ಸಾರಾಂಶ
ಸರ್ಕಾರಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಮೈಸೂರು ಮತ್ತು ಹಲಗೂರು ಲಯನ್ಸ್ ಕ್ಲಬ್ ಸಂಸ್ಥೆ ಆಶ್ರಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ತಪಾಸಣೆಗೊಳಗಾಗಿ ಔಷಧಿ ಪಡೆದುಕೊಂಡರು.
ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಮೈಸೂರು ಮತ್ತು ಹಲಗೂರು ಲಯನ್ಸ್ ಕ್ಲಬ್ ಸಂಸ್ಥೆ ಆಶ್ರಯದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ತಪಾಸಣೆಗೊಳಗಾಗಿ ಔಷಧಿ ಪಡೆದುಕೊಂಡರು.ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿದ ಲಯನ್ಸ್ ಸಂಸ್ಥೆ ಅಧ್ಯಕ್ಷ ಎನ್.ಕೆ.ಕುಮಾರ್ ಮಾತನಾಡಿ, ಶಿಬಿರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು. ಉಚಿತವಾಗಿ ಔಷಧಿ ಪಡೆದು ಸದ್ಬಳಕೆ ಮಾಡಿಕೊಂಡಿದ್ದಾರೆ ಎಂದರು.ಶಿಬಿರದಲ್ಲಿ ಆಯುರ್ವೇದ ತಜ್ಞರಾದ ಡಾ.ಆರ್.ಸಿ.ಮೈತ್ರೇಯಿ ಮತ್ತು ವೈದ್ಯರ ತಂಡದಿಂದ ದಮ್ಮು, ಉಸಿರಾಟ ತೊಂದರೆ, ನರಗಳ ದೌರ್ಬಲ್ಯ, ಗಂಟು, ಸಂಧಿ ನೋವು, ಬಾಹುಗಳು, ನವೆ, ತುರಿಕೆ ಹಾಗೂ ಇತರೆ ಚರ್ಮ ಸಮಸ್ಯೆಗಳು, ರಕ್ತ ಹೀನತೆ, ನಿದ್ರಾ ಹೀನತೆ, ಮಕ್ಕಳ ಜ್ಞಾಪಕ ಶಕ್ತಿ ಮತ್ತು ರೋಗ ನಿರೋಧಕ ವೃದ್ದಿ ಸೇರಿದಂತೆ ವಿವಿಧ ಬಗೆಯ ಸಮಸ್ಯೆಗಳಿಗೆ ತಪಾಸಣೆ ಮತ್ತು ಆಯುರ್ವೇದ ಔಷಧಿ ಉಚಿತವಾಗಿ ನೀಡಲಾಯಿತು ಎಂದರು.
ಇದೇ ವೇಳೆ ಸಂಸ್ಥೆಯಿಂದ ಡಾ.ಆರ್.ಸಿ.ಮೈತ್ರೇಯಿ ಮತ್ತು ತಂಡವನ್ನು ಅಭಿನಂದಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ.ಮೈತ್ರೇಯಿ, ಆರೋಗ್ಯಕ್ಕಾಗಿ ನೀವು ಮನೆಯಲ್ಲೇ ಔಷಧಿ ತಯಾರಿ ಮಾಡಿಕೊಳ್ಳಬಹುದು. ದಿನನಿತ್ಯ ವ್ಯಾಯಾಮ, ವಾಕಿಂಗ್ ಮಾಡುವುದರಿಂದ ಹಾಗೂ ಮಿತಿಯಾದ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಹೊಂದಬಹುದು ಎಂದರು.ಶಿಬಿರದಲ್ಲಿ 120ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ನೀಡಿದ್ದೇವೆ. ಆಸ್ಪತ್ರೆಯಿಂದ ಉಚಿತವಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಸರ್ಕಾರದಿಂದ ಬರುವ ಔಷಧಿಗಳನ್ನು ನೀಡುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಅನ್ನಪೂರ್ಣ, ಡಿ.ಎಲ್.ಮಾದೇಗೌಡ, ಖಜಾಂಚಿ ಕೆ. ಶಿವರಾಜು, ಡಾ.ಶಂಷುದ್ದೀನ್, ಸದಸ್ಯರಾದ ಎಚ್. ವಿ. ರಾಜು, ಗುರುಸಿದ್ದು, ಕೃಷ್ಣ, ಪ್ರವೀಣ್, ಶ್ರೀನಿವಾಸ, ರಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.