ಸಾರಾಂಶ
ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ
ಸುಮಾರು 48 ಗ್ರಾಮಗಳನ್ನು ಹೊಂದಿರುವ ಶಿರಹಟ್ಟಿ ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆರಂಭವಾಗಿದ್ದು. ದಿನ ಬಳಕೆಯ ನೀರಿಗೆ ತಾಲೂಕಿನ ಜನ ಪರದಾಡುವಂತಾಗಿದೆ.ತಾಲೂಕಿನ ಕುಸ್ಲಾಪೂರ, ಹೊಸಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನ ಪರಿತಪಿಸುತ್ತಿದ್ದಾರೆ. ನಿತ್ಯ ನಾಲ್ಕು ಕಿಮೀ ನಡೆದುಕೊಂಡು ಬಂದು ಕುಡಿಯುವ ನೀರು ತೆಗೆದುಕೊಂಡು ಹೋಗುವ ಅನಿವಾರ್ಯತೆ ಈ ಗ್ರಾಮಗಳ ಜನರಿಗೆ ಎದುರಾಗಿದ್ದು, ಗ್ರಾಮೀಣ ಪ್ರದೇಶದ ಜನರ ಗೋಳು ಅಧಿಕಾರಿಗಳು ಕೇಳುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.
ಈ ಎರಡು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಬಂದಾಗಿ ಸುಮಾರು ತಿಂಗಳು ಕಳೆದರೂ ನಗರ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ತಿರುಗಿ ನೋಡಿಲ್ಲ. ಈ ಗ್ರಾಮಗಳ ಜನರು ಬೋರ್‌ವೆಲ್ ಮೂಲಕ ಪೂರೈಕೆಯಾಗುತ್ತಿರುವ ಜೊಂಡು ಕಟ್ಟಿದ ಮಲೀನ ನೀರನ್ನೇ ಕುಡಿಯುವ ಪರಿಸ್ಥಿತಿ ಎದುರಾಗಿದ್ದು, ವಯೋವೃದ್ಧರು, ಮಕ್ಕಳು, ಬಾಣಂತಿಯರು ಕೆಮ್ಮು, ಗಂಟಲು ನೋವು, ಜ್ವರ ಬಾಧೆಗೆ ಸಿಲುಕಿ ಗೋಳಾಡುತ್ತಿದ್ದು, ಯಾವೊಬ್ಬ ಅಧಿಕಾರಿಯು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ.ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿದ್ದು, ತಾಲೂಕಿನ ಜನತೆಗೆ ಪ್ಲೋರೈಡ್‌ಯುಕ್ತ ನೀರೆ ಗತಿಯಾಗಿದ್ದು, ಸರ್ಕಾರ, ಜಿಲ್ಲಾಡಳಿತ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಷ್ಟೇ ಸ್ಪಷ್ಟ ನಿರ್ದೇಶನ ನೀಡಿದರೂ ಮೇಲಾಧಿಕಾರಿಗಳ ಯಾವುದೇ ಆದೇಶ ಪಾಲನೆಯಾಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಪ್ರದೇಶದ ಜನರು ಕುಡಿಯುವ ನೀರಿಗಾಗಿ ಅಂಗಲಾಚುವಂತಾಗಿದೆ.
ಜೆಜೆಎಂ ಯೋಜನೆ ನೀರು ಬರುತ್ತಿಲ್ಲ: ತಾಲೂಕಿನ ಹಲವು ಗ್ರಾಮಗಳಲ್ಲಿ ಕೈಗೊಂಡ ಜೆಜೆಎಂ ಯೋಜನೆಯಡಿ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಸಾರ್ವಜನಿಕರು ಆರೋಪ ಮಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗುತ್ತಿಗೆದಾರರ ವಿರುದ್ಧ ಯಾವುದೇ ಸೂಕ್ತ ಕ್ರಮಕೈಗೊಂಡಿಲ್ಲ. ಕಳಪೆ ಕಾಮಗಾರಿಗೆ ಅಧಿಕಾರಿಗಳ ಸಹಮತ ಇರುವುದು ಸ್ಪಷ್ಟವಾಗಿದ್ದು, ಕಳಪೆ ಕಾಮಗಾರಿ ಆಗಿರುವ ವಿಷಯ ಕುರಿತು ತಾಪಂ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸುತ್ತಿದೆ.ಸಂಪನ್ಮೂಲ ಬಳಕೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಗ್ರಾಪಂ ಮಟ್ಟದಲ್ಲಿ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ಸಂಬಂಧಿಸಿದ ಸಿಬ್ಬಂದಿಗಳಿಗೆ ಅದರ ಬಗ್ಗೆ ಆಸಕ್ತಿಯೂ ಇಲ್ಲ.ಮಧ್ಯರಾತ್ರಿ ನೀರು ಪೂರೈಕೆ ಮಾಡಿದರೂ ನೀರನ್ನು ಹಿಡಿದಿಟ್ಟುಕೊಳ್ಳುವ ಅವಶ್ಯಕತೆ ಜನರಿಗಿದೆ. ಒಟ್ಟಾರೆ ಜನರೊಂದಿಗೆ ಚೆಲ್ಲಾಟವಂತೂ ಸ್ಪಷ್ಟ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಆಶ್ಚರ್ಯಕರ ಸಂಗತಿ ಎಂದರೆ ಕೆಲವೆಡೆ ನೀರಿಲ್ಲ ಎಂದು ಜನರು ಆಕ್ರೋಶಪಡುತ್ತಿದ್ದರೆ ಕೆಲವೆಡೆ ಸೂಕ್ತ ನಿರ್ವಹಣೆ ಇಲ್ಲದ ಪರಿಣಾಮ ಪೋಲಾಗುತ್ತಿರುವುದು ಕಂಡುಬಂದಿದೆ. ವೃಥಾ ನೀರು ಚರಂಡಿ ಅಥವಾ ರಸ್ತೆ ಪಾಲಾಗುತ್ತಿದ್ದು, ಕಂಡು ಕಾಣದಂತೆ ಸುಮ್ಮನಿರುವ ಸರ್ಕಾರಿ ಸಿಬ್ಬಂದಿಗಳ ಮನಸ್ಥಿತಿ ವಿಷಾದಕರ.ಕಳೆದ ಒಂದು ತಿಂಗಳಿನಿಂದ ನದಿ ನೀರು ಬಂದಾಗಿದ್ದು, ದಿನ ಬಳಕೆ ನೀರಿಗೂ ಜನರು ಗೋಗರೆಯುತ್ತಿದ್ದಾರೆ. ರೈತರ ಹೊಲದಲ್ಲಿಯ ಬೋರ್‌ವೆಲ್‌ಗಳಿಗೆ ಹೋಗಿ ನೀರು ತರುವ ಅನಿವಾರ್ಯತೆ ಎದುರಾಗಿದೆ. ಜಾನುವಾರುಗಳು ಕೂಡ ಕುಡಿಯುವ ನೀರಿಲ್ಲದೆ ಬಿಸಿಲಿನ ತಾಪಕ್ಕೆ ನರಳಾಡುತ್ತಿವೆ. ಅಧಿಕಾರಿಗಳ ಗಮನಕ್ಕೆ ತಂದರೂ ನಮ್ಮ ಗ್ರಾಮಗಳತ್ತ ತಿರುಗಿ ನೋಡುತ್ತಿಲ್ಲ. ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆ ನಡೆಸಿ ನೀರಿನ ಅವ್ಯವಸ್ಥೆ ಆಗದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕೆಂದು ತಾಕೀತು ಮಾಡಿದರೂ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಇದು ಹೀಗೆ ಮುಂದುವರೆದರೆ ಇಲಾಖೆ ಎದುರು ಖಾಲಿ ಕೊಡ ಹಿಡಿದುಕೊಂಡು ಹೋರಾಟ ಮಾಡಲಾಗುವುದು ಎಂದು
ಕಡಕೋಳ ಗ್ರಾಪಂ ಮಾಜಿ ಸದಸ್ಯ ತೋಟಪ್ಪ ಸೊನ್ನದ ಹೇಳಿದರು.ತಾಲೂಕಿನ ಕುಸ್ಲಾಪೂರ ಗ್ರಾಮದ ಜನ ನಿತ್ಯ ಶುದ್ಧ ಕುಡಿಯುವ ನೀರಿಗಾಗಿ ಮೂರು ಕಿಮೀ ನಡೆದು ಕಡಕೋಳ ಗ್ರಾಮಕ್ಕೆ ಹೋಗುತ್ತಿದ್ದು, ಗ್ರಾಮದಲ್ಲಿದ್ದ ಶುದ್ಧ ನೀರಿನ ಘಟಕ ಬಂದಾಗಿ ಸುಮಾರು ತಿಂಗಳು ಕಳೆದರೂ ಯಾವೊಬ್ಬ ಅಧಿಕಾರಿಯು ತಿರುಗಿ ನೋಡಿಲ್ಲ. ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ. ಇದೇ ವ್ಯವಸ್ಥೆ ಮುಂದುವರೆದರೆ ಜನರು ತೀವ್ರ ತೊಂದರೆ ಅನುಭವಿಸುವಂತಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತುರ್ತು ಶುದ್ಧ ನೀರಿನ ಘಟಕ ಪ್ರಾರಂಭ ಮಾಡಬೇಕು ಕುಸ್ಲಾಪೂರ ಮುಖಂಡ ಮಲಕಾಜಪ್ಪ ಅಂಗಡಿ ಹೇಳಿದರು.