಮಾಡಿದ್ದಾರೆ. ಗೇಟ್ ಕೀಪರ್ ಆಗಿದ್ದಾಗಲೇ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಹುಬ್ಬೇರಿಸುವಂತೆ ಮಾಡಿದ್ದರು.1999ರಲ್ಲಿ ಪ್ರಥಮ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ. ಆಗ ಅಖಾಡಕ್ಕೆ ಇಳಿದ ಸಂಗಣ್ಣ ಕರಡಿ ಅವರಿಗೆ ಆತ್ಮೀಯರಾಗಿರುತ್ತಾರೆ. ಅವರ ಕೋರಿಕೆಯ ಮೇರೆಗೆ ನಾಮಪತ್ರ ಹಿಂದೆ ಪಡೆಯತ್ತಾರೆ. ಆದರೆ, ಸಂಗಣ್ಣ ಕರಡಿ ಅವರು ಕೊಟ್ಟ ಮಾತಿನಂತೆ ಇವರನ್ನು ಯಾವುದಕ್ಕೂ ನಾಮನಿರ್ದೇಶನ ಮಾಡುವುದಿಲ್ಲ.
ಇದು ಇವರನ್ನು ಕೆರಳಿಸುತ್ತದೆ. ಹೀಗಾಗಿ, 2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುತ್ತಾರೆ. ಸುಮಾರು 2 ಸಾವಿರಕ್ಕೂ ಅಧಿಕ ಮತ ಪಡೆಯುತ್ತಾರೆ. ಅಲ್ಲಿಂದ ಇವರು ನಿರಂತರವಾಗಿ ಸ್ಪರ್ಧೆ ಮಾಡುತ್ತಲೇ ಇದ್ದಾರೆ.ಐದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಲೆಕ್ಕಪತ್ರ ನೀಡದ್ದಕ್ಕೆ ಸ್ಪರ್ಧೆ ಮಾಡಲು ಅವಕಾಶ ಸಿಗದಂತೆ ಆಗಿದ್ದರಿಂದ ಎರಡು ಬಾರಿ ತಮ್ಮ ಪತ್ನಿಯನ್ನು ಅಖಾಡಕ್ಕೆ ಇಳಿಸಿದ್ದಾರೆ. ಆಗಲೂ ಗೆಲ್ಲಲು ಆಗಿಲ್ಲ.
ಐದು ಬಾರಿ ವಿಧಾನಸಭೆ, ಎರಡು ಬಾರಿ ಪತ್ನಿ, ನಾಲ್ಕು ಬಾರಿ ಮುನ್ಸಿಪಾಲ್ಟಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಈಗ ಎರಡನೇ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಇದುವರೆಗೂ ಒಂದೇ ಒಂದು ಚುನಾವಣೆಯಲ್ಲಿ ಗೆಲುವು ಕಂಡಿಲ್ಲ.ಹತ್ತು ಎಕರೆ ಭೂಮಿ ಮಾರಾಟ:
ಚುನಾವಣೆಗೆ ಸ್ಪರ್ಧೆ ಮಾಡಿ ಹಾಗೆ ಬಿಡುವುದಿಲ್ಲ. ಪ್ರಚಾರಕ್ಕಾಗಿ ಸುತ್ತಾಡುತ್ತಾರೆ. ವಾಹನವೊಂದನ್ನು ಮಾಡಿ, ಪ್ರಚಾರ ಮಾಡಿ ಮತಯಾಚನೆ ಮಾಡುತ್ತಾರೆ. ಇದಕ್ಕಾಗಿ ತಮಗಿದ್ದ ಹತ್ತು ಎಕರೆ ಭೂಮಿ ಮಾರಿಕೊಂಡಿದ್ದಾರೆ.ನಗರಕ್ಕೆ ಹೊಂದಿಕೊಂಡು ಇರುವ ಈ ಭೂಮಿಯ ಬೆಲೆ ಈಗ ಎಕರೆಗೆ ಒಂದೂವರೆ ಕೋಟಿ ಇದೆ. ಭೂಮಿ ಉಳಿಸಿಕೊಂಡಿದ್ದರೇ ಇವರು ಹತ್ತಾರು ಕೋಟಿಯ ಒಡೆಯರಾಗುತ್ತಿದ್ದರು.
ಶ್ರೀಗಳು ಕೊಟ್ಟಿದ್ದ ಭೂಮಿ:ಇವರ ತಂದೆಯವರು ಗವಿಸಿದ್ದೇಶ್ವರ ಮಹಾಸ್ವಾಮಿಗಳಿಗೆ ಕ್ಷೌರಿಕ ಸೇವೆ ಮಾಡುತ್ತಿದ್ದರಂತೆ. ಇದಕ್ಕಾಗಿ ಇವರಿಗೆ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಹತ್ತು ಎಕರೆ ಭೂಮಿ ನೀಡಿದ್ದರಂತೆ. ಇದೇ ಭೂಮಿ ಇವರ ಉಪಜೀವನಕ್ಕೆ ಇದ್ದಿದ್ದು. ಈ ಭೂಮಿಯನ್ನು ಮಾರಾಟ ಮಾಡಿ, ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಬಂದಿದ್ದ ಹಣ ಖರ್ಚು ಮಾಡಿದ್ದಾರೆ. ಈಗ ಜೋಪಡಿಯೊಂದರಲ್ಲಿ ಜೀವನ ನಡೆಸುತ್ತಿದ್ದಾರೆ.
ಅವ್ಯವಸ್ಥೆಯ ವಿರುದ್ಧ ನಮ್ಮ ಹೋರಾಟ. ಸ್ಪರ್ಧೆ ಮಾಡುತ್ತಲೇ ಹತ್ತು ಎಕರೆ ಭೂಮಿ ಕಳೆದುಕೊಂಡಿದ್ದೇನೆ. ಈಗಲೂ ಸ್ಪರ್ಧೆ ಮಾಡುವುದನ್ನು ನಿಲ್ಲಿಸಿಲ್ಲ ಮತ್ತು ನಿಲ್ಲಿಸುವುದಿಲ್ಲ. ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮತ್ತು ರಾಜಕಾರಣಗಳ ದುರಾಡಳಿತದ ವಿರುದ್ಧ ಸ್ಪರ್ಧೆ ಮಾಡುತ್ತಿದ್ದೇನೆ ಎನ್ನುತ್ತಾರೆ ಮಲ್ಲಿಕಾರ್ಜುನ ಹಡಪದ. ಇಂದಲ್ಲ, ನಾಳೆ ಮತದಾರರು ಜಾಗೃತರಾದರೇ ಖಂಡಿತ ಆಯ್ಕೆ ಮಾಡುತ್ತಾರೆ ಎನ್ನುವ ವಿಶ್ವಾಸ ಅವರಲ್ಲಿದೆ.