ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ದಿನದಿಂದ ದಿನಕ್ಕೆ ಏರುತ್ತಿದ್ದ ತಾಪಮಾನದಿಂದ ಕಂಗೆಟ್ಟಿದ್ದ ಬೆಳ್ತಂಗಡಿ ತಾಲೂಕಿನ ಜನತೆಗೆ ಬುಧವಾರ ಸಂಜೆ ಸುರಿದ ದಿಢೀರ್ ಮಳೆ ಭಾರೀ ಸಮಾಧಾನ ತಂದಿದೆ. ವಾತಾವರಣ ತಂಪಾಗಿದೆ. ಬೀಸಿದ ಗಾಳಿಗೆ ಸುಮಾರು 30 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತಾಲೂಕಿನ ವಿವಿಧೆಡೆ ಮುರಿದುಬಿದ್ದಿವೆ.ಸಂಜೆ ಸುಮಾರು 5.30ರಿಂದ 6.30ರ ತನಕ ಮಳೆ ಗುಡುಗು-ಸಿಡಿಲು, ಗಾಳಿ ಸಹಿತ ಸುರಿಯತೊಡಗಿತ್ತು. ತಾಲೂಕಿನ ಶಿಶಿಲ, ಅರಸಿನಮಕ್ಕಿ, ದರ್ಬೆತಡ್ಕ, ಬಂಡಿಹೊಳೆ, ಧರ್ಮಸ್ಥಳ, ಮುಂಡಾಜೆ, ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಬಳಂಜ, ಅಳದಂಗಡಿ, ಫಂಡಿಜೆ, ನಾರಾವಿ, ವೇಣೂರು, ಗೇರುಕಟ್ಟೆ, ಮಡಂತ್ಯಾರು ಪರಿಸರದಲ್ಲಿ ಉತ್ತಮ ಮಳೆ ಸುರಿದಿದೆ. ಉಜಿರೆ, ಮುಂಡಾಜೆ, ಕಕ್ಕಿಂಜೆ, ನಡ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಕೊಯ್ಯೂರು, ಮಲೆಬೆಟ್ಟು, ಚಾರ್ಮಾಡಿ, ಅರಳಿ, ಸಕ್ಕರೆಬೆಟ್ಟು, ಕಾಶಿಬೆಟ್ಟು ಪ್ರದೇಶದಲ್ಲಿ ವಿದ್ಯುತ್ ಕಂಬಗಳು ಧರಾಶಾಯಿಯಾಗಿರುವುದು ಕಂಡುಬಂದಿದೆ. ಗ್ರಾಮೀಣ ಭಾಗಗಳಲ್ಲಿನ ರಸ್ತೆಗಳ ಮೇಲೆ ಮರಗಳ ಗೆಲ್ಲುಗಳು ಬಿದ್ದಿವೆ. ಮಲೆಬೆಟ್ಟು, ಕೊಯ್ಯೂರು ಪ್ರದೇಶದಲ್ಲಿ ವಿಪರೀತ ಗಾಳಿ ಬೀಸಿದೆ. ಧರ್ಮಸ್ಥಳ, ಬೆಳ್ತಂಗಡಿ, ಮುಂಡಾಜೆಯಲ್ಲಿ ರಾತ್ರಿ 8 ಗಂಟೆಯ ಬಳಿಕ ಮತ್ತೆ ಮಳೆ ಸುರಿಯತೊಡಗಿತ್ತು.ಗಾಳಿ-ಮಳೆ: ವಿಮಾನ ಪಥ ಬದಲುಮಂಗಳೂರು: ಕಡಲ ನಗರಿ ಮಂಗಳೂರಿನಲ್ಲಿ ಭಾರೀ ಗಾಳಿ-ಮಳೆ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಮಂಗಳೂರಿಗೆ ಆಗಮಿಸುವ ವಿಮಾನಗಳ ಪಥ ಬದಲಾಯಿಸಲಾಗಿದೆ.ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಹಾಗೂ ಇಂಡಿಗೋ ವಿಮಾನವನ್ನು ವಾಪಸ್ ಬೆಂಗಳೂರಿಗೆ ಕಳುಹಿಸಲಾಗಿದೆ. ಹೈದರಾಬಾದ್ ನಿಂದ ಮಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವನ್ನು ಕಣ್ಣೂರಿಗೆ ಕಳುಹಿಸಲಾಗಿದೆ ಎಂದು ವಿಮಾನ ನಿಲ್ದಾಣ ಮೂಲಗಳು ತಿಳಿಸಿವೆ. ಮಂಗಳೂರು ವಿಮಾನ ನಿಲ್ದಾಣದ ಪರಿಸರ ಸೇರಿದಂತೆ ನಗರದಾದ್ಯಂತ ಬುಧವಾರ ಸಂಜೆಯಿಂದ ಗುಡುಗು ಸಿಡಿಲಿನ ಭಾರೀ ಗಾಳಿ-ಮಳೆಯಾಗಿದೆ.