ಅರ್ಧ ಗಂಟೆ ಮಳೆಗೆ ಹಳ್ಳದಂತಾದ ಹಾವೇರಿ

| Published : May 13 2025, 11:48 PM IST

ಸಾರಾಂಶ

ಮಳೆಯಿಂದಾಗಿ ನಗರದ ಹಳೆ ಪಿಬಿ ರಸ್ತೆ, ಹಾನಗಲ್ಲ ರಸ್ತೆಯ ಮೇಲೆಯೇ ಹಳ್ಳದಂತೆ ನೀರು ಹರಿದಿದೆ. ಬಸ್ ನಿಲ್ದಾಣದ ಬಳಿ ಇರುವ ಗೂಗಿಕಟ್ಟಿ ಮಾರುಕಟ್ಟೆಗೂ ನೀರು ನುಗ್ಗಿದೆ.

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದೆ.

ಹಾವೇರಿ, ಹಾನಗಲ್ಲ, ಶಿಗ್ಗಾಂವಿ, ಹಿರೇಕೆರೂರು, ರಾಣಿಬೆನ್ನೂರು, ಬ್ಯಾಡಗಿ, ಸವಣೂರು ರಟ್ಟೀಹಳ್ಳಿ ಭಾಗದ ವಿವಿಧಡೆ ಮಳೆ ಸುರಿದಿದೆ. ಬೆಳಗ್ಗೆಯಿಂದ ಬಿಸಿಲಿನಿಂದ ಕೂಡಿದ್ದ ವಾತಾವರಣ ಮಧ್ಯಾಹ್ನದ ವೇಳೆ ಏಕಾಏಕಿ ಮೋಡ ಕವಿದು ಧಾರಾಕಾರವಾಗಿ ಮಳೆ ಸುರಿಯಿತು. ಮಳೆಯಿಂದಾಗಿ ನಗರದ ಹಳೆ ಪಿಬಿ ರಸ್ತೆ, ಹಾನಗಲ್ಲ ರಸ್ತೆಯ ಮೇಲೆಯೇ ಹಳ್ಳದಂತೆ ನೀರು ಹರಿದಿದೆ. ಬಸ್ ನಿಲ್ದಾಣದ ಬಳಿ ಇರುವ ಗೂಗಿಕಟ್ಟಿ ಮಾರುಕಟ್ಟೆಗೂ ನೀರು ನುಗ್ಗಿದೆ. ಮೊಣಕಾಲು ಎತ್ತರ ನೀರು ಹರಿದಿದ್ದರಿಂದ ಬೈಕುಗಳು ನೀರಿನಲ್ಲಿ ನಿಲ್ಲುವಂತಾಗಿತ್ತು. ತಗ್ಗು ಪ್ರದೇಶದಲ್ಲಿರುವ ಅಂಗಡಿಗಳಿಗೆ ನೀರು ನುಗ್ಗಿದ್ದರಿಂದ ಅವಾಂತರ ಸೃಷ್ಟಿಯಾಯಿತು. ಮಳೆಗಾಲಕ್ಕೂ ಮುನ್ನವೇ ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ನಗರಸಭೆಯವರು ಇತ್ತೀಚೆಗೆ ಎಸ್‌ಪಿ ಕಚೇರಿ ಎದುರು ಎರಡೂ ಬದಿ ಕಾಲುವೆಗಳನ್ನು ಸ್ವಚ್ಛಗೊಳಿಸಿದ್ದರು. ಆದರೂ ಮೊದಲಿನಂತೆಯೇ ರಸ್ತೆಯ ಮೇಲೆ ನೀರು ಹರಿದಿದ್ದು, ವಾಹನ ಸವಾರರು ತೊಂದರೆ ಎದುರಿಸುವಂತಾಯಿತು.

ಇನ್ನು ಬಸ್ ನಿಲ್ದಾಣ ಸಮೀಪದ ಹಾನಗಲ್ಲ ರಸ್ತೆಯಲ್ಲಿ ಸಹ ಮಳೆನೀರು ಕೆರೆಯಂತೆ ಹರಿಯಿತು. ಇದರ ಮಧ್ಯೆಯೇ ವಾಹನ ಸವಾರರು ತಮ್ಮ ವಾಹನಗಳನ್ನು ಚಲಾಯಿಸಿಕೊಂಡು ಹೋಗುವ ಪರಿಸ್ಥಿತಿ ಎದುರಾಯಿತು. ಸುಮಾರು ಅರ್ಧ ಗಂಟೆ ಕಾಲ ವಾಹನ ಸವಾರರು ಪರದಾಡುವಂತಾಯಿತು. ಮಳೆಯಿಂದ ನಗರ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು.

ಒಂದೇ ದಿನ ಸಿಡಿಲಿಗೆ ಮೂವರು ಬಲಿಜಿಲ್ಲೆಯಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ. ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದ ಯುವಕ ಸುನೀಲ ಕಾಳೇರ(29) ಹಾಗೂ ಹಾನಗಲ್ಲ ತಾಲೂಕಿನ ಕೊಂಡೋಜಿ ಗ್ರಾಮದ ವೃದ್ಧೆ ಮರಿಯಮ್ಮ ನಾಯ್ಕರ್(60) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹಿರೇಕೆರೂರು ತಾಲೂಕಿನ ಡಮ್ಮಳ್ಳಿ ಗ್ರಾಮದ ನಾಗಪ್ಪ ಕಣಸೋಗಿ ಎಂಬವರೂ ಸೋಮವಾರ ಸಿಡಿಲು ಬಡಿದು ಮೃತಪಟ್ಟಿದ್ದರು.

ಈಜಲು ತೆರಳಿದ್ದ ಇಬ್ಬರು ನೀರುಪಾಲು

ಹಾನಗಲ್ಲ: ಈಜಾಡಲು ತೆರಳಿದ್ದ ಮಾವ- ಅಳಿಯರಿಬ್ಬರೂ ನೀರುಪಾಲಾಗಿರುವ ಘಟನೆ ಮಂಗಳವಾರ ಮಧ್ಯಾಹ್ನ ಚಿಕ್ಕಾಂಶಿ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಮಂಜಪ್ಪ ಬಡಕಣ್ಣನವರ (38) ಹಾಗೂ ಮಾಲತೇಶ ಪ್ರಶಾಂತ ಕುರುಬರ (17) ನೀರುಪಾಲಾದವರು.ಮಾವ ಅಳಿಯ ಇಬ್ಬರೂ ಚಿಕ್ಕಾಂಶಿಯ ಕೆರೆಯಲ್ಲಿ ಈಜಲು ತೆರಳಿದ್ದರು. ಆದರೆ ಕೆರೆಯ ಮಧ್ಯದಲ್ಲಿ ಮಾಲತೇಶ ಮುಳುಗುತ್ತಿದ್ದರಿಂದ ಬಸವರಾಜ ಅವನನ್ನು ಹೊರತರಲು ಪ್ರಯತ್ನಿಸಿದ್ದಾನೆ. ಆದರೆ ಆತನೂ ಹೊರಬರಲಾರದೇ ನೀರಲ್ಲಿ ಸಿಲುಕಿ ಸಾವಿಗೀಡಾಗಿದ್ದಾರೆ.

ಹಾನಗಲ್ಲಿನ ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ಮೂರ‍್ನಾಲು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮಾಲತೇಶನ ಶವವನ್ನು ಹೊರತೆಗೆದಿದ್ದಾರೆ. ಮಾಲತೇಶ ಕುರುಬರ ಪಿಯುಸಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಾನೆಂದು ತಿಳಿದುಬಂದಿದೆ. ಇನ್ನೊರ್ವ ಮೃತ ಬಸವರಾಜನ ಶವಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.