ಮಂಗಳೂರು: ವೈದ್ಯರು ಮತ್ತು ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು ವಿವಿಧ ವೈದ್ಯಕೀಯ ಮತ್ತು ಶೈಕ್ಷಣಿಕ ಕಾರ್ಯಾಗಾರಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ ನೂತನ ಆವಿಷ್ಕಾರ ಮತ್ತು ನೂತನ ಬೆಳವಣಿಗೆಗಳಿಗೆ ಸ್ಪಂದಿಸಿ ತಮ್ಮ ಜ್ಞಾನವನ್ನು ವೃದ್ಧಿಸಿ ರೋಗಿಗಳ ನಿರೀಕ್ಷಿತ ಮಟ್ಟಕ್ಕೆ ಸ್ಪಂದಿಸಿ, ವೃತ್ತಿಯಲ್ಲಿ ಯಶಸ್ಸು ಸಾಧಿಸಿ ಜನಮನ್ನಣೆಗೆ ಪಾತ್ರರಾಗಬೇಕು ಎಂದು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಡಾ.ಹಾಜಿ ಯು.ಕೆ.ಮೋನು ಹೇಳಿದರು.

ಅವರು ಕಣಚೂರು ವೈದ್ಯಕೀಯ ಶಿಕ್ಷಣ ಮಹಾವಿದ್ಯಾಲಯದ ಮಕ್ಕಳ ಶಾಸ್ತ್ರ ವಿಭಾಗ ಹಾಗೂ ಚರ್ಮರೋಗ ಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಅಂಗವಾಗಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ನಡೆದ ಒಂದು ದಿನದ ‘ಮಕ್ಕಳಲ್ಲಿ ಕಾಣಿಸುವ ಚರ್ಮರೋಗಗಳು ಮತ್ತು ಚಿಕಿತ್ಸೆಗಳ’ ಬಗ್ಗೆ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವೈದ್ಯರು ರೋಗಿಗಳಿಗೆ ನಗುಮುಖದ ಸೇವೆ ನೀಡಿ ಅವರ ಪ್ರೀತಿ, ವಿಶ್ವಾಸಕ್ಕೆ ಸ್ಪಂದಿಸಬೇಕು. ಬಡವರ ಸೇವೆ, ದೇವರ ಸೇವೆಗೆ ಸಮಾನ ಎಂದರು.

ಕಣಚೂರು ಆರೋಗ್ಯ ವಿಜ್ಞಾನ ಸಲಹಾ ಸಮಿತಿ ಸದಸ್ಯ ಡಾ.ಎಂ.ವಿ.ಪ್ರಭು ಮಾತನಾಡಿ, ಈ ಕಾರ್ಯಾಗಾರದಲ್ಲಿ ರಾಜ್ಯ ಮಟ್ಟದ ವಿವಿಧ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಕ್ಕಳಲ್ಲಿ ಕಂಡು ಬರುವ ಚರ್ಮರೋಗದ ಕಾರಣಗಳು, ಲಕ್ಷಣಗಳು ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಹಾಗೂ ಇತ್ತೀಚಿಗಿನ ಪ್ರಗತಿ, ಬೆಳವಣಿಗೆಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಬಗ್ಗೆ ಅತಿಥಿ ಉಪನ್ಯಾಸ ನೀಡುವರು ಎಂದು ಮಾಹಿತಿ ನೀಡಿದರು.

ಮಕ್ಕಳ ಶಾಸ್ತ್ರ ವಿಭಾಗದ ಹಿರಿಯ ಪ್ರಾದ್ಯಾಪಕ ಡಾ.ಶಂಶಾದ್ ಖಾನ್‌ ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವ ತಿಳಿಸಿದರು.


ಡಾ. ಸ್ಪಂದನಾ ಹೆಗ್ಡೆ, ಡಾ.ಸಹನಾ ಶ್ರೀನಿವಾಸ್, ಡಾ.ನಿಖಿತಾ ಸೋನ್ಸ್, ಡಾ.ಸ್ಮಿತಾ ಪ್ರಭು, ಡಾ.ಸಹನಾ ಶ್ರೀಹರಿ, ಡಾ.ನೂರುಲ್ಲಾ ಮಕ್ಕಳ ಚರ್ಮ ಆರೋಗ್ಯ ರಕ್ಷಣೆ ಬಗ್ಗೆ ಉಪನ್ಯಾಸ ನೀಡಿದರು.

ಚರ್ಮರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಶ್ರುತಕೀರ್ತಿ ಶೆಣೈ ಇದ್ದರು.

ಸಂಘಟನಾ ಸಮಿತಿ ಅಧ್ಯಕ್ಷ ಡಾ.ಒನೀಲ್ ಫರ್ನಾಂಡಿಸ್‌ ಸ್ವಾಗತಿಸಿದರು. ಘಟನಾ ಕಾರ್ಯದರ್ಶಿ ಡಾ.ಚೇತನ್ ತಾಂಡೆಲ್ ವಂದಿಸಿದರು. ಡಾ.ಪ್ರೀತಿ ನಿರೂಪಿಸಿದರು. ಸುಮಾರು ೧೫೦ ವೈದ್ಯಕೀಯ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.