ಶಿರಸಿಯಲ್ಲಿ ಇಂದು, ನಾಳೆ ಹಲಸು- ಮಲೆನಾಡು ಮೇಳ

| Published : Jun 29 2024, 12:42 AM IST

ಸಾರಾಂಶ

ಶನಿವಾರ ಬೆಳಗ್ಗೆ ೧೧ ಗಂಟೆಗೆ ಮೇಳವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದಾರೆ. ಹಲಸಿನ ವಿಶೇಷ ಖಾಧ್ಯ ಸ್ಪರ್ಧೆ ಹಾಗೂ ಪ್ರದರ್ಶನದ ಉದ್ಘಾಟನೆಯನ್ನು ನಿಕಟಪೂರ್ವ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೆರವೇರಿಸಲಿದ್ದಾರೆ.

ಶಿರಸಿ: ಉತ್ತರ ಕನ್ನಡ ಸಾವಯುವ ಒಕ್ಕೂಟ, ತೋಟಗಾರಿಕಾ ಇಲಾಖೆ, ಜೀವ ವೈವಿಧ್ಯಮಂಡಳಿ ತಾಲೂಕು ಪಂಚಾಯಿತಿ ಹಾಗೂ ವನಸ್ತ್ರಿ ಸಂಸ್ಥೆಯ ಆಶ್ರಯದಲ್ಲಿ ಜೂ. ೨೯ ಹಾಗೂ ಜೂ. ೩೦ರಂದು ಹಲಸು ಮತ್ತು ಮಲೆನಾಡ ಮೇಳ ನಗರದ ಎಪಿಎಂಸಿ ಆವಾರದಲ್ಲಿನ ಪಿಎಲ್‌ಡಿ ಬ್ಯಾಂಕ್ ಕಟ್ಟಡದಲ್ಲಿರುವ ನೆಲಸಿರಿ ಆರ್ಗ್ಯಾನಿಕ ಹಬ್‌ನಲ್ಲಿ ನಡೆಯಲಿದೆ.ಶನಿವಾರ ಬೆಳಗ್ಗೆ ೧೧ ಗಂಟೆಗೆ ಮೇಳವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದಾರೆ. ಹಲಸಿನ ವಿಶೇಷ ಖಾಧ್ಯ ಸ್ಪರ್ಧೆ ಹಾಗೂ ಪ್ರದರ್ಶನದ ಉದ್ಘಾಟನೆಯನ್ನು ನಿಕಟಪೂರ್ವ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ನೆರವೇರಿಸಲಿದ್ದಾರೆ. ಉತ್ತರಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತೋಟಗಾರಿಕಾ ಇಲಾಖೆ ಶಿರಸಿಯ ಉಪನಿರ್ದೇಶಕ ಬಿ.ಪಿ. ಸತೀಶ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ್ ಹೆಗಡೆ ಹಾಗೂ ವನಸ್ತ್ರಿ ಸಂಸ್ಥೆಯ ಟ್ರಸ್ಟಿ ಶೈಲಜಾ ಗೋರನಮನೆ ಆಗಮಿಸಲಿದ್ದಾರೆ. ವಿಚಾರಸಂಕಿರಣದ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ರಾ ಗ್ರ್ಯಾನ್ಯೂಲಸ್ ಹಾಗೂ ತಂಬುಳಿಮನೆ ಸಂಸ್ಥಾಪಕ ಕಾರ್ತಿಕ ಶ್ರೀಧರ ಆಗಮಿಸಲಿದ್ದಾರೆ.ಮೇಳದ ಎರಡನೇ ದಿನ ಭಾನುವಾರದಂದು ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಬಾಗಲಕೋಟೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಹೆಗಡೆ ಸಮಾರೋಪ ಭಾಷಣ ಮಾಡಲಿದ್ದಾರೆ. ಉತ್ತರಕನ್ನಡ ಸಾವಯವ ಒಕ್ಕೂಟದ ಉಪಾಧ್ಯಕ್ಷ ಡಾ. ವೆಂಕಟೇಶ್ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೆಲ್ಕೋ ಫೌಂಡೇಶನ್ ಪ್ರೋಗ್ರಾಮ್ ಮ್ಯಾನೇಜರ್ ಪ್ರಕಾಶ ಮೇಟಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಲಸಿನ ಖಾದ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆಯೂ ನಡೆಯಲಿದೆ.

ಹಲಸಿನ ಕ್ಯಾಂಟೀನ್!ಎರಡು ದಿನಗಳ ಕಾಲ ನಡೆಯಲಿರುವ ಮೇಳದಲ್ಲಿ ವಿಶೇಷವಾಗಿ ಹಲಸಿನ ಕ್ಯಾಂಟೀನ್ ಪ್ರಮುಖ ಜನಾಕರ್ಷಣೆಯಾಗಿದೆ. ಹಲಸು ಹಾಗೂ ಹಲಸಿನ ಬೀಜದ ಖಾದ್ಯ ಸ್ಪರ್ಧೆ ಹಾಗೂ ಹಲಸಿನ ವಿವಿಧ ತಿಂಡಿಗಳ ಪ್ರದರ್ಶನ ಮತ್ತು ಮಾರಾಟ, ಮಲೆನಾಡಿನ ವಿವಿಧ ತಳಿಯ ಗಿಡಗಳ ಮಾರಾಟ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ನಡೆಯಲಿದೆ.

ವನಸ್ತ್ರೀ ಸಂಸ್ಥೆಯ ಸಾಂಪ್ರದಾಯಿಕ ತರಕಾರಿ ಬೀಜ ಸಂರಕ್ಷಕರಿಂದ ನಾಟಿ ತರಕಾರಿ ಬೀಜಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಸೆಲ್ಕೋ ಫೌಂಡೇಶನ್ ವತಿಯಿಂದ ಸೌರಶಕ್ತಿ ಚಾಲಿತ ಆಹಾರ ಸಂಸ್ಕರಣಾ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ತಮ್ಮ ಮನೆಯಲ್ಲಿರುವ ಹಲಸಿನ ವಿವಿಧ ಬಗೆಯ ತಳಿ ಹಾಗೂ ಹಣ್ಣುಗಳನ್ನು ತಂದು ಮಾರಾಟ ಮಾಡಲು ಅವಕಾಶವಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.