ಸಾರಾಂಶ
ಅಮಾವಾಸ್ಯೆ ಪೂಜೆ । ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವ । ವಿವಿಧ ಸೇವೆ । ಗರ್ಭಗುಡಿ ಸುತ್ತ ವಿಶೇಷ ಹೂಗಳ ಅಲಂಕಾರ
ಕನ್ನಡಪ್ರಭ ವಾರ್ತೆ ಹನೂರುಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಮಾವಾಸ್ಯೆ ಪೂಜೆ, ಹಾಲರುವೆ ಉತ್ಸವ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಾನಿಧ್ಯದಲ್ಲಿ ಧಾರ್ಮಿಕ ಪೂಜಾ ಕಾರ್ಯಗಳಾದ ಮಾದೇಶ್ವರ ಸ್ವಾಮಿಗೆ ಅಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕ, ಎಣ್ಣೆ ಮಜ್ಜನ ಸೇವೆ ಮಹಾಮಂಗಳಾರತಿ ಧಾರ್ಮಿಕವಾಗಿ ನಡೆಯಿತು.ವಿಶೇಷ ಹೂವಿನ ಅಲಂಕಾರ
ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದ ಗರ್ಭಗುಡಿ ದೇವಾಲಯದ ಸುತ್ತಲೂ ವಿಶೇಷ ವಿವಿಧ ಹೂಗಳ ಅಲಂಕಾರ ಮಾಡಲಾಗಿತ್ತು.ಹಾಲರುವೆ ಉತ್ಸವ: ದೀಪಾವಳಿ ಜಾತ್ರೆಯ ವೇಳೆ ಅಮಾವಾಸ್ಯೆ ದಿನದಂದು ಲಕ್ಷಾಂತರ ಭಕ್ತರು ಹಾಲರುವೇ ಉತ್ಸವ ನಡೆಸಲಾಗುತ್ತಿದ್ದು, ಸಾಂಪ್ರದಾಯದಂತೆ ತಲತಲಾಂತರದಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಸ್ಥಳೀಯ ಬೇಡಗಂಪಣರ 10 ರಿಂದ 12 ವರ್ಷದ 101 ಹೆಣ್ಣುಮಕ್ಕಳು ಉಪವಾಸವಿದ್ದು, ಬೆಳ್ಳಂಬೆಳಗ್ಗೆ ಮಲೆ ಮಹದೇಶ್ವರ ಬೆಟ್ಟದಿಂದ 7 ಕಿ.ಮೀ. ದಟ್ಟ ಅರಣ್ಯದ ಕಾಲು ದಾರಿಯಲ್ಲಿ ನಡೆದು ಹಾಲಹಳ್ಳದಲ್ಲಿ ವಾದ್ಯ ಮೇಳದೊಂದಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಮೆರವಣಿಗೆ ಬಂದು ದೇವಾಲಯ ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿ ಆಲದಿಂದ ತಂದಿರುವ ಜಲವನ್ನು ಮಾದಪ್ಪನಿಗೆ ಅಭಿಷೇಕ ಮಾಡುವ ಮೂಲಕ ಹಾಲರವೆ ಉತ್ಸವ ನಡೆಯಿತು.
ಕತ್ತಿ ಪಾವಡ: ಹಾಲರುವೇ ಉತ್ಸವಕ್ಕೂ ಮುನ್ನ ಕತ್ತಿ ಪವಾಡ ನಡೆಯುತ್ತದೆ ಹರಕೆ ಹೊತ್ತ ಭಕ್ತರೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುತ್ತಾರೆ. ಅವರ ಮೇಲೆ ಬೇಡಗಂಪಣ ಅರ್ಚಕರು ನಡೆದುಕೊಂಡು ಹೋಗುತ್ತಾರೆ. ನೋಡುಗರ ಮೈ ಜುಮ್ ಎನ್ನುವ ಹಾಗೆ ಪವಾಡ ನಡೆಯುತ್ತದೆಧಾರ್ಮಿಕ ಉತ್ಸವಗಳು:
ಹರಕೆ ಹೊತ್ತ ಭಕ್ತರಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಚಿನ್ನದ ರಥೋತ್ಸವ ಹಾಗೂ ಬೆಳ್ಳಿ ರಥೋತ್ಸವ ಮತ್ತು ರುದ್ರಾಕ್ಷಿ ಮಂಟಪೋತ್ಸವ ಬಸವ ಹುಲಿ ವಾಹನ ಉತ್ಸವ ಹಾಗೂ ದೂಪದ ಸೇವೆ ಮುಡಿ ಸೇವೆ ಹಲವು ಸೇವೆಗಳೊಂದಿಗೆ ಧಾರ್ಮಿಕವಾಗಿ ಭಕ್ತರು ಉರುಳು ಸೇವೆ ಕೈಗೊಂಡರು.ದೀಪಾವಳಿ ಮಹಾ ರಥೋತ್ಸವ: ದೀಪಾವಳಿ ಮಹಾ ರಥೋತ್ಸವ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಅವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮಹಾ ರಥೋತ್ಸವ ನಡೆಯಲಿದೆ.
ದಾಸೋಹ ವ್ಯವಸ್ಥೆ:ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಟಿ ನರಸೀಪುರ ತಾಲೂಕಿನ ಮಾದೇಗೌಡ ಕುಟುಂಬ ವರ್ಗದವರು ದಾಸೋಹ ವ್ಯವಸ್ಥೆಗೆ 70 ಕ್ವಿಂಟಲ್ ಅಕ್ಕಿಯನ್ನು ನೀಡಿದ್ದು, ಕಳೆದ ಮೂರು ದಿನಗಳಿಂದ 45 ಕ್ವಿಂಟಲ್ ಅಕ್ಕಿ ದಾಸೋಹಕ್ಕಾಗಿ ಬಳಸಿಕೊಳ್ಳಲಾಗಿದೆ. ಬೆಳಗಿನ ಉಪಹಾರ ಭಕ್ತರಿಗಾಗಿ ಬೆಲ್ಲದ ಪಾಯಸ, ತರಕಾರಿ ಬಾತ್ ಮತ್ತು ಸಿಹಿ ಪೊಂಗಲ್, ಬಿಸಿಬೇಳೆ ಬಾತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಧ್ಯಾಹ್ನ ಉಪಾಹಾರಕ್ಕೆ ಅನ್ನ ಸಾಂಬಾರ್, ಪಾಯಸ, ರಸಂ, ಮಜ್ಜಿಗೆ ವಿವಿಧ ಬಗೆಯ ತರಕಾರಿಗಳ ಕೂಟ್ ಸೇರಿದಂತೆ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.
ದೀಪಾವಳಿ ಮಹಾ ರಥೋತ್ಸವ ಬೆಳಿಗ್ಗೆ ಏಳು ಐವತ್ತು ಗಂಟೆಯಿಂದ 9 ಗಂಟೆವರೆಗೆ ನಡೆಯಲಿದೆ. ನಂತರ ಗುರು ಬ್ರಹ್ಮೋತ್ಸವ ಮತ್ತು ಅನ್ನ ಬ್ರಹ್ಮೋತ್ಸವ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಶನಿವಾರ ನಡೆಯುವ ಮಹಾ ರಥೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.ಎಇ ರಘು, ಕಾರ್ಯದರ್ಶಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮಲೆ ಮಹದೇಶ್ವರ ಬೆಟ್ಟ.