- ಶೇ.50ರಷ್ಟು ಫಸಲು ಕಳೆದುಕೊಳ್ಳುವ ಭೀತಿಯಲ್ಲಿ ಕಾಫಿ ಬೆಳೆಗಾರರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ವಾರ ಸುರಿದ ಆಲಿಕಲ್ಲು ಸಹಿತ ಧಾರಾಕಾರ ಮಳೆ ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಜಿಲ್ಲೆಯ ಯಾವ ಭಾಗದಲ್ಲಿ ದೊಡ್ಡ ಮಟ್ಟದ ಆಲಿಕಲ್ಲು ಮಳೆಯಾಗಿದೆಯೋ ಆ ಭಾಗದಲ್ಲಿ ಕಾಫಿ ಹೂವು ಆಗುವ ಮೊದಲೇ ಮೊಗ್ಗುಗಳು ಉದುರಿ ಹೋಗಿವೆ. ಹೀಗಾಗಿ ಶೇ.50ರಷ್ಟು ಫಸಲು ಕಳೆದುಕೊಳ್ಳುವ ಭೀತಿಯಲ್ಲಿ ಕಾಫಿ ಬೆಳೆಗಾರರಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಉತ್ತಮ ಬಳೆ ಬಂದರೆ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಮಾರ್ಚ್ ವೇಳೆಗೆ ಬರುವ ಮಳೆಯಿಂದ ಕಾಫಿ ಹೂವಾಗಿ ಉತ್ತಮ ಫಸಲಿನ ನಿರೀಕ್ಷೆ ಮೂಡುತ್ತದೆ. ಈ ಬಾರಿ ಬೆಳೆಗಾರರು ಅಂದುಕೊಂಡಂತೆ ಮಾರ್ಚ್ ಅವಧಿಯಲ್ಲಿಯೇ ಉತ್ತಮ ಮಳೆಯಾಗಿದೆ. ಆದರೆ ಮಳೆಯೊಂದಿಗೆ ಧಾರಾಕಾರವಾಗಿ ದೊಡ್ಡಮಟ್ಟದಲ್ಲಿ ಆಲಿಕಲ್ಲು ಗಳು ಸುರಿದ ಪರಿಣಾಮ ಮೂಡಿಗೆರೆ ಆಲ್ದೂರು, ಕಳಸ, ಬಾಳೆಹೊನ್ನೂರು, ಖಾಂಡ್ಯ, ಕಡಬಗೆರೆ ಭಾಗದಲ್ಲಿ ಕಾಫಿ ಬೆಳೆಗೆ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.ಮಾರ್ಚ್ ವೇಳೆಗಾಗಲೇ ಕಾಫಿ ಗಿಡಗಳಲ್ಲಿ ಮೊಗ್ಗು ಕಾಣಿಸಿಕೊಳ್ಳುತ್ತದೆ. ಈ ವೇಳೆ ಮಳೆ ಬಂದರೆ ಎಲ್ಲ ಮೊಗ್ಗು ಹೂವಾಗಿ ಇಡೀ ಕಾಫಿ ತೋಟವೇ ಬಿಳಿಯಾಗಿ ಕಾಣುತ್ತದೆ. ಆದರೆ ಈ ವರ್ಷ ಮಾತ್ರ ಮಳೆಯೊಂದಿಗೆ ದೊಡ್ಡ ದೊಡ್ಡ ಗಾತ್ರದ ಆಲಿಕಲ್ಲುಗಳು ಸುರಿದ ಪರಿಣಾಮ ಮೊಗ್ಗುಗಳು ಹಾಗೂ ಕಾಫಿ ಗಿಡದ ಎಲೆಗಳು ಸಹ ಉದುರಿಹೋಗಿವೆ. ಮಳೆ ಆರಂಭಗೊಂಡಾಗ ಖುಷಿ ಪಟ್ಟಿದ್ದ ಬೆಳೆಗಾರರು ಯಾವಾಗ ಆಲಿಕಲ್ಲುಗಳು ಬೀಳಲಾರಂಭಿಸಿದವೋ ಆಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದು ಹೊರತುಪಡಿಸಿ ಬೇರೇನು ಮಾಡಲು ಸಾಧ್ಯವಿಲ್ಲದಂತಾಗಿದೆ.
ಕೇವಲ ಒಂದು ದಿನ ಆಲಿಕಲ್ಲು ಮಳೆ ಬಂದು ಹೋಗಿದ್ದರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತಿರಲಿಲ್ಲ. ಆದರೆ ಎರಡು ಮೂರು ದಿನ ದೊಡ್ಡ ಮಟ್ಟದಲ್ಲಿ ಹಾಲಿ ಕಲ್ಲುಗಳು ಸುರಿದಿರುವುದರಿಂದ ಕಾಫಿ ಮೊಗ್ಗುಗಳು ಶೇ. 50ರಷ್ಟು ಉದುರಿ ಹೋಗುವೆ ಎನ್ನುತ್ತಿದ್ದಾರೆ ಕಾಫಿ ಬೆಳೆಗಾರರು.- ಬಾಕ್ಸ್....
ತೋಟದ ಕೆಲಸಗಳು ಸ್ತಬ್ಧ
ಆಲಿಕಲ್ಲು ಮಳೆಯಾದ ಪ್ರದೇಶದಲ್ಲಿ ಕಾಫಿ ಬೆಳೆಗೆ ಹಾನಿ ಸಂಭವಿಸಿದ್ದರೆ, ಕೇವಲ ಉತ್ತಮ ಮಳೆಯಾದ ಪ್ರದೇಶದ ಬೆಳೆ ಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಮಳೆಯಾದ ಒಂದು ವಾರದ ಒಳಗೆ ಕಾಫಿ ಹೂವು ಬಿಡಲು ಆರಂಭಿಸುತ್ತದೆ. ಈ ಅವಧಿಯಲ್ಲಿ ಕಾಫಿ ತೋಟದಲ್ಲಿ ಯಾವುದೇ ಕೆಲಸ ಮಾಡಿದಲ್ಲಿ ಕಾಫಿ ಹೂವುಗಳು ಉದುರುವ ಸಾಧ್ಯತೆ ಇರುವುದರಿಂದ ಉತ್ತಮ ಮಳೆಯಾದ ಪ್ರದೇಶದ ಕಾಫಿ ಬೆಳೆಗಾರರು ತಮ್ಮ ತೋಟದ ಕೆಲಸಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.ಕಾಫಿ ಕೊಯ್ಲು ಮುಗಿದ ಬಳಿಕ ತೋಟಗಳಲ್ಲಿ ಮರಗಸಿ ಮಾಡಲಾಗುತ್ತದೆ. ಫೆಬ್ರವರಿ ಮಧ್ಯಂತರದಿಂದ ಮಾರ್ಚ್ ಅವಧಿಯಲ್ಲಿ ತೋಟಗಳಲ್ಲಿ ಮರಗಸಿ ಸಾಮಾನ್ಯ. ಆದರೆ ಇದೀಗ ಉತ್ತಮ ಮಳೆಯಾಗಿರುವುದರಿಂದ ಬೆಳೆಗಾರರು ಮರಗಸಿ ಕಾರ್ಯ ಸ್ಥಗಿತಗೊಳಿಸಿದ್ದಾರೆ.
ಫೋಟೋ: (ಕಾಫಿ ತೋಟದ ಸಂಗ್ರಹ ಚಿತ್ರ ಸ್ಟೇಟ್ ಪೋಟೋಸ್ ನಲ್ಲಿದೆ)