ಹಾಲಕೆರೆ ಅನ್ನದಾನೀಶ್ವರ ಮಠ ಶೈಕ್ಷಣಿಕ ಕ್ರಾಂತಿ: ಮಹಾಂತಲಿಂಗ ಶಿವಾಚಾರ್ಯರು

| Published : Jan 14 2024, 01:33 AM IST / Updated: Jan 14 2024, 05:36 PM IST

ಹಾಲಕೆರೆ ಅನ್ನದಾನೀಶ್ವರ ಮಠ ಶೈಕ್ಷಣಿಕ ಕ್ರಾಂತಿ: ಮಹಾಂತಲಿಂಗ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ಅಕ್ಷರ ಎಂಬುದು ಅಮೃತಕ್ಕೆ ಸಮಾನ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ನಾಡಿನ ಜನತೆಗೆ ಒದಗಿಸುತ್ತಿರುವ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳ ದಿವ್ಯದೃಷ್ಟಿ ನಿಜಕ್ಕೂ ಸ್ತುತ್ಯಾರ್ಹ ಎಂದು ನಂದವಾಡಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು ಹೇಳಿದರು.

ನರೇಗಲ್ಲ: ಅಕ್ಷರ ಎಂಬುದು ಅಮೃತಕ್ಕೆ ಸಮಾನ ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಈ ನಾಡಿನ ಜನತೆಗೆ ಒದಗಿಸುತ್ತಿರುವ ಶ್ರೀ ಮುಪ್ಪಿನ ಬಸವಲಿಂಗ ಸ್ವಾಮಿಗಳ ದಿವ್ಯದೃಷ್ಟಿ ನಿಜಕ್ಕೂ ಸ್ತುತ್ಯಾರ್ಹ ಎಂದು ನಂದವಾಡಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು ಹೇಳಿದರು.

ಅವರು ಸಮೀಪದ ಹಾಲಕೆರೆ ಅನ್ನದಾನೇಶ್ವರ ಮಠದಲ್ಲಿ ಜಾತ್ರಾಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಕ್ಷರ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಾಲಕೆರೆ ಮಠವು ಶತಶತಮಾನಗಳ ಇತಿಹಾಸಹೊಂದಿದ್ದು, ಪ್ರತಿ ಹಂತದಲ್ಲೂ ಭಕ್ತರ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಾ ಅನ್ನ ಹಾಗೂ ಅಕ್ಷರ ದಾಸೋಹವನ್ನು ನಿರಂತರವಾಗಿ ಕೈಗೊಳ್ಳುತ್ತಾ ಬಂದಿದೆ. ಪ್ರತಿವರ್ಷ ರೈತರಿಗೆ ಸಂಬಂಧಿಸಿದ ಸಾವಯವ ಕೃಷಿ, ಮಹಿಳಾ ತಾಯಂದಿರಿಗೆ ಸ್ಥಾನಮಾನ ಕಲ್ಪಿಸಲು ಬೆಳ್ಳಿರಥ ನಿರ್ಮಾಣ, ೫ ಸಾವಿರ ತಾಯಂದಿರಿಗೆ ಉಡಿತುಂಬುವ ಕಾರ್ಯಕ್ರಮ, ರೈತರಲ್ಲಿ ಸಾವಯವ ಕೃಷಿ ಅಳವಡಿಸಿಕೊಳ್ಳಲು ೨೬೧ ಚಕ್ಕಡಿಗಳ ಮೂಲಕ ಉಳವಿಯಾತ್ರೆ ಹೀಗೆ ಹತ್ತು ಹಲವಾರು ಯೋಜನೆಗಳನ್ನುವ ಕೈಗೊಳ್ಳುವ ಮೂಲಕ ಈ ನಾಡಿನ ಜನತೆಗೆ ಸಂಸ್ಕಾರ, ಶಿಕ್ಷಣ, ಧಾರ್ಮಿಕ ಸಾಮಾಜಿಕ ಹಾಗೂ ಸದೃಢ ಪ್ರಜೆಯಾಗಲು ಅಭಿನವ ಅನ್ನದಾನ ಸ್ವಾಮಿಗಳು ತಮ್ಮ ಜೀವಿತಾವಧಿಯವರೆಗೂ ಕೈಗೊಳ್ಳುತ್ತಾ ಶ್ರೀಮಠದ ಭಕ್ತರ ,ಬಡವರ ದೀನದಲಿತರ ಉದ್ಧಾರಕ್ಕಾಗಿ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡವರು ಎಂದು ತಿಳಿಸಿದರು.

ಶ್ರೀಮಠ ಮೊದಲಿನಿಂದಲೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದ್ದು, ಈಗಿನ ಮುಪ್ಪಿನ ಬಸವಲಿಂಗ ಸ್ವಾಮಿಗಳ ಕಲ್ಪನೆಯಂತೆ ಅನ್ನ ಹಾಗೂ ಅಕ್ಷರ ಜ್ನಾನವನ್ನು ಹೆಚ್ಚಿಸುವ ಮಹಾತ್ವಾಕಾಂಕ್ಷಿ ಕಾರ್ಯಕ್ರಮವನ್ನು ಕೈಗೊಂಡಿದ್ದು ಇಂದಿನ ಯುವಕರಿಗೆ ಶೈಕ್ಷಣಿಕವಾಗಿ ತಲ್ಲೀನತೆಗೆ ಒಳಪಡುವಂತೆ ಮಾಡಲು ಹಮ್ಮಿಕೊಂಡ ಉತ್ಕೃಷ್ಟ ಕಾರ್ಯಕ್ರಮ ಅಕ್ಷರ-೨೦೨೪ ಎಂದರು.

ರಾಜ್ಯಸಭಾ ಮಾಜಿ ಸದಸ್ಯ ಬಸವರಾಜ ಪಾಟೀಲ ಮಾತನಾಡಿ, ಜೀವನಕ್ಕೆ ಅವಶ್ಯಕವಿರುವ ಜ್ಞಾನಕ್ಕಾಗಿ ಓದಬೇಕೆ ಹೊರತು ನೌಕರಿಗಾಗಿ ಎಂದಿಗೂ ಓದಬೇಡಿ. ಮೊದಲು ನಿನ್ನನ್ನು ನೀನು ತಿಳಿದುಕೊ. ನೌಕರಿಗಾಗಿ ಎಂದಿಗೂ ಜೋತು ಬೀಳಬೇಡ. ಕೊಡುವವನಾಗು ಹೊರತಾಗಿ ಬೇಡುವವನಾಗಬೇಡ ಎಂದರು.

ಮಾಜಿ ರಾಷ್ಟ್ರಪತಿ ಅಬ್ದುಲ ಕಲಾಂ ಹೇಳುವಂತೆ ಕನಸುಗಳು ದೊಡ್ಡದಾಗಿದ್ದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ. ಮನುಷ್ಯರಾಗಿ ನಿಮ್ಮಲ್ಲಿ ನೀವು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳದೆ ಇದ್ದರೆ ಜೀವನಕ್ಕೆ ಯಾವುದೇ ಬೆಲೆ ಇಲ್ಲ. ನಿಮ್ಮಲ್ಲಿನ ಉತ್ತಮ ಗುಣಗಳನ್ನು ಜೀವನದುದ್ದಕ್ಕೂ ಮುನ್ನಡೆಸಿಕೊಂಡು ಬನ್ನಿರಿ ಎಂದು ಹೇಳಿದರು.

ಬಾಗಲಕೋಟೆ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಅಕ್ಷರ ಎಂಬುದೇ ಒಂದು ಅದ್ಭುತ ಕಲ್ಪನೆ. ಅದರ ಹೆಸರಿನಲ್ಲಿ ನಡೆದಿರುವ ಈ ಜಾತ್ರೆ ಬಹಳಷ್ಟು ಅರ್ಥಪೂರ್ಣ. ನೀವೆಲ್ಲರೂ ಅಕ್ಷರವನ್ನು ಕಲಿತು ನಿಮ್ಮ ಜೀವನವನ್ನು ಸುಂದರಗೊಳಿಸಿಕೊಳ್ಳಿರಿ ಎಂದರು.

ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ಈ ಹಿಂದೆ ಮಠ ಮಾನ್ಯಗಳು ಶಿಕ್ಷಣ ನೀಡಿ ಗ್ರಾಮೀಣ ಭಾಗದ ಜನರ ಬದುಕನ್ನು ಬೆಳಗಿವೆ. ಅದಕ್ಕಾಗಿ ನಾವೆಲ್ಲರೂ ಮಠಾಧೀಶರಿಗೆ ಎಂದಿಗೂ ಆಭಾರಿಯಾಗಿರಬೇಕೆಂದರು.

ಈ ವೇಳೆ ಮುಪ್ಪಿನ ಬಸವಲಿಂಗ ಸ್ವಾಮಿಗಳು, ಗದಗ ವಿವೇಕಾನಂದಾಶ್ರಮದ ನಿರ್ಭಯಾನಂದ ಮಹಾಸರಸ್ವತಿಗಳು, ವಿಪ ಸದಸ್ಯ ಎಸ್.ವಿ. ಸಂಕನೂರ, ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ನಂದವಾಡಗಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು, ಕರೇಗುಡ್ಡದ ಮಹಾಂತಲಿಂಗ ಶಿವಾಚಾರ್ಯರು, ಅಡವಿ ಅಮರೇಶ್ವರ ಮಠದ ತೋಂಟದಾರ್ಯ ಸ್ವಾಮೀಜಿ, ಹೊಸಪೇಟೆ ಕೆಂಪಿನ ಮಠದ ಚಂದ್ರಶೇಖರ ದೇವರು.

ಹಳಿಂಗಳಿ ಕಮರಿಮಠದ ಶಿವಾನಂದ ದೇವರು, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಶಾಸಕ ಬಸವರಾಜ ರಾಯರಡ್ಡಿ, ಮಾಜಿ ಶಾಸಕ ಅಮರೆಗೌಡ ಬಯ್ಯಾಪೂರ, ರವೀಂದ್ರನಾಥ ದೊಡ್ಡಮೇಟಿ ಹಾಗೂ ಮುಂತಾದವರಿದ್ದರು.

ಎಸ್.ಎ. ಪದವಿ ಮಹಾವಿದ್ಯಾಲಯದ ಪ್ರಾ.ಎಸ್.ಜಿ. ಕೇಶಣ್ಣವರ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಎಫ್.ಎನ್. ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು.