ಮನೆ ಬಾಗಿಲು ಮುರಿದು ಅರ್ಧ ಕೆಜಿ ಚಿನ್ನ, ₹20 ಲಕ್ಷ ಕಳವು

| Published : Sep 11 2024, 01:09 AM IST

ಸಾರಾಂಶ

ಮಗಳ ಮದುವೆಗೆ ಕೂಡಿಟ್ಟಿದ್ದ ಅರ್ಧ ಕೆಜಿ ಚಿನ್ನ ಹಾಗೂ 20 ಲಕ್ಷ ರು.ಗಳನ್ನು ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ ಘಟನೆ ಪಟ್ಟಣದ 11ನೇ ವಾರ್ಡಿನ ಚಿನ್ನ ದೊರೆ ಎಂಬುವರ ಮನೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಹನೂರುಮಗಳ ಮದುವೆಗೆ ಕೂಡಿಟ್ಟಿದ್ದ ಅರ್ಧ ಕೆಜಿ ಚಿನ್ನ ಹಾಗೂ 20 ಲಕ್ಷ ರು.ಗಳನ್ನು ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ ಘಟನೆ ಪಟ್ಟಣದ 11ನೇ ವಾರ್ಡಿನ ಚಿನ್ನ ದೊರೆ ಎಂಬುವರ ಮನೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಕಳ್ಳತನವಾದ ಮನೆಯವರು ತಮಿಳುನಾಡಿನ ವಡ್ಡನಛತ್ರ ಗ್ರಾಮಕ್ಕೆ ಕಳೆದ ಐದು ದಿನಗಳ ಹಿಂದೆ ತೆರಳಿದ್ದರು. ತಡರಾತ್ರಿ ವಾಪಸ್ ಬಂದಾಗ 20 ಲಕ್ಷ ರು. ಹಾಗೂ 500 ಗ್ರಾಂ. ಚಿನ್ನಾಭರಣ ಕಳ್ಳತನವಾಗಿರುವುದು ಬೆಳೆಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ಸ್‌ಪೆಕ್ಟರ್ ಶಶಿಕುಮಾರ್, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಸ್ತುತ ಚಿನ್ನ ದೊರೆ ಹಲವಾರು ವರ್ಷಗಳಿಂದ ಪಟ್ಟಣದಲ್ಲಿ ವಾಸವಾಗಿದ್ದು, ಕಂತು ವ್ಯವಹಾರ ಮಾಡುವ ಇವರು ತಮ್ಮ ಮಗಳ ಮದುವೆಗಾಗಿ ತಮಿಳುನಾಡಿನ ವಡ್ಡನ ಛತ್ರ ಗ್ರಾಮದಲ್ಲಿ ಜಮೀನು ಮಾರಾಟ ಮಾಡಿ 500 ಗ್ರಾಂ. ಚಿನ್ನ ಹಾಗೂ 20 ಲಕ್ಷ ರು. ಕೂಡಿಟ್ಟಿದ್ದರು.ಬೆರಳಚ್ಚು ತಜ್ಞರು ಭೇಟಿ: ಪಟ್ಟಣದಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಳ್ಳತನವಾಗಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಬೆರಳಚ್ಚು ತಜ್ಞರು ಭೇಟಿ ನೀಡಿ ಕಳ್ಳತನವಾಗಿರುವ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿದ್ದಾರೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಕಳ್ಳತನವಾಗಿರುವುದರಿಂದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಈ ಮೊದಲು ಪಟ್ಟಣದಲ್ಲಿ ಸಣ್ಣಪುಟ್ಟ ಕಳ್ಳತನಗಳು ನಡೆಯುತ್ತಿದ್ದವು. ತಡರಾತ್ರಿ ನಡೆದಿರುವ ದೊಡ್ಡಮಟ್ಟದ ಕಳ್ಳತನವನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಕಳ್ಳತನವಾದ ಮನೆಗೆ ಎಸ್ಪಿ ಕೆ. ಟಿ. ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆಯ ಚಿನ್ನ ದೊರೆ ಹಾಗೂ ಅವರ ಪತ್ನಿ ಧನಲಕ್ಷ್ಮಿ ಅವರಿಂದ ಮಾಹಿತಿ ಪಡೆದುಕೊಂಡರು. ಸುದ್ದಿಗಾರರೊಂದಿಗೆ ಎಸ್ಪಿ ಕೆ. ಟಿ. ಕವಿತಾ ಮಾತನಾಡಿ, ಕಳ್ಳತನವಾಗಿರುವ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ವಿವಿಧೆಡೆ ಸಿಸಿಟಿವಿ ಇರುವ ಕಡೆ ಪರಿಶೀಲನೆ ನಡೆಸಿ ಮಾಹಿತಿ ಪಡೆಯಲಾಗಿದೆ. ಜಿಲ್ಲಾ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ರಾತ್ರಿ 12.30 ರಿಂದ 2.30ರ ಒಳಗಡೆ ನಡೆದಿರುವ ಕಳ್ಳತನದ ಬಗ್ಗೆ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದರು.

ಶಾಸಕರ ಮನೆಯ ಪಕ್ಕದಲ್ಲಿ ಕಳ್ಳತನವಾಗಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರು, ಹೌದು ಈಗಾಗಲೇ ಪಟ್ಟಣದಲ್ಲಿ ಬೀಟ್ ಪೊಲೀಸರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹೆಚ್ಚಿನ ನಿಗಾವಹಿಸಿ ಗಸ್ತು ತಿರುಗುವಂತೆ ಪೊಲೀಸರಿಗೆ ಸೂಚನೆ ನೀಡಲಾಗುವುದು. ಚಾಮರಾಜನಗರ ಹಾಗೂ ಇನ್ನೂ ಎರಡು ಕಡೆ ನಡೆದ ಕಳ್ಳತನಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದಂತೆ ಗಾಳಿಪುರ ಒಂಟಿ ಮನೆಯ ಕಳ್ಳತನ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪೊಲೀಸ್ ಇನ್ಸ್‌ಪೆಕ್ಟರ್ ಶಶಿಕುಮಾರ್, ಎಸ್‌ಐ ಮಂಜುನಾಥ್, ಪ್ರಸಾದ್, ಸಿಬ್ಬಂದಿ, ಪಪಂ ಮಾಜಿ ಉಪಾಧ್ಯಕ್ಷ ಮಹದೇಶ್ ಉಪಸ್ಥಿತರಿದ್ದರು.