ಸಾರಾಂಶ
ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದ ಭಕ್ತರು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಶ್ರೀ ವೀರಭದ್ರೇಶ್ವರ ಮಹಾರಾಜ್ ಕಿ ಜೈ ಎನ್ನುವ ಘೋಷ ವಾಕ್ಯಗಳು ಜಾತ್ರೆಯ ಸಂಭ್ರಮ ಹೆಚ್ಚಿಸಿದವು.
ಕನ್ನಡಪ್ರಭ ವಾರ್ತೆ ವಾಡಿ
ಹಲಕಟ್ಟಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವ ಸಹಸ್ರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಬುಧವಾರ ಸಂಜೆ ಸಂಭ್ರಮ ಸಡಗರದಿಂದ ನೆರವೇರಿತು.ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ರಥಕ್ಕೆ ವಿವಿಧ ಧಾರ್ಮಿಕ ಪೂಜಾ ಪುನಸ್ಕಾರಗಳು ನೇರವೇರಿಸಿದ ಬಳಿಕ ರಥ ಎಳೆದು ಭಕ್ತರು ಪುನೀತರಾದರು. ಪುರವಂತರ ಮತ್ತು ಚೌಡಮ್ಮನ ಆಡುವಿಕೆ, ನಂದಿ ಕೋಲು ಕುಣಿತ, ಅಂಬಲಿ ಬಂಡಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಶ್ರೀ ವೀರಭದ್ರೇಶ್ವರ ಮಹಾರಾಜ್ ಕಿ ಜೈ ಎನ್ನುವ ಘೋಷ ವಾಕ್ಯಗಳು ಜಾತ್ರೆಯ ಸಂಭ್ರಮ ಹೆಚ್ಚಿಸಿದವು.
ಭಕ್ತರು ರಥಕ್ಕೆ ಉತ್ತತ್ತಿ, ಬಾಳೆ ಹಣ್ಣು, ಬಾರೆ ಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಮಹಾರಾಷ್ಟ್ರ, ಹೈದರಾಬಾದ್, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳಿಂದ ಆಗಮಿಸಿದ ಸಾವಿರಾರು ಭಕ್ತರು ರಥೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ವೀರಭದ್ರೇಶ್ವರ ದೇವರ ಕೃಪೆಗೆ ಪಾತ್ರರಾದರು.ರಥೋತ್ಸವದ ಮುಂದೆ ಭಕ್ತಿ ಸೇವೆಗೈದ ಭಕ್ತರು ಬಣ್ಣ ಬಣ್ಣದ ಸಿಡಿ ಮದ್ದಿನ ಪಟಾಕಿ ಸುಡುವ ಮೂಲಕ ಬಾನಂಗಳದ ಚಿತ್ತಾರದ ಕಲರವ ಹೆಚ್ಚಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಬೆನಕೊಂಡಿ ಪರಿವಾರದಿಂದ ಸಾವಿರಾರು ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತಿ ಸೇವೆ ಮಾಡಿದರು. ಸಿದ್ಧರಾಮ ಶಿವಾಚಾರ್ಯ ಮಹಾಸ್ವಾಮಿಗಳು ಮರುಳಾರಾಧ್ಯ ಸಂಸ್ಥಾನ ಹಿರೇಮಠ ಕಲಕೇರಿ ಹಾಗೂ ಪ್ರಶಾಂತ ದೇವರು ಸಾರಂಗಮಠ ಡೊಣ್ಣರು ರಥಕ್ಕೆ ಸಂಪ್ರದಾಯದಂತೆ ಪೂಜೆ ನೆರವೇರಿಸಿದರು. ಹಲಕರ್ಟಿ ಗ್ರಾಪಂ ಅಧ್ಯಕ್ಷ ರಾಕೇಶ್ ಸಿಂದೆ, ಜಗದೀಶ್ ಸಿಂದೆ, ದೇವಸ್ಥಾನ ಕಮಿಟಿ ಕಾರ್ಯದರ್ಶಿ ಚಂದ್ರಕಾಂತ ಮೆಲ್ಮನಿ, ಊರಿನ ಜನರು ರಥೋತ್ಸವಕ್ಕೆ ಮೆರುಗು ತಂದರು.ಸಯ್ಯದ್ ಇಂಥಿಯಾಜ್ ಪಟೇಲ್, ಫೈಝಲ್ ಪಟೇಲ್, ನಾಸಿರ್ ಹುಸೇನ್, ಅಲ್ತಾಫ್ ಪಟೇಲ್ ಸೇರಿದಂತೆ ಹಲವು ಮುಸ್ಲಿಂ ಪ್ರಮುಖರು ಸೇವೆ ಸಲ್ಲಿಸಿದರು.
ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ, ವಾಡಿ ಠಾಣೆಯ ಪಿಎಸ್ಐ ತಿರುಮಲೇಶ್ ಕೆ., ಚಿತ್ತಾಪುರ ಪಿಎಸ್‌ಐ ಶ್ರೀಶೈಲ್ ಅಂಬಾಟಿ ಬಂದೋಬಸ್ತ್ ಒದಗಿಸಿದ್ದರು. ಶ್ರೀವೀರಭದ್ರೇಶ್ವರ ದೇವಸ್ಥಾನ ಜಾರಿಟೇಬಲ್ ಟ್ರಸ್ಟ್ ವತಿಯಿಂದ ಜಾತ್ರೆಗೆ ಬಂದ ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಆಯೋಜಿಸಲಾಗಿತ್ತು.